ಸಮಾನತೆ ಸಾಧಿಸಲು ಎಲ್ಲರಿಗೂ ಶಿಕ್ಷಣ ಅಗತ್ಯ

KannadaprabhaNewsNetwork | Published : Nov 7, 2024 12:01 AM

ಸಾರಾಂಶ

ಜಾತಿವ್ಯವಸ್ಥೆಯಿಂದ ಸಮಾಜದಲ್ಲಿ ವೈರುಧ್ಯತೆ , ಅಸಮಾನತೆಯಿದೆ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯ. ಬುದ್ಧ, ಬಸವಾದಿ ಶರಣರು, ಮಹಾತ್ಮ ಗಾಂಧೀಜಿಯವರ ಸಮಾನ ಸಮಾಜದ ಕನಸು ಈಡೇರಬೇಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಸಮಾನತೆಯನ್ನು ಹೋಗಲಾಡಿಸಿ , ಸಮಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆದ ವಿದ್ಯಾವಂತರು ಮಾನವೀಯತೆಯ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಪ್ರದೀಪ್ಈಶ್ವರ್ ತಿಳಿಸಿದರು.

ನಗರದ ಸೆಂಟ್ ಜೋಸೆಫ್ಸ್ ಕಾನ್ವೆಂಟ್‌ನಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರಲು ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಎಂದರು.

ಉಚಿತ ಶಿಕ್ಷಣ ಸೌಲಭ್ಯ

ಹಿಂದೆ ನಮ್ಮ ಸಮಾಜದಲ್ಲಿ, ಶೋಷಿತ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಅಂಬೇಡ್ಕರ್ ರವರ ಪರಿಶ್ರಮದಿಂದ ಅವರಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡಲಾಗುತ್ತಿತ್ತು. ಶೋಷಿತವರ್ಗದವರಿಗೆ ನ್ಯಾಯ ಒದಗಿಸಿ ಸಮಸಮಾಜ ನಿರ್ಮಿಸಬೇಕೆಂಬ ಗುರಿಯೊಂದಿಗೆ ಅಂಬೇಡ್ಕರ್ ರವರು ಹೋರಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಭಾರತ ಕಂಡ ಮಹಾನ್ ಮೇಧಾವಿ ಎಂದರು.ಜಾತಿವ್ಯವಸ್ಥೆಯಿಂದ ಸಮಾಜದಲ್ಲಿ ವೈರುಧ್ಯತೆ , ಅಸಮಾನತೆಯಿದೆ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯ. ಬುದ್ಧ, ಬಸವಾದಿ ಶರಣರು, ಮಹಾತ್ಮ ಗಾಂಧೀಜಿಯವರ ಸಮಾನ ಸಮಾಜದ ಕನಸು ಈಡೇರಬೇಕಿದೆ. ಅಸಮಾನತೆಯ ನಿರ್ಮೂಲನೆಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು.ಕಲಿಕೆಗೆ ಪ್ರೇರಕ ಪ್ರತಿಭಾ ಕಾರಂಜಿ

ಪ್ರತಿಭಾ ಕಾರಂಜಿಯು ಮಕ್ಕಳ ಮುಂದಿನ ಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಪೂರಕವಾಗುತ್ತದೆ. ಅಷ್ಟೇ ಅಲ್ಲ ವರ್ಷಂಪ್ರತಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಕಾರಂಜಿ ಹೆಸರಿನಲ್ಲಿ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಮಕ್ಕಳಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶ.ಇದರಲ್ಲಿ ಹಲವಾರು ವಿದದ ಸ್ಪರ್ಧೆಗಳಿರುತ್ತವೆ. ಮಕ್ಕಳು ತಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಭಾಗವಹಿಸುವ ಅವಕಾಶವಿರುತ್ತದೆ ಎಂದರು.

ಮಕ್ಕಳಿಂದ ಪ್ರತಿಭಾ ಪ್ರದರ್ಶನ

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗಾಯನ, ನೃತ್ಯ , ಏಕಪಾತ್ರಾಭಿನಯ, ನಾಟಕ, ಚರ್ಚಾ ಸ್ಪರ್ಧೆ, ಜಾನಪದ ನೃತ್ಯ, ಭಾವಗೀತೆ, ,ಪ್ರಬಂಧ ಸ್ಪರ್ಧೆ, ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಗಂಗರೇ ಕಾಲುವೆ ನಾರಾಯಣಸ್ವಾಮಿ,ಪೆರೇಸಂದ್ರ ಮಾಸ್ಟರ್ ವಿಷನ್ ಶಾಲೆಯ ಅಧ್ಯಕ್ಷ ನಾಗಭೋಷನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಸುನೀಲ್, ಮುಖಂಡರಾದ ಎಸ್.ಪಿ.ಶ್ರೀನಿವಾಸ್, ರವಿಕುಮಾರ್, ಪೆದ್ದಣ್ಣ, ವಿನಯ್ ಬಂಗಾರಿ, ಷಾಹೀದ್, ಎಲ್ಲಾ ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು,ಪೋಷಕರು, ಮತ್ತಿತರರು ಇದ್ದರು.

Share this article