ಕನ್ನಡಪ್ರಭ ವಾರ್ತೆ ಬೇಲೂರು
ಕನ್ನಡ ಭಾಷಾ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ಪ್ರತಿದಿನ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಕೆ. ಸುರೇಶ್ ಹೇಳಿದರು.ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅನ್ಯ ಭಾಷಿಗರನ್ನು ಗೌರವಿಸುವ ಜೊತೆಗೆ ಕನ್ನಡದ ಬಗ್ಗೆ ಪ್ರೀತಿ ಇರಬೇಕು. ಅನಿವಾರ್ಯ ಕಾರಣಗಳಿಗಾಗಿ ಬೇರೆ ಭಾಷೆಗಳನ್ನು ಕಲಿತರೂ ಕೂಡ ಕನ್ನಡವನ್ನು ಬಿಡಬಾರದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಬೇಲೂರು ತಾಲೂಕು ಘಟಕದ ಅಧ್ಯಕ್ಷರಾದ ಮ.ನ. ಮಂಜೇಗೌಡ ಮಾತನಾಡಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಹಳೆ ಮೈಸೂರು ಸಂಸ್ಥಾನದಲ್ಲಿದ್ದ ಜಿಲ್ಲೆಗಳು, ಮುಂಬೈ ಪ್ರಾಂತ್ಯದ ಜಿಲ್ಲೆಗಳು, ಮದ್ರಾಸ್ ಪ್ರಾಂತ್ಯದ ಜಿಲ್ಲೆಗಳು, ಹೈದರಾಬಾದ್ ಪ್ರಾಂತ್ಯದ ಜಿಲ್ಲೆಗಳನ್ನು ಒಂದುಗೂಡಿಸುವ ಮೂಲಕ ವಿಶಾಲ ಮೈಸೂರು ಸಂಸ್ಥಾನ ಎಂಬ ಹೆಸರಿನ ಪ್ರಾಂತ್ಯವೊಂದು ನವೆಂಬರ್ 1, 1956ರಂದು ರಚನೆಗೊಳ್ಳುವ ಮೂಲಕ ಕನ್ನಡಿಗರ ಏಕೀಕರಣದ ಕನಸು ನನಸಾಯಿತು. ನವ ಮೈಸೂರು ಸಂಸ್ಥಾನವು ನವಂಬರ್ 1, 1973ರಂದು ಕರ್ನಾಟಕ ಎಂದು ನಾಮಕರಣಗೊಂಡಿತು. ಈ ಐತಿಹಾಸಿಕ ಘಟನೆಗಳ ನೆನಪಿಗೆ ನವಂಬರ್ ತಿಂಗಳಂದು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಎಂ. ಮಹೇಶ್ ಮಾತನಾಡಿ, ಕರ್ನಾಟಕ ಎಂಬುದು ಒಂದು ರಾಜ್ಯ ಹಲವು ಜಗತ್ತು, ಕರ್ನಾಟಕ ಭೌಗೋಳಿಕವಾಗಿ ವೈಶಿಷ್ಟ್ಯಗಳನ್ನು ಹೊಂದಿದೆ. ಕನ್ನಡ ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಹಾಗಾಗಿ ಕನ್ನಡ ಭಾರತೀಯ ಭಾಷೆಗಳಲ್ಲಿ ಶಾಸ್ತ್ರಿಯ ಸ್ಥಾನಮಾನವನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಭಾಕರ್, ಅಜಿತ್, ಪ್ರಣಿತ್, ಜಗದೀಶ್, ವೈ.ಎಸ್. ಸಿದ್ದೇಗೌಡ, ಸಿ. ಎಸ್. ಪ್ರಕಾಶ್ ಮತ್ತು ಕಾಲೇಜಿನ ಸಾಂಸ್ಕೃತಿಕ ಸಮಿತಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಬಾಬು ಪ್ರಸಾದ್, ಐಕ್ಯೂಎಸಿ ಸಂಚಾಲಕರಾದ ಡಾ.ನಾಗೇಂದ್ರಪ್ಪ ಕೆ.ಟಿ. ರೋವರ್ಸ್ ಘಟಕದ ಸಂಚಾಲಕರಾದ ವೀರಭದ್ರಪ್ಪ, ಎನ್ಎಸ್ಎಸ್ ಘಟಕದ ಸಂಚಾಲಕರಾದ ಮೋಹನ್ ಕುಮಾರ್ ಎಚ್.ಆರ್. ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.