ಈ ಹಿಂದೆ ಬೆಳೆವಿಮೆ ಪಾವತಿಸಿದ ರೈತರಿಗೆ ವಂಚನೆಯಾಗಿದೆ

KannadaprabhaNewsNetwork |  
Published : Aug 08, 2026, 01:45 AM IST
ಫೋಟೋ: 7ಎಚ್ಎಸ್ಎನ್6 : ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಬರ ಅಧ್ಯಯನ ವಿಕ್ಷಣೆಗೆ ಹಳೇಬೀಡು ಬಳಿಯ ಸೊಪ್ಪಿನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಉತ್ತಮ ಇಳುವರಿ ಬಂದಿದೆ ಎಂದು ವರದಿ ಕೊಟ್ಟು ರೈತರಿಗೆ ವಂಚನೆ ಮಾಡಿದ್ದಾರೆ. ಈಗ ಅಂತಹ ಪರಿಸ್ಥಿತಿ ಬರಲು ನಾವು ಬಿಡುವುದಿಲ್ಲ. ಸಾಲ ಕೊಡುವ ಬ್ಯಾಂಕಿನವರು ವಿಮೆ ಮಾಡಿಸುವುದಿಲ್ಲ ಎಂದು ರೈತರು ದೂರಿದರು. ಬ್ಯಾಂಕಿನವರು ಬೆಳೆ ಸಾಲ ಮಾಡಿದ ರೈತರಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ರೈತರಿಗೆ ಕೊಡುವ ಸಾಲ ನಬಾರ್ಡ್‌ನಿಂದ ಕೇಂದ್ರ ಸರ್ಕಾರಕ್ಕೆ ಬರುತ್ತದೆ. ನಂತರ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತಾರೆ. ಅಪೆಕ್ಸ್ ಬ್ಯಾಂಕ್ ಮುಖಾಂತರ ಡಿಸಿಸಿ ಮೊದಲಾದ ಬ್ಯಾಂಕುಗಳಿಂದ ಸಾಲ ವಿತರಿಸುತ್ತಾರೆ. ಸಾಲದ ಜೊತೆ ವಿಮೆ ಪಾವತಿಸುವುದನ್ನು ತಪ್ಪಿಸಬಾರಾದು ಎಂದು ಶಿವಲಿಂಗೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಅಧಿಕಾರಿಗಳು ಹಾಗೂ ವಿಮಾ ಕಂಪೆನಿಯವರ ಒಳ ಒಪ್ಪಂದದಿಂದ ಈ ಹಿಂದೆ ಬೆಳೆವಿಮೆ ಪಾವತಿಸಿದ ರೈತರಿಗೆ ಮೋಸವಾಗಿದೆ.ದಾದರೆ, ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಬರ ಅಧ್ಯಯನ ವೀಕ್ಷಣೆಗೆ ಹಳೇಬೀಡು ಹೋಬಳಿಯ ಸೊಪ್ಪಿನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು. ಸಾಕಷ್ಟು ರೈತರು ಬೆಳೆ ವಿಮೆ ಕಟ್ಟುವುದಿಲ್ಲ. ಬೆಳೆ ವಿಮೆ ಪಾವತಿಸಿದವರಿಗೆ ತಮ್ಮ ಬೆಳೆಯಿಂದ ಬರ ಬಹುದಾದಂತಹ ಆದಾಯ ಪ್ರಮಾಣದ ಶೇ. ೮೦ರಷ್ಟು ಹಣ ಈಗಿನ ಹೊಸ ವಿಮಾ ಯೋಜನೆಯಿಂದ ಸಿಗುತ್ತದೆ. ಆದರೆ ಈ ಹಿಂದೆ ಅಧಿಕಾರಿಗಳು ಹಾಗೂ ವಿಮಾ ಕಂಪೆನಿಯವರು ಸೇರಿಕೊಂಡು ಬೆಳೆ ಚೆನ್ನಾಗಿದೆ, ಉತ್ತಮ ಇಳುವರಿ ಬಂದಿದೆ ಎಂದು ವರದಿ ಕೊಟ್ಟು ರೈತರಿಗೆ ವಂಚನೆ ಮಾಡಿದ್ದಾರೆ. ಈಗ ಅಂತಹ ಪರಿಸ್ಥಿತಿ ಬರಲು ನಾವು ಬಿಡುವುದಿಲ್ಲ. ಸಾಲ ಕೊಡುವ ಬ್ಯಾಂಕಿನವರು ವಿಮೆ ಮಾಡಿಸುವುದಿಲ್ಲ ಎಂದು ರೈತರು ದೂರಿದರು. ಬ್ಯಾಂಕಿನವರು ಬೆಳೆ ಸಾಲ ಮಾಡಿದ ರೈತರಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ರೈತರಿಗೆ ಕೊಡುವ ಸಾಲ ನಬಾರ್ಡ್‌ನಿಂದ ಕೇಂದ್ರ ಸರ್ಕಾರಕ್ಕೆ ಬರುತ್ತದೆ. ನಂತರ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತಾರೆ. ಅಪೆಕ್ಸ್ ಬ್ಯಾಂಕ್ ಮುಖಾಂತರ ಡಿಸಿಸಿ ಮೊದಲಾದ ಬ್ಯಾಂಕುಗಳಿಂದ ಸಾಲ ವಿತರಿಸುತ್ತಾರೆ. ರೈತರಿಗೆ ಕೊಡುವ ಬೆಳೆ ಸಾಲಕ್ಕೆ ಬ್ಯಾಂಕಿನವರು ಸತಾಯಿಸಬಾರಾದು. ಸಾಲದ ಜೊತೆ ವಿಮೆ ಪಾವತಿಸುವುದನ್ನು ತಪ್ಪಿಸಬಾರಾದು ಎಂದು ಶಿವಲಿಂಗೇಗೌಡ ಹೇಳಿದರು.

ಪ್ರಸಕ್ತ ವರ್ಷ ಶೇ.೬೬ ರಷ್ಪು ಮಳೆ ಕೊರತೆಯಾಗಿದ್ದು, ರೈತರಿಗೆ ನಷ್ಟವಾಗಿದೆ. ಮುಂಗಾರಿನಲ್ಲಿ ಬೆಳೆ ಮಾಡಿದ ರೈತರಿಗೆ ಬಿಡಿಗಾಸು ಸಿಕ್ಕಿಲ್ಲ. ರೈತರಿಗೆ ಸರ್ಕಾರದ ಪರಿಹಾರದ ಅಗತ್ಯವಿದೆ ಎಂದು ಸೊಪ್ಪಿನಹಳ್ಳಿಯ ರೈತ ಎಸ್. ಎನ್. ಕುಮಾರಸ್ವಾಮಿ ನಾಶವಾಗಿರುವ ಜೋಳದ ಬೆಳೆ ತೋರಿಸಿ ಅಳಲು ತೋಡಿಕೊಂಡರು. ರೈತರೊಂದಿಗೆ ಸಮಾಲೋಚನೆ ಮಾಡಿ ಸರ್ಕಾರದ ಗಮನಕ್ಕೆ ತರುವುದಕ್ಕಾಗಿಯೇ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿದ್ದೇವೆ ಎಂದು ಶಿವಲಿಂಗೇಗೌಡ ಹೇಳಿದರು. ರೈತ ಸಿದ್ದರಾಜು ಜಮೀನು ಬಿಟ್ಟುಕೊಟ್ಟಿದ್ದರಿಂದ ಅಡಗೂರು ಕೆರೆಗೆ ಎತ್ತಿನಹೊಳೆ ನೀರು ಹರಿಯುತ್ತಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯ್ ಕುಮಾರ್ ಸಚಿವರ ಗಮನಕ್ಕೆ ತಂದರು. ಸಚಿವರು ಸಿದ್ದರಾಜು ಅವರನ್ನು ಸನ್ಮಾನಿಸಿ ಗೌರವಿಸಿದರು. ನಂತರ ಸಚಿವರು ಘಟ್ಟದಹಳ್ಳಿ, ಸಾಣೇನಹಳ್ಳಿ, ಗಂಗೂರು ಗ್ರಾಮಗಳಲ್ಲಿ ಬೆಳೆ ವಿಕ್ಷಣೆ ಮಾಡಿದರು.

ವಿಶೇಷ ಸಭೆ ನಡೆಸಲು ಸೂಚನೆ:ಗಂಗೂರು ಎತ್ತಿನಹೊಳೆ ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಅನ್ಯಾಯವಾಗಿದೆ. ನಾಲೆ ನಿರ್ಮಾಣವಾದ ಜಮೀನು ಮಾಲೀಕರಿಗೂ ಸಮರ್ಪಕ ಪರಿಹಾರ ದೊರಕುತ್ತಿಲ್ಲ. ಜೊತೆಗೆ ರೈತರ ಬಳಿ ಜಮೀನಿನ ದಾಖಲೆ ಇದ್ದರೂ ಸಹ ಅರಣ್ಯ ಇಲಾಖೆಯವರು ಜಮೀನು ಅರಣ್ಯಕ್ಕೆ ಸೇರಿದೆ ಎನ್ನುತ್ತಾರೆ. ರೈತರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ ಎಂಬುದು ಸಚಿವರ ಗಮನಕ್ಕೆ ಬಂತು. ವಿಶೇಷ ಸಭೆ ಕರೆದು ಎತ್ತಿನಹೊಳೆ ಯೋಜನೆಗೆ ಜಮೀನು ಕಳೆದುಕೊಂಡು ರೈತರೊಂದಿಗೆ ಸಮಾಲೋಚನೆ ನಡೆಸಿ, ರೈತರು ಜಮೀನು ಕಳೆದು ಕೊಂಡಿರುವುದರಿಂದ ರೈತರಿಗೆ ಆಗಿರುವ ನಷ್ಟದ ವಿವರದ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರಿಗೆ ಸೂಚಿಸಿದರು. ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ರೈತರಿಗೆ ಆಗಿರುವ ಬೆಳೆ ನಷ್ಟದ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು. ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಎಐಸಿಸಿ ಸದಸ್ಯ ಬಿ. ಶಿವರಾಂ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ಕೃಷಿಕ ಸಮಾಜ ಅಧ್ಯಕ್ಷ ಜಯರಾಂ, ರೈತ ಮುಖಂಡರಾದ ಎಲ್. ಈ. ಶಿವಪ್ಪ, ಗಂಗಾಧರ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರಗೋಡು ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ
ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪರಿವರ್ತನೆಗಾಗಿ ಪಾದಯಾತ್ರೆ