ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ನಗರದಲ್ಲಿ ಸೋಮವಾರ ಆಯೋಜಿಸಿದ್ದ 2026ರ ಬ್ಯಾಚ್‌ನ ಬಿ.ಟೆಕ್‌ ವಿದ್ಯಾರ್ಥಿಗಳ ಭವ್ಯ ಸ್ವಾಗತ ಸಮಾರಂಭ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಬರಮಾಡಿಕೊಳ್ಳಲಾಯಿತು.

ಪ್ರೆಸಿಡೆನ್ಸಿ ವಿವಿ ಕುಲಪತಿ ಡಾ.ಎಸ್.ಜೆ.ತಿರುವೆಂಕಟಂ ಮತ್ತು ಉಪಕುಲಪತಿ ಡಾ. ಶಿವಪೆರುಮಾಳ್ ಅವರು ಹೊಸ ಬ್ಯಾಚ್‌ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಮಕ್ಕಳಿಗೆ ಪರಿವರ್ತನಾಶೀಲ ಶಿಕ್ಷಣದ ಭರವಸೆ ನೀಡಿದರು. ತನ್ಮೂಲಕ ಪ್ರಸಕ್ತ ಸಾಲಿನಲ್ಲಿ ಬಿ.ಟೆಕ್‌ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಪಯಣ ಆರಂಭಗೊಂಡಿತು. ಈ ಸಂತಸವನ್ನು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸಂಭ್ರಮಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇಸ್ರೋದ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪಯಣದ ಆರಂಭದಿಂದಲೇ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಇಟ್ಟ ಗುರಿ ತಲುಪಲು ಕಠಿಣ ಪರಿಶ್ರಮ, ಛಲ ಹೊಂದಿರಬೇಕು. ವೇಗವಾಗಿ ಬದಲಾಗುತ್ತಿರುವ ವೃತ್ತಿಪರ ಜಗತ್ತಿನಲ್ಲಿ ಯಶಸ್ವಿಯಾಗಲು ಪಠ್ಯ ವಿಷಯ ಅಥವಾ ತರಗತಿ ಕಲಿಕೆ ಮಾತ್ರ ಸಾಲದು, ಕೌಶಲ್ಯ ತರಬೇತಿಯೂ ಬಹಳ ಮುಖ್ಯ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲು ಒತ್ತು ನೀಡಬೇಕು ಎಂದರು.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ(ಟಿಸಿಎಸ್‌) ‘ಅಕಾಡೆಮಿಕ್ ಅಲೈಯನ್ಸ್ ಗ್ರೂಪ್'''''''' ಮುಖ್ಯಸ್ಥ ಡಾ.ಸುಚೀಂದ್ರನ್ ಕೆ.ಎಂ. ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯ ಕಡೆಯೂ ಗಮನ ಹರಿಸಬೇಕು. ಆರೋಗ್ಯ ಹದಗೆಟ್ಟರೆ ತಾವು ಪಟ್ಟ ಶ್ರಮವೆಲ್ಲಾ ವ್ಯರ್ಥವಾಗುತ್ತದೆ ಎಂದು ಸಲಹೆ ನೀಡಿದರು.