ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಮುಖವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲ್ವಿಚಾರಣೆ ಬದಲು ಇಲಾಖಾ ಆಯುಕ್ತರ ಕಚೇರಿ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರೌಢ ಶಿಕ್ಷಣ ನಿರ್ದೇಶಕರನ್ನು ಹಾಗೂ ಕಲಬುರಗಿ ಮತ್ತು ಧಾರವಾಡ ವಿಭಾಗಗಳಿಗೆ ಆಯಾ ಅಪರ ಆಯುಕ್ತರ ಕಚೇರಿ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆ ಕೋರಿ ಸೇರಿ ಯಾವುದೇ ಪರೀಕ್ಷಾ ಅಕ್ರಮಗಳು ಗಮನಕ್ಕೆ ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ದೂರು ದಾಖಲಿಸಬೇಕು ಎಂದು ಇಲಾಖೆ ಆಯುಕ್ತ ವಿಕಾಸ್ ಕುಮಾರ್ ಸುರಳ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
9 ಗಂಟೆಗೇ ಶಾಲೆ ಆರಂಭಿಸಬೇಕು:ಅಲ್ಲದೆ, ಪರೀಕ್ಷಾ ದಿನಗಳಲ್ಲೂ ಬೆಳಗ್ಗೆ 9 ಗಂಟೆಗೆ ಶಾಲೆ ಆರಂಭಿಸಬೇಕು. ಮಕ್ಕಳು ಕಡ್ಡಾಯವಾಗಿ ಹಾಜರಿರಬೇಕು. ಪರೀಕ್ಷೆಯನ್ನು ಬೆಳಗ್ಗೆ 10ರ ಬದಲು 11 ಗಂಟೆಗೆ ಆರಂಭಿಸಲು ಸೂಚಿಸಲಾಗಿದೆ. ಪ್ರಾಂಶುಪಾಲರು ಪ್ರಶ್ನೆ ಪತ್ರಿಕೆಯನ್ನು ಶಾಲಾ ಲಾಗಿನ್‌ನಿಂದ 9.30ಕ್ಕೆ ಡೌನ್‌ಲೋಡ್ ಮಾಡಬೇಕು. ನಂತರ ಮುದ್ರಣ, ಪ್ಯಾಕಿಂಗ್ ಹಾಗೂ ಪರೀಕ್ಷಾ ಕೊಠಡಿಗೆ ರವಾನಿಸುವುದು ಸೇರಿ ಇಡೀ ಪ್ರಕ್ರಿಯೆಯನ್ನು 10.50ರೊಳಗೆ ಅಂದರೆ 1.20 ಗಂಟೆಯಲ್ಲಿ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಟೈಮ್‌ಲೈನ್ ನಿಗದಿಪಡಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ಮೊಬೈಲ್, ಪುಸ್ತಕ, ಗೈಡ್ ತರುವಂತಿಲ್ಲ. ಯಾವುದೇ ಕಿಡಿಗೇಡಿಗಳು ಪರೀಕ್ಷೆ ಆರಂಭಕ್ಕೆ ಮುನ್ನ ಯಾವುದೇ ಪ್ರಶ್ನೆ ಪತ್ರಿಕೆ ನೀಡಿದರೆ ಸ್ವೀಕರಿಸಬಾರದು ಹಾಗೂ ಹರಿಬಿಡಬಾರದು ಎಂದು ಸೂಚಿಸಿದೆ.
ಅಕ್ರಮ ನಡೆದರೆ ಕ್ರಮವೇನು?ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ಯಾವುದೇ ಅಕ್ರಮಗಳು ನಡೆದರೂ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್‌ಆ್ಯಪ್/ ಯೂಟ್ಯೂಬ್/ ಇನ್‌ಸ್ಟಾಗ್ರಾಂ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಬಹಿರಂಗ ಅಥವಾ ಪ್ರಸಾರ ಮಾಡಿದಲ್ಲಿ ವಿದ್ಯಾರ್ಥಿಗಳ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು. ಅನುದಾನಿತ ಶಾಲೆಗಳು ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಕಾರಣವಾದರೆ ಕಾಲೇಜಿನ ಅನುದಾನ ಹಿಂಪಡೆಯಲು, ಮಾನ್ಯತೆಯನ್ನು ಶಾಶ್ವತವಾಗಿ ರದ್ದುಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.