ಕನ್ನಡಪ್ರಭ ವಾರ್ತೆ ಕೋಲಾರಬೇರೆಯವರ ಕೃಷಿ ಜಮೀನಿನ ಹೆಸರಲ್ಲಿ ನಕಲಿ ಪ್ರಮಾಣಪತ್ರ ನೀಡಿ ಟ್ರ್ಯಾಕ್ಟರ್ ಖರೀದಿಸಿ ನೋಂದಣಿ ಮಾಡಿಸುತ್ತಿದ್ದ ಪ್ರಕರಣಗಳ ಬೆನ್ನುಹತ್ತಿದ ಜಿಲ್ಲಾ ಲೋಕಾಯುಕ್ತ ಪೊಲೀಸರು ಕೋಲಾರ ಜಿಲ್ಲೆಯ ಐದು ಕಡೆ ಹಾಗೂ ಚಿಂತಾಮಣಿಯಲ್ಲಿ ಒಂದು ಸ್ಥಳದಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.
ಜಿಲ್ಲಾ ಲೋಕಾಯುಕ್ತ ಎಸ್ಪಿ ಆಂಟನಿ ಜಾನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸುಮಾರು ೧,೩೮೭ ನಕಲಿ ಪ್ರಮಾಣಪತ್ರ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸುಮಾರು ೨ ಕೋಟಿ ರುಗಳಿಗಾ ಹೆಚ್ಚು ನಷ್ಟ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಘಟನೆ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು.ಉಪ ತಹಸೀಲ್ದಾರ್ ನಿವಾಸಕ್ಕೆ ದಾಳಿನಕಲಿ ಪ್ರಮಾಣಪತ್ರ ಹಗರಣ ಸಂಬಂಧ ನರಸಾಪುರ ಉಪ ತಹಸೀಲ್ದಾರ್ ಎನ್.ನಾರಾಯಣಸ್ವಾಮಿ, ನರಸಾಪುರ ನಾಡಕಚೇರಿಯ ಹೊರಗುತ್ತಿಗೆ ಆಪರೇಟರ್ ಅಂಬುಜ, ಉದ್ದಪ್ಪನಹಳ್ಳಿ ಮೂಲದ ಮಧ್ಯವರ್ತಿ ಮಂಜುನಾಥ್, ಶ್ರೀ ಆದಿತ್ಯ ಟ್ರ್ಯಾಕ್ಟರ್ ಶೋ ರೂಮ್ ವ್ಯವಸ್ಥಾಪಕ ಆಂಜನೇಯರೆಡ್ಡಿ, ಅರಾಭಿಕೊತ್ತನೂರು ಗ್ರಾಮದ ಮೂಲದ ಮಧ್ಯವರ್ತಿ ಅಶ್ವತ್ಥ್ ನಾರಾಯಣ ಮನೆ ಹಾಗೂ ಕಚೇರಿ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ.
ನಾಡಕಚೇರಿಯಲ್ಲಿ ನಕಲಿ ಪ್ರಮಾಣಪತ್ರ ನೀಡಿರುವ ಆರೋಪದಡಿ ದಾಳಿ ನಡೆಸಲಾಗಿದೆ. ಕೃಷಿಕರಲ್ಲದ ಟ್ರ್ಯಾಕ್ಟರ್ ಖರೀದಿದಾರರಿಂದ ಹಣ ಮತ್ತು ಆಧಾರ್ ಕಾರ್ಡ್ ಪಡೆದು ನಕಲಿ ಪ್ರಮಾಣಪತ್ರ ನೀಡಲಾಗಿದೆ. ಇವರಿಗೆ ನಕಲಿ ಪ್ರಮಾಣಪತ್ರ ನೀಡುವಾಗ ಬೇರೆ ಯಾರದ್ದೋ ಜಮೀನಿನ ದಾಖಲೆ ನಮೂದಿಸಲಾಗಿದೆ. ಇದೇ ರೀತಿ ಸಾವಿರಕ್ಕೂ ಹೆಚ್ಚು ನಕಲಿ ಪ್ರಮಾಣಪತ್ರ ನೀಡಿ ಸರ್ಕಾರಕ್ಕೆ ಕೋಟ್ಯಂತರ ರು.ಗಳನ್ನು ವಂಚಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.ಸಚಿವರ ಜನೀನನ್ನೂ ಬಿಡದ ವಂಚಕರು
ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ೬ ಜನ ಲೋಕಯುಕ್ತ ಇನ್ಸ್‌ಪೆಕ್ಟರ್ ಗಳಿಂದ ಶೋಧ ಕಾರ್ಯಾಚರಣೆಯಿಂದ ಅರ್‌ಟಿಓ ಅಧಿಕಾರಿಗಳಲ್ಲೂ ನಡುಕ ಶುರುವಾಗಿದೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜಮೀನಿನ ದಾಖಲನೆಗಳನ್ನೂ ಬಳಸಿಕೊಂಡು ನಕಲಿ ಪ್ರಮಾಣಪತ್ರ ಸೃಷ್ಟಿಸಿ ಟ್ರ್ಯಾಕ್ಟರ್ ಖರೀದಿಸಿದ್ದಾರೆ ಎನ್ನಲಾಗಿದೆ.ಸಬ್ಸಿಡಿ ಪಡೆಯುವ ದುರುದ್ದೇಶ
ಕೃಷಿ ಬಳಕೆಗೆ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ತೆರಿಗೆ ವಿನಾಯಿತಿ ಹಾಗೂ ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ಆದರೆ ಇದಕ್ಕಾಗಿ ಜಮೀನಿ ದಾಖಲೆ ಹಾಗೂ ಕಂದಾಯ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಆದರೆ ಜಮೀನು ಇಲ್ಲದವರೂ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಖರೀದಿಸಲು ಅನುವಾಗುವಂತೆ ನಕಲಿ ಪ್ರಮಾಣಪತ್ರ ದಂದೆ ತಲೆಎತ್ತಿತ್ತು. ಕೆಲವರು ಕಂದಾಯ ಅಧಿಕಾರಿಗಳು, ಆರ್‌ಟಿಒ ಕಚೇರಿ ಅಧಿಕಾರಿಗಳು ಹಾಗೂ ಟ್ರ್ಯಾಕ್ಟರ್ ಶೋರೂಂ ಮಾಲೀಕರು ನಕಲಿ ಪ್ರಮಾಣ ಪತ್ರ ದಂದೆಯಲ್ಲಿ ನಿರತರಾಗಿರುವ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.