ಮಡಿಕೇರಿ: ಕೆದಮುಳ್ಳೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ 43 ಮನೆಗಳ ಬೀಗದ ಕೀಯನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಆದಿವಾಸಿ ಯರವ ಮತ್ತಿತರ ಕುಟುಂಬಗಳಿಗೆ ಶುಕ್ರವಾರ ನೀಡುವ ಮೂಲಕ ಹಸ್ತಾಂತರಿಸಿದರು. ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ 7.50 ಎಕರೆ ಜಾಗದ ಬಡಾವಣೆಯಲ್ಲಿ ನಿರ್ಮಿಸಿರುವ ಮನೆಗಳು ಹಾಗೂ ಮೂಲ ಸೌಕರ್ಯ ಕಾಮಗಾರಿ ಉದ್ಘಾಟಿಸಿ, ಶಾಸಕರು ಮಾತನಾಡಿದರು. ಪರಿಶಿಷ್ಟ ಪಂಗಡದ ಆದಿವಾಸಿ ಯರವ, ಜೇನು ಕುರುಬ, ಬೆಟ್ಟ ಕುರುಬ ಸಮಾಜಗಳ ಮನೆ ನಿರ್ಮಾಣದ ಕಾಮಗಾರಿ ಯೋಜನೆ ಪೂರ್ಣಗೊಳಿಸುವಲ್ಲಿ ಹಲವು ಪ್ರಯತ್ನ ನಡೆದಿದೆ. ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಆ ನಿಟ್ಟಿನಲ್ಲಿ ಬೆಂಗಳೂರಿನ ನೀರು ಸರಬರಾಜು ವಿಭಾಗದಿಂದ ಸಿಎಸ್‌ಆರ್ ನಿಧಿಯಡಿ 1.60 ಲಕ್ಷ ರೂ. ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಮನೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಪೊನ್ನಣ್ಣ ಹೇಳಿದರು. ಈ ಹಿಂದೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಅಂದಾಜು ಮಾಡಿದ್ದರು. ಆ ಸಂದರ್ಭ ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದರು. ಆ ದಿಸೆಯಲ್ಲಿ ಸಿಎಸ್‌ಆರ್ ನಿಧಿಯಡಿ ಒಂದು ಕೋಟಿಯಷ್ಟು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಲಾಯಿತು ಎಂದು ಪೊನ್ನಣ್ಣ ಸ್ಮರಿಸಿದರು. ಈ ಬಡಾವಣೆಯಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯ ಒಳಗೊಂಡಿದೆ. ಒಳಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು ಪೂರೈಕೆ, ಸೇರಿದಂತೆ ಉತ್ತಮ ಬಡಾವಣೆ ನಿರ್ಮಾಣ ಆಗಿದೆ. ವಸತಿ ರಹಿತರು ಹೋರಾಟ ಮಾಡಿ ಮನೆ ಸಿಗುವಂತಾಗಿದೆ. ಆ ನಿಟ್ಟಿನಲ್ಲಿ ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕರು ಸಲಹೆ ಮಾಡಿದರು. ಮುಖ್ಯಮಂತ್ರಿ ಅವರನ್ನು ವಿರಾಜಪೇಟೆಗೆ ಆಹ್ವಾನಿಸಿ ನೂತನ ಮನೆಯ ಕೀ ಹಸ್ತಾಂತರಿಸಬೇಕು ಎಂಬ ಉದ್ದೇಶವಿತ್ತು. ಆದರೆ ಈ ಕಾರ್ಯ ಆಗದಿರುವುದರಿಂದ ಸದ್ಯ ಮಳೆಗಾಲ ಆರಂಭವಾಗಿದ್ದು, ತಮಗೆ ಅನಾನುಕೂಲ ಆಗಬಾರದು ಎಂಬ ಉದ್ದೇಶದಿಂದ ಪೂರ್ಣಗೊಂಡಿರುವ 43 ಮನೆಗಳ ಬೀಗದ ಕೀಯನ್ನು ಹಸ್ತಾಂತರಿಸಲಾಗಿದೆ ಎಂದು ಎ.ಎಸ್. ಪೊನ್ನಣ್ಣ ನುಡಿದರು. ಇಲ್ಲಿನ ಪರಿಶಿಷ್ಟ ಎಲ್ಲ ಜನರಿಗೆ ನಿವೇಶನ ಹಾಗೂ ವಸತಿ ಕಲ್ಪಿಸಬೇಕು ಎಂಬ ಆಶಯವಾಗಿದೆ. ಆ ನಿಟ್ಟಿನಲ್ಲಿ ಉಳಿದ 17 ಮನೆಗಳನ್ನು ಸಹ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕರು ತಾಕೀತು ಮಾಡಿದರು. ಈಗಾಗಲೇ ನಿರ್ಮಿಸಿರುವ ಸುಸಜ್ಜಿತ ಬಡಾವಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪಂಚಾಯಿತಿಯವರು ಸಹ ಬಡಾವಣೆ ನಿರ್ವಹಣೆಗೆ ಮುಂದಾಗಬೇಕು. ಮನೆ ಇಲ್ಲದ ಅನೇಕ ಕುಟುಂಬಗಳಿಗೆ ವಸತಿ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಹಂತ ಹಂತವಾಗಿ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ಪೊನ್ನಣ್ಣ ಭರವಸೆ ನೀಡಿದರು.
ಸಮಗ್ರ ಗಿರಿಜನ ಯೋಜನಾ ನಿರ್ದೇಶಕರಾದ ಎಸ್. ಹೊನ್ನೇಗೌಡ ಅವರು ಮಾತನಾಡಿ, ದಿಡ್ಡಳ್ಳಿ ಆದಿವಾಸಿ ಹೋರಾಟಗಾರರ ಪ್ರಯತ್ನದಿಂದ 2016-17ರಲ್ಲಿ 7.50 ಎಕರೆ ಭೂಮಿಯನ್ನು ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿತ್ತು. ದಿಡ್ಡಳ್ಳಿ ಹೋರಾಟಗಾರರಿಗೆ ಬಸವನಹಳ್ಳಿಯಲ್ಲಿ ಮನೆ ನಿರ್ಮಿಸಿದ್ದರಿಂದ ಇಲ್ಲಿನ ಸುತ್ತಮುತ್ತಲಿನ ಯರವ ಬೆಟ್ಟಕುರುಬ, ಜೇನುಕುರುಬ ಆದಿವಾಸಿಗಳಿಗೆ 43 ಮನೆಗಳನ್ನು ನಿರ್ಮಿಸಲಾಗಿದೆ ಎಂದರು. ಆರಂಭದಲ್ಲಿ 15 ಕೋಟಿ ರು. ವೆಚ್ಚ ಅಂದಾಜು ಪಟ್ಟಿ ತಯಾರಿಸಲಾಗಿತ್ತು. 2019-20ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಒಂದು ಮನೆಗೆ 5 ಲಕ್ಷ ರು.ನಂತೆ ನಿಗದಿಯಾಗಿತ್ತು. ಆದರೆ ಎಸ್.ಆರ್. ದರ ಹೆಚ್ಚಾದ ಪರಿಣಾಮ ಮನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು. ಆ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯಿಂದ ತಲಾ 1.60 ಲಕ್ಷ ರು.ವನ್ನು ಶಾಸಕರ ಪ್ರಯತ್ನದಿಂದ ಬಿಡುಗಡೆಯಾಗಿತ್ತು.
ಈ ಬಡಾವಣೆಯಲ್ಲಿ 129 ಮನೆ ನಿರ್ಮಿಸಬಹುದಾಗಿದ್ದು, ಸದ್ಯ 60 ಮನೆಗಳಲ್ಲಿ 43 ಮನೆಗಳು ಪೂರ್ಣಗೊಂಡಿದ್ದು, ಉಳಿದ 17 ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸದಸ್ಯರಾದ ಪಿ.ವಿ. ಜಾನ್ಸನ್, ಪಂಕಜ, ಕೆಡಿಪಿ ಸದಸ್ಯರಾದ ಪ್ರಶಾಂತ್ ಉತ್ತಪ್ಪ, ಪ್ರಮುಖರಾದ ದೇಚಮ್ಮ ಕಾಳಪ್ಪ, ಜೇಫ್ರಿ ಉತ್ತಪ್ಪ, ರಂಜಿ ಪೂಣಚ್ಚ, ತಹಸೀಲ್ದಾರ್ ಪ್ರವೀಣ್ ಕುಮಾರ್, ತಾಪಂ ಇಒಗಳಾದ ರಾಜೇಶ್, ಶೇಖರ್, ತಾಲೂಕು ಐಟಿಡಿಪಿ ಅಧಿಕಾರಿ ತೇಜರಾಜ್, ಎಂಜಿನಿಯರ್‌ಗಳಾದ ಸಚಿನ್, ರಘುನಂದನ್ ಇದ್ದರು.