ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗ ಅತಿಕ್ರಮಣ

KannadaprabhaNewsNetwork | Published : Feb 25, 2025 12:48 AM

ಸಾರಾಂಶ

ತಾಲೂಕಿನ ಗುಜನೂರಿನಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಅತಿಕ್ರಮಣ ಮಾಡಿ ಗ್ರಾಪಂ ಪರವಾನಿಗೆ ಇಲ್ಲದೇ ಮನೆ ನಿರ್ಮಾಣ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿದ್ದಾರೆಂದು ಮಲ್ಲಿಗೆ ನಾಡಾಭಿವೃದ್ಧಿ ಸಂಘದ ಅಧ್ಯಕ್ಷ ಹೊಸಮನಿ ಅಂಜಿನಪ್ಪ ದೂರಿದ್ದಾರೆ.

ಗ್ರಾಪಂ ಪರವಾನಿಗೆ ಇಲ್ಲದೇ ಮನೆ ನಿರ್ಮಾಣ । ಕ್ರಮ ಕೈಗೊಳ್ಳದೇ ಅಧಿಕಾರಿಗಳು: ಆರೋಪಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಗುಜನೂರಿನಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಅತಿಕ್ರಮಣ ಮಾಡಿ ಗ್ರಾಪಂ ಪರವಾನಿಗೆ ಇಲ್ಲದೇ ಮನೆ ನಿರ್ಮಾಣ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿದ್ದಾರೆಂದು ಮಲ್ಲಿಗೆ ನಾಡಾಭಿವೃದ್ಧಿ ಸಂಘದ ಅಧ್ಯಕ್ಷ ಹೊಸಮನಿ ಅಂಜಿನಪ್ಪ ದೂರಿದ್ದಾರೆ.

ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜನೂರು ತಾಲೂಕು ಕೇಂದ್ರದಿಂದ ಅನತಿ ದೂರಲ್ಲಿರುವ ಪುಟ್ಟ ಗ್ರಾಮ ದೇವಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದೆ. 131 ಮನೆಗಳಿದ್ದು ಈಚಿಗೆ ಗ್ರಾಮಸ್ಥರಿಗೆ ನಿವೇಶನ ಕೊರತೆ ಕಾಡುತ್ತಿದೆ. ಈ ಗ್ರಾಮದಲ್ಲಿ ನಾಗರಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 2012ರಲ್ಲಿ 101 ಡೋರ್ ನಂಬರಿನ 90-60 ನಿವೇಶನ ಮೀಸಲು ಇಡಲಾಗಿದೆ. ಇದರಲ್ಲಿ ಗಾಂಧಿ ಕಲಾಭವನ, ಉದ್ಯಾನ ವನ ಸೇರಿದಂತೆ ಇತರೆ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಕೆಲವರು ಅತಿಕ್ರಮಣ ಮಾಡಿ ಮನೆ ನಿರ್ಮಿಸಿಕೊಂಡಿದ್ದರೂ, ಗ್ರಾಪಂ ಪಿಡಿಒ, ತಾಪಂ ಇಒ, ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

2008ರಿಂದ ವಿವಿಧ ಉದ್ದೇಶಗಳಿಗೆ ಮೀಸಲಿಟ್ಟ ಜಾಗ ಉಳಿಸುವುದಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಅಂತಹ ಜಾಗದಲ್ಲಿ, ದೇವಗೊಂಡನಹಳ್ಳಿಯ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳು ಗ್ರಾಪಂ ಹೌಸ್‌ ಲೀಸ್ಟ್‌ ರಿಜಿಸ್ಟರ್‌ ಬುಕ್‌ನಲ್ಲಿ ಅಕ್ರಮವಾಗಿ ಸೇರ್ಪಡೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೆಲ ಪಿಡಿಒಗಳು ಹಣ ಪಡೆದು ಅಕ್ರಮಕ್ಕೆ ಕುಮ್ಮಕ್ಕು ನೀಡಿ, ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ ನೆಪಕ್ಕೆ ನೋಟಿಸ್‌ ನೀಡಿ ಕೈ ತೊಳೆದುಕೊಂಡಿದ್ದಾರೆ ಹೊರತು, ಕ್ರಮಕ್ಕೆ ಮುಂದಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರೂ ಈ ವರೆವಗೂ ಯಾವುದೇ ಕ್ರಮವಿಲ್ಲ, ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆಂದು ದೂರಿದರು.ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗದಲ್ಲಿ ಈಗಾಗಲೇ ಒಂದು ಮನೆ ನಿರ್ಮಾಣವಾಗಿದೆ. ಜತೆಗೆ ಎರಡು ಮನೆಗಳಿಗೆ ಅಡಿಪಾಯ ಹಾಕಿದ್ದಾರೆ, ಒಬ್ಬರು ಗುಡಿಸಲು ಹಾಕಿಕೊಂಡಿದ್ದಾರೆ. ಎಲ್ಲ ಕಟ್ಟಡಗಳನ್ನು ತೆರವು ಮಾಡಿ ಆ ಜಾಗದಲ್ಲಿ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗ ಎಂದು ನಾಮಫಲಕ ಹಾಕಬೇಕು. ಸರ್ಕಾರದ ಜಾಗವನ್ನು ಉಳಿಸಬೇಕಾದ ಅಧಿಕಾರಿಗಳೇ ಅತಿಕ್ರಮಣಕ್ಕೆ ಕುಮ್ಮಕ್ಕು ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿ, ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೇ, ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಕರವೇ ತಾಲೂಕು ಅಧ್ಯಕ್ಷ ಮೆಹಬೂಬ್‌ ಸಾಬ್‌ ಉಪಸ್ಥಿತರಿದ್ದರು.

Share this article