ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ ಸೇರಿದಂತೆ ಒಂಬತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ರಾಜ್ಯ ಗ್ರಾಮ ಕಾಯಕ ಮಿತ್ರ ನೌಕರರು ಪ್ರತಿಭಟನೆ ನಡೆಸಿದರು.
ಬೆಂಗಳೂರು : ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ ಸೇರಿದಂತೆ ಒಂಬತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ರಾಜ್ಯ ಗ್ರಾಮ ಕಾಯಕ ಮಿತ್ರ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಗ್ರಾಮ ಕಾಯಕ ಮಿತ್ರ ನೌಕರರು, ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮ ಕಾಯಕ ಮಿತ್ರ ನೌಕರಾಗಿ ಗ್ರಾಮ ಪಂಚಾಯಿತಿಗಳಲ್ಲಿ ಎನ್‌ಎಂಎಂಎಸ್, ಇ-ಕೆವೈಸಿ, ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರ ಮನೆಗೆ ತೆರಳಿ ಕೆಲಸಕ್ಕೆ ಕರೆತರುವುದು, ಕಡತಗಳ ನಿರ್ವಹಣೆ ಹಾಗೂ 17ಕ್ಕೂ ಹೆಚ್ಚು ರಿಜಿಸ್ಟರ್‌ಗಳ ನಿರ್ವಹಣೆ ಸೇರಿದಂತೆ ಹಲವು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇವೆ.
ಆದರೂ ಕೇವಲ 12,250 ರು.ಗೌರವಧನ ನೀಡಲಾಗುತ್ತಿದೆ. ಅದೂ ಸಹ ಪ್ರತಿ ತಿಂಗಳು ಸಮಯಕ್ಕೆ ಪಾವತಿಯಾಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ಪ್ರತ್ಯೇಕ ಕೊಠಡಿ, ಪೀಠೋಪಕರಣ, ಕಂಪ್ಯೂಟರ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿಲ್ಲ ಎಂದು ಅವರು ದೂರಿದರು.
ಸಮಾನ ಕೆಲಸಕ್ಕೆ ಸಮಾನ ವೇತನ
ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ, ಪ್ರಯಾಣ ಭತ್ಯೆ ನೀಡಬೇಕು. ವಾರ್ಷಿಕ ನವೀಕರಣ (ರಿನ್ಯೂವಲ್) ಪದ್ಧತಿ ರದ್ದು ಮಾಡಬೇಕು. ಪ್ರತ್ಯೇಕ ಕೊಠಡಿ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕೊಡಬೇಕು. ಎನ್‌ಎಂಎಂಎಸ್ ಕಾರ್ಯಕ್ಕಾಗಿ ಮೊಬೈಲ್ ಹಾಗೂ ರೀಚಾರ್ಜ್ ಇಲ್ಲವೇ ಕರೆನ್ಸಿ ಸೌಲಭ್ಯ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೆಕು. ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಬಿಲ್ ಕಲೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನೌಕರರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಬಿ. ನಾಡಗೌಡ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಎಂ. ಹಾದಿಮನಿ ಸೇರಿದಂತೆ 500ಕ್ಕೂ ಹೆಚ್ಚು ಮಹಿಳಾ ನೌಕರರು ಭಾಗವಹಿಸಿದ್ದರು.