ಲಿಂಗರಾಜು ಕೋರಾಕನ್ನಡಪ್ರಭ ವಾರ್ತೆ ಬೆಂಗಳೂರು
ಸುಮಾರು 17 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದರೂ ಈವರೆಗೆ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಶಾಲೆಗಳ ಸಂಖ್ಯೆ 7000 ದಾಟಿಲ್ಲ. ಅಷ್ಟೇ ಅಲ್ಲ, ಅರ್ಜಿ ಸಲ್ಲಿಸಿರುವ ಶಾಲೆಗಳ ಪೈಕಿ ಮಾನ್ಯತೆ ನವೀಕರಣ ಪಡೆದಿರುವುದು ಕೇವಲ 800 ಶಾಲೆಗಳು ಮಾತ್ರ. ಇನ್ನು 2700ಕ್ಕೂ ಹೆಚ್ಚು ಶಾಲೆಗಳ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಇನ್ನುಳಿದ 3200ಕ್ಕೂ ಹೆಚ್ಚು ಶಾಲೆಗಳ ಅರ್ಜಿಗಳು ಅಧಿಕಾರಿಗಳ ಲಾಗಿನ್‌ನಲ್ಲಿ ಪರಿಶೀಲನೆಯಲ್ಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಆಸಕ್ತಿ ತೋರದ ಶಾಲೆಗಳು:ಶಿಕ್ಷಣ ಇಲಾಖೆಯ ಸ್ಟೂಡೆಂಟ್ಸ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ (ಎಸ್‌ಎಟಿಎಸ್) ತಂತ್ರಾಂಶ ಮೂಲಕ ಹೊಸ ಖಾಸಗಿ ಶಾಲೆಗಳು ಮಾನ್ಯತೆ ಪಡೆಯಲು, ಹಳೆಯ ಶಾಲೆಗಳು ತಮ್ಮ ಮಾನ್ಯತೆ ನವೀಕರಿಸಿಕೊಳ್ಳಲು ಆನ್‌ಲೈನ್ ಮೂಲಕವೇ ಪ್ರತೀ ವರ್ಷ ಅರ್ಜಿ ಸಲ್ಲಿಸಬೇಕು. ಇಲಾಖೆ ಈಗಾಗಲೇ ಮಾನ್ಯತೆ/ನವೀಕರಣಕ್ಕೆ ಅರ್ಜಿ ಸಲ್ಲಿಸಲು ಮೂರು ಬಾರಿ ಕಾಲಾವಕಾಶ ವಿಸ್ತರಿಸಿದೆ. ಅರ್ಜಿ ಸಲ್ಲಿಸಲು ಜ.12ರವರೆಗೆ ಇದ್ದ ಕೊನೆಯ ದಿನಾಂಕವನ್ನು ಈಗ ಫೆ.16ರವರೆಗೆ ವಿಸ್ತರಿಸಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ಮಾ.23ರವರೆಗೆ ಅವಕಾಶ ನೀಡಿದೆ. ಆದರೂ, ಸುಮಾರು ಸಾವಿರಾರು ಖಾಸಗಿ ಶಾಲೆಗಳು ಮಾನ್ಯತೆ/ನವೀಕರಣಕ್ಕೆ ಇನ್ನೂ ಅರ್ಜಿ ಸಲ್ಲಿಸದಿರುವುದು ಕಂಡುಬಂದಿದೆ.
ಮಾಹಿತಿ ಪ್ರಕಾರ, ಸುಮಾರು ಆರೇಳು ಸಾವಿರ ಶಾಲೆಗಳು ಇನ್ನೂ ಅರ್ಜಿ ಸಲ್ಲಿಸಿಲ್ಲ. ಕಾರಣ ಮಾನ್ಯತೆ ನವೀಕರಣಕ್ಕೆ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ, ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲಾ ಜಾಗ ಭೂ ಪರಿವರ್ತನೆಯಂತಹ ಕೆಲ ಕಠಿಣ ಮಾನದಂಡಗಳನ್ನು ಪಾಲಿಸಬೇಕಿದೆ. ಈ ಮಾನದಂಡಗಳ ಪಾಲನೆ ಹಳೆಯ ಶಾಲೆಗಳಿಗೆ ಸಾಧ್ಯವಿಲ್ಲ ಎನ್ನುವುದು ಹಾಗೂ ಸರ್ಕಾರಿ ಶಾಲೆಗಳಿಗೆ ಅನ್ವಯಿಸದ ಮಾನದಂಡಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಸರ್ಕಾರ ನಿಗದಿಪಡಿಸಿರುವುದೇಕೆ? ಇವುಗಳನ್ನು ನಮಗೂ ಸರಳೀಕರಿಸಬೇಕು ಅಥವಾ ವಿನಾಯಿತಿ ನೀಡಬೇಕು ಎನ್ನುವುದು ಅವುಗಳ ಆಗ್ರಹ.ಈ ಹಿನ್ನೆಲೆಯಲ್ಲಿ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಅಗತ್ಯ ಶಿಫಾರಸುಗಳನ್ನು ನೀಡಲು ಸರ್ಕಾರ ಸದನ ಸಮಿತಿ ರಚಿಸಿದೆ. ಸಮಿತಿ ವರದಿ ನೀಡಿ ಸರ್ಕಾರ ಮಾನದಂಡಗಳನ್ನು ಸರಳೀಕರಿಸುವ ಪ್ರಕ್ರಿಯೆ ಆಗಬೇಕಿದೆ. ಮತ್ತೊಂದೆಡೆ ಕಠಿಣ ಮಾನದಂಡಗಳನ್ನು ಪ್ರಶ್ನಿಸಿ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿರುವುದು. ಅಂತಿಮ ಆದೇಶ ಏನು ಬರುತ್ತದೆ ಎಂದು ಶಾಲಾ ಆಡಳಿತ ಮಂಡಳಿಗಳು ಕಾದು ನೋಡುತ್ತಿವೆ. ಈ ಎಲ್ಲಾ ಕಾರಣಗಳಿಂದ 2025-26ನೇ ಸಾಲಿನ ಮಾನ್ಯತೆ ನವೀಕರಣ ಪತ್ರ ಪಡೆದ ಶಾಲೆಗಳ ಸಂಖ್ಯೆ 1000 ಕೂಡ ದಾಟಿಲ್ಲ ಎನ್ನಲಾಗಿದೆ.
ಈ ಮಧ್ಯೆ, ಮಾನ್ಯತೆ ನವೀಕರಣ ಪ್ರಕ್ರಿಯೆ ಮುಗಿಯುವ ಮೊದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಮಾನ್ಯತೆ ಇಲ್ಲದ ಶಾಲೆಗಳು ಅನಧಿಕೃತವಾಗುತ್ತವೆ, ನಿಯಮಾವಳಿ ಪ್ರಕಾರ ಆ ಶಾಲೆಗಳ ಮಕ್ಕಳನ್ನು ಪರೀಕ್ಷೆಗೆ ನೋಂದಾಯಿಸಲು ಬರುವುದಿಲ್ಲ. ಇದರಿಂದ ಶಾಲೆಗಳು ಅಡಕತ್ತರಿಯಲ್ಲಿ ಸಿಲುಕಿವೆ.-------
ಕೋಟ್ಮಾನ್ಯತೆ ನವೀಕರಣಕ್ಕೆ ಸರ್ಕಾರ ನಿಗದಿಪಡಿಸಿರುವ ಕೆಲ ಕಠಿಣ ಮಾನದಂಡಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಪ್ರಶ್ನಿಸಿ ನಮ್ಮ ಸಂಘಟನೆ ಕಾನೂನು ಹೋರಾಟ ನಡೆಸುತ್ತಿದೆ. ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥವಾಗಬೇಕು. ಮತ್ತೊಂದೆಡೆ ಮಾನ್ಯತೆ/ನವೀಕರಣ ಸಮಸ್ಯೆಗಳ ಪರಿಹಾರಕ್ಕೆ ಸದನ ಸಮಿತಿ ರಚಿಸಲಾಗಿದೆ. ಸರ್ಕಾರ ಮಾನ್ಯತೆ ನವೀಕರಣ ಪ್ರಕ್ರಿಯೆ ಇನ್ನುಷ್ಟು ಸರಳೀಕರಿಸುವ ಭರವಸೆ ನೀಡಿದೆ. ಮೂರು ಬಾರಿ ಅರ್ಜಿ ತಿರಸ್ಕಾರಗೊಂಡರೆ ಶುಲ್ಕವೂ ವಾಪಸ್ ಬರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಕಾದು ನೋಡುವಂತೆ ಕ್ಯಾಮ್ಸ್ ಸದಸ್ಯ ಶಾಲೆಗಳಿಗೆ ಸಲಹೆ ನೀಡಲಾಗಿದೆ.
- ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಬಾಕ್ಸ್2000 ಶಾಲೆಗಳಿಗೆ 3 ವರ್ಷದಿಂದ ನವೀಕರಣ ಬಾಕಿ
ರಾಜ್ಯದಲ್ಲಿ ಸುಮಾರು 1500ರಿಂದ 2000 ಶಾಲೆಗಳಿಗೆ ಕಳೆದ ಎರಡು ಮೂರು ವರ್ಷಗಳಿಂದ ಸರ್ಕಾರದ ಮಾನ್ಯತೆ ನವೀಕರಣ ಬಾಕಿ ಇದೆ. ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಮೂರು ಬಾರಿ ಕಾಲಾವಕಾಶ ವಿಸ್ತರಿಸಿದರೂ, ನವೀಕರಣ ಬಾಕಿ ಇರುವ ಶಾಲೆಗಳಿಗೆ ಒಮ್ಮೆಯು ಅವಕಾಶವನ್ನೇ ಮಾಡಿಕೊಟ್ಟಿಲ್ಲ. ಮನವಿ ಕೊಟ್ಟರೂ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಹೀಗಾದರೆ ಆ ಶಾಲೆಗಳ ಹಾಗೂ ಅವುಗಳಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯ ಏನು ಎನ್ನುವುದನ್ನಾದರೂ ಶಿಕ್ಷಣ ಸಚಿವರು ಸ್ಪಷ್ಟಪಡಿಸಿಲಿ ಎಂದು ಅವರ್ ಸ್ಕೂಲ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್ ಆಗ್ರಹಿಸಿದ್ದಾರೆ.