ಬಿಜೆಪಿ- ಜೆಡಿಎಸ್‌ನವರು ನಡೆಸುತ್ತಿರುವುದು ‘ಡ್ರಾಮ ಕಂಪನಿ ಪಾದಯಾತ್ರೆ’

KannadaprabhaNewsNetwork | Published : Aug 5, 2024 12:33 AM

ಸಾರಾಂಶ

ಮೊನ್ನೆ ಕೇಂದ್ರ ಸಚಿವ ಕುಮಾರಣ್ಣ ಸಿಡಿ ಬಿಟ್ರು, ಪೆನ್‌ಡ್ರೈ ಬಿಟ್ರು ನಾನು ಪಾದಯಾತ್ರೆ ಬರಲ್ಲ ಅಂತ ಬಿಜೆಪಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈಗ ಅವರನ್ನೇ ಕರೆದುಕೊಂಡು ಹೊರಟಿದ್ದಾರೆ. ಇವರಿಗೆ ಯಾವುದೇ ನಿಲುವಿಲ್ಲ. ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಇವರು ಮುಖ್ಯಮಂತ್ರಿ ಆಗಬೇಕು ಅನ್ನೋ ಹಪಾಹಪಿ ಅಷ್ಟೇ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ನಾಯಕರು ರಾಜ ಭವನವನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಗಂಭೀರ ಆರೋಪ ಮಾಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ರಾಜ್ಯಪಾಲರು ಪತ್ರ ಬರೆಯುತ್ತಿಲ್ಲ. ಬದಲಾಗಿ ರಾಜ್ಯಪಾಲರ ಹೆಸರಿನಲ್ಲಿ ಬಿಜೆಪಿ ವಕ್ತಾರರು, ಮಾಸ್ಟರ್ ಮೈಂಡ್‌ಗಳ ಪತ್ರಕ್ಕೆ ರಾಜ್ಯಪಾಲರು ಸಹಿ ಹಾಕುತ್ತಿದ್ದಾರೆ ಎಂದು ದೂರಿದರು.

ಮುಡಾ ಹಗರಣವನ್ನು ಬಿಜೆಪಿಯವರೇ ಮಾಡಿದ್ದಾರೆ. ಈಗ ಸಿಎಂರನ್ನು ಸಿಗಿಸಲು ನೋಡುತ್ತಿದ್ದಾರೆ. ಸಿದ್ದರಾಮಯ್ಯ ಶುದ್ಧ ಹಸ್ತರು. ಸಿಎಂ ಪತ್ನಿ ಜಾಗದಲ್ಲಿ ವಿನಾಕಾರಣ ಮುಡಾದವರೆ ಅಕ್ವೆರ್ ಮಾಡಿ ಈಗ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿಎಂ ಪತ್ನಿ ಮುಡಾದವರ ಮೇಲೆ 420 ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ- ಜೆಡಿಎಸ್‌ನ ಪಾದಯಾತ್ರೆ ದೊಂಬರಾಟವಾಗಿದೆ. ಇದರ ವಿರುದ್ಧ ನಾವು ಜನಾಂದೋಲನ ಆಯೋಜಿಸಿದ್ದೇವೆ. ಮಂಡ್ಯದಲ್ಲಿ ಆ.4ರಂದು ಸಮಾವೇಶ ಮಾಡುತ್ತಿದ್ದೇವೆ. ಸಿಎಂ, ಡಿಸಿಎಂ ಸೇರಿದಂತೆ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ಕೊಟ್ಟು ಆಡಳಿತ ಮಾಡಲು ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಕೊಳ್ಳೆ ಹೊಡೆದ ಬಿಜೆಪಿ- ಜೆಡಿಎಸ್ ಅವರನ್ನು ಮನೇಲಿ ಕೂರಿಸಿದ್ದಾರೆ. ಇವರ ನಾಟಕಕ್ಕೆ ಪುಲಿಸ್ಟಾಪ್ ಹಾಕಬೇಕಿದೆ ಎಂದರು.

ಮೊನ್ನೆ ಕೇಂದ್ರ ಸಚಿವ ಕುಮಾರಣ್ಣ ಸಿಡಿ ಬಿಟ್ರು, ಪೆನ್‌ಡ್ರೈ ಬಿಟ್ರು ನಾನು ಪಾದಯಾತ್ರೆ ಬರಲ್ಲ ಅಂತ ಬಿಜೆಪಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈಗ ಅವರನ್ನೇ ಕರೆದುಕೊಂಡು ಹೊರಟಿದ್ದಾರೆ. ಇವರಿಗೆ ಯಾವುದೇ ನಿಲುವಿಲ್ಲ. ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಇವರು ಮುಖ್ಯಮಂತ್ರಿ ಆಗಬೇಕು ಅನ್ನೋ ಹಪಾಹಪಿ ಅಷ್ಟೇ ಎಂದು ಕಿಡಿಕಾರಿದರು.

ಬಿಜೆಪಿ- ಜೆಡಿಎಸ್ ನಾಯಕರಲ್ಲಿ ಗೊಂದಲವಿದೆ. ನಾಯಕತ್ವಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಬೆಳೆಯುತ್ತಾರೆ ಅಂತ ಜೆಡಿಎಸ್‌ನವರು, ಜೆಡಿಎಸ್‌ನವರು ಬೆಳೆಯುತ್ತಾರೆ ಅಂತ ಬಿಜೆಪಿಯವರು ಗೊಂದಲದಲ್ಲಿದ್ದಾರೆ. ಅವರದು ಒಂದು ಡ್ರಾಮ ಕಂಪನಿ. ಪಾದಯಾತ್ರೆ ಮೂಲಕ ಬರ್ತಿರುವ ಡ್ರಾಮ ಕಂಪನಿಗೆ ಉತ್ತರ ಕೊಡಲೆಂದೇ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ ಎಂದರು.

ಮೂಡ ಹಗರಣದಲ್ಲಿ ತನಿಖೆ ಆಗಲಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಜೈಲೂಟ ಗ್ಯಾರಂಟಿ. ಆದರೆ, ಕೇರಳದ ವಯನಾಡಿನಲ್ಲಿ ದುರಂತ ಸಂಬಂವಿಸಿದೆ. ಈ ಸಂದರ್ಭದಲ್ಲಿ ಮನುಷ್ಯತ್ವ ಇರೋರು ಪಾದಯಾತ್ರೆ ಮಾಡಲ್ಲ ಎಂದು ಹೇಳಿದರು. ಈ ವೇಳೆ ಮುಡಾ ಅಧ್ಯಕ್ಷ ನಯಿಂ ಇದ್ದರು.

Share this article