ಘಟನೆಯಿಂದ ಕಾಡಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ
ಕನ್ನಡಪ್ರಭ ವಾರ್ತೆ ಸರಗೂರು
ಆಹಾರ ಅರಸಿ ಕಾಡಿನಿಂದ ಹೊರ ಬಂದ ಕಾಡಾನೆ ದಾಳಿಗೆ ಬಹಿರ್ದೆಸೆಗೆ ತೆರಳಿದ್ದ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಗುರುವಾರ ಬೆಳಗ್ಗೆ ತಾಲೂಕಿನ ಬಿ. ಮಟಕೆರೆ ಎಸ್ಟಿ ಕಾಲೊನಿ ಹಾಡಿಯಲ್ಲಿ ನಡೆದಿದೆ.ಈ ಘಟನೆಯಿಂದ ಕಾಡಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆ ದಾಳಿಗೆ ಬಲಿಯಾದವರು ಬಿ. ಮಟಕೆರೆ ಎಸ್ಟಿ ಕಾಲೊನಿ ಹಾಡಿ ನಿವಾಸಿ ರೈತ ಮಾದ (70). ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.ಘಟನೆ ವಿವರ
ಮೃತ ಮಾದ ಅವರು ಪ್ರತಿದಿನ ರಾತ್ರಿ ಹಾಡಿ ಸಮೀಪದ ವಾಟರ್ ಟ್ಯಾಂಕ್ ಬಳಿ ಮಲಗುತ್ತಿದ್ದರು. ಎಂದಿನಂತೆ ಬುಧವಾರ ರಾತ್ರಿ ಕೂಡ ಅಲ್ಲೇ ಮಲಗಿದ್ದ ಅವರು ಗುರುವಾರ ಬೆಳಗ್ಗೆ ಸುಮಾರು 5.30ರ ವೇಳೆಗೆ ಬಹಿರ್ದೆಸೆಗೆ ತೆರಳಿದ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಸಿಲುಕಿದ್ದಾರೆ. ದಾಳಿಯ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನೆ ನಡೆದ ಸುಮಾರು ಒಂದು ತಾಸಿನ ಬಳಿಕ ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಮೃತದೇಹವನ್ನು ಕಂಡು ವಿಷಯವನ್ನು ಹಾಡಿ ನಿವಾಸಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಖಚಿತಪಡಿಸಿಕೊಂಡ ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಮೃತರ ಸಂಬಂಧಿಕರು ಹಾಗೂ ನಿವಾಸಿಗಳ ಆಕ್ರಂದನ ಮುಗಿಲು ಮುಟ್ಟಿತು.
ಮೃತ ದೇಹವನ್ನು ಸರಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಬಿ. ಮಟಕೆರೆ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಡಾನೆ ಸಂಚಾರ
ಮಂಗಳವಾರ ರಾತ್ರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ಅರಣ್ಯ ವಲಯದಿಂದ ಆಹಾರ ಅರಸಿ ಹೊರ ಬಂದ ಆನೆ ಹಳೇ ಹೆಗ್ಗುಡಿಲು, ಹಳೆಯೂರು, ಬೆದ್ದಲಪುರ, ದಡದಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಹಂಚೀಪುರ ಗ್ರಾಮದ ಕೆರೆಯ ಬಳಿಯ ಪೊದೆಯಲ್ಲಿ ತಂಗಿತ್ತು.ಬುಧವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಮತ್ತೆ ಕಾಡಿಗೆ ಓಡಿಸಲು ಯತ್ನಿಸಿದ್ದು, ಆನೆ ಮಸಹಳ್ಳಿ–ದೇವಲಾಪುರ ಮಾರ್ಗವಾಗಿ ಕಲ್ಲಹಳ್ಳಿ ಸಮೀಪದ ಮೊಳೆಯೂರು ಕಾಡಿನೊಳಗೆ ತೆರಳಿತ್ತು. ಇದರಿಂದ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದ್ದರು.
ಆದರೆ ಮತ್ತೆ ಕಾಡಿನಿಂದ ಹೊರ ಬಂದ ಆನೆ ವಲ್ಲಹಳ್ಳಿ ರಸ್ತೆ ಮಾರ್ಗವಾಗಿ ಬಿ. ಮಟಕೆರೆ ಎಸ್ಟಿ ಹಾಡಿ ಕಾಲೊನಿ ನೀರಿನ ಟ್ಯಾಂಕ್ ಬಳಿ ಸಂಚರಿಸುವ ವೇಳೆ ಗುರುವಾರ ಬೆಳಗ್ಗೆ ಮಾದ ಅವರ ಮೇಲೆ ದಾಳಿ ನಡೆಸಿದೆ.ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಘಟನೆ ಬಳಿಕ ಸ್ಥಳಕ್ಕೆ ಜಮಾಯಿಸಿದ ರೈತರು ಹಾಗೂ ಗ್ರಾಮಸ್ಥರು ಕಾಡಂಚಿನ ಗ್ರಾಮಗಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಮೀನಿನಲ್ಲಿ ಜೀವ ಹಿಡಿದು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರಿಹಾರ ಹಾಗೂ ಭರವಸೆ
ಸ್ಥಳಕ್ಕೆ ಆಗಮಿಸಿದ ಸಿಎಫ್ಎಸ್ ಪ್ರಭಾಕರನ್ ಅವರು ಇಲಾಖೆಯ ವತಿಯಿಂದ ಮೃತರ ಕುಟುಂಬಕ್ಕೆ ಸರ್ಕಾರದ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಜೊತೆಗೆ ಮೃತರ ಪತ್ನಿಗೆ ಐದು ವರ್ಷಗಳವರೆಗೆ ಮಾಸಿಕ 4 ಸಾವಿರ ವೇತನ ನೀಡಲಾಗುವುದು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗದಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಪಿಪಿಟಿ ಎತ್ತುವ ಕಾರ್ಯ ಆರಂಭಿಸಲಾಗಿದ್ದು, ಇದರಿಂದ ಹಾವಳಿ ತಡೆಗೆ ಸಹಕಾರಿಯಾಗಲಿದೆ ಎಂದರು.
ಯಡಿಯಾಲ ಎಸಿಎಫ್ ಡಿ. ಪರಮೇಶ್, ಮೊಳೆಯೂರು ಆರ್ಎಫ್ಒ ನಾರಾಯಣ್, ಯಡಿಯಾಲ ಕೃಷ್ಣ, ನುಗು ಅನಿತ್ ರಾಜ್, ಡಾ. ಎಸ್.ಎಲ್. ಲೋಕೇಶ್, ಪಿಎಸ್ಐ ಕಿರಣ್, ಅಪರಾಧ ಪಿಎಸ್ಐ ಗೋಪಾಲ್ ಸೇರಿದಂತೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಸಿಆರ್ಪಿ–ಕೆಎಸ್ಆರ್ಪಿ ತುಕಡಿಗಳು ಸ್ಥಳದಲ್ಲಿ ಹಾಜರಿದ್ದರು.ಶಾಸಕ ಅನಿಲ್ ಚಿಕ್ಕಮಾದು ಪ್ರತಿಕ್ರಿಯೆ
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಕಾಡುಪ್ರಾಣಿ–ಮಾನವ ಸಂಘರ್ಷ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂಥ ದುರ್ಘಟನೆ ಮರುಕಳಿಸದಂತೆ ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನು ಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಆನೆ ಕಂದಕಗಳಲ್ಲಿ ಹೂಳು ತೆಗೆಯುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಧಾನಸಭೆ ಅಧಿವೇಶನದ ಬಳಿಕ ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಾಗುವುದು ಎಂದು ಹೇಳಿದರು.