ಬರ ವಿಚಾರವಾಗಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆಗೆ ಮಣಿದಿರುವ ರಾಜ್ಯ ಸರ್ಕಾರ, ಅವರು ಪ್ರತಿನಿಧಿಸುವ ವಿಜಯಪುರ ಜಿಲ್ಲೆಯ ಚಡಚಣ ಸೇರಿ 10 ಜಿಲ್ಲೆಗಳ 29 ತಾಲೂಕುಗಳ ಬರ ಪರಿಸ್ಥಿತಿ ವೈಜ್ಞಾನಿಕ ಮೌಲ್ಯಮಾಪನ (ಗ್ರೌಂಡ್ ಟ್ರೂಥಿಂಗ್)ಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು : ಬರ ವಿಚಾರವಾಗಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆಗೆ ಮಣಿದಿರುವ ರಾಜ್ಯ ಸರ್ಕಾರ, ಅವರು ಪ್ರತಿನಿಧಿಸುವ ವಿಜಯಪುರ ಜಿಲ್ಲೆಯ ಚಡಚಣ ಸೇರಿ 10 ಜಿಲ್ಲೆಗಳ 29 ತಾಲೂಕುಗಳ ಬರ ಪರಿಸ್ಥಿತಿ ವೈಜ್ಞಾನಿಕ ಮೌಲ್ಯಮಾಪನ (ಗ್ರೌಂಡ್ ಟ್ರೂಥಿಂಗ್)ಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
ಕ್ಷೇತ್ರದ ಜನರಿಗೆ ಉತ್ತರಿಸಲಾಗುತ್ತಿಲ್ಲ ಎಂಬ ಕಾರಣ
ಬರ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ಕ್ಷೇತ್ರದ ಜನರಿಗೆ ಉತ್ತರಿಸಲಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಯಶವಂತರಾಯಗೌಡ ಅವರು ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಗುರುವಾರ ಚಡಚಣ ತಾಲೂಕನ್ನೂ ಸೇರಿಸಿ ಒಟ್ಟು 29 ತಾಲೂಕುಗಳಲ್ಲಿ ವೈಜ್ಞಾನಿಕ ಮೌಲ್ಯಮಾಪನಕ್ಕೆ ಆದೇಶಿಸಿದೆ.
ರಾಜ್ಯದಲ್ಲಿ ಈವರೆಗೆ 3 ಹಂತದಲ್ಲಿ 177 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ
ರಾಜ್ಯದಲ್ಲಿ ಈವರೆಗೆ 3 ಹಂತದಲ್ಲಿ 177 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅದರ ಜತೆಗೆ 4ನೇ ಹಂತವಾಗಿ 7 ಜಿಲ್ಲೆಗಳ 10 ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನ ಮಾಡಲು ಬುಧವಾರ ಆದೇಶಿಸಲಾಗಿದೆ. ಇದೀಗ ಗುರುವಾರ 5ನೇ ಹಂತದಲ್ಲಿ 10 ಜಿಲ್ಲೆಗಳ 29 ತಾಲೂಕುಗಳ ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳನ್ನು ವೈಜ್ಞಾನಿಕ ಮೌಲ್ಯಮಾಪನಕ್ಕೆ ಸರ್ಕಾರ ಆದೇಶಿಸಿದೆ.
ಶಿವಮೊಗ್ಗದ ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಳಸಾ, ಚಿಕ್ಕಮಗಳೂರು, ಕೊಡಗಿನ ಮಡಿಕೇರಿ, ಕುಶಾಲನಗರ, ದಕ್ಷಿಣ ಕನ್ನಡದ ಬೆಳ್ತಂಗಡಿ, ಬಂಟ್ವಾಳ, ಉಲ್ಲಾಳ, ಉಡುಪಿಯ ಬೈಂದೂರು, ಉಡುಪಿ, ಉತ್ತರ ಕನ್ನಡದ ಆಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ ತಾಲೂಕುಗಳ ಮೌಲ್ಯಮಾಪನಕ್ಕೆ ಸೂಚಿಸಲಾಗಿದೆ,
ಅವುಗಳ ಜತೆಗೆ ಬೀದರ್‌ನ ಔರಾದ್, ಬೆಳಗಾವಿಯ ಗೋಕಾಕ್, ರಾಮದುರ್ಗ, ಸವದತ್ತಿ, ಕಗವಾಡ, ವಿಜಯಪುರದ ಇಂಡಿ, ಚಡಚಣ, ಧಾರವಾಡದ ಕಲಘಟಗಿ, ಧಾರವಾಡ, ಕುಂದಗೋಳ, ಅಳ್ನಾವರ ತಾಲೂಕುಗಳ ಮೌಲ್ಯಮಾಪನ ಮಾಡಲಾಗುತ್ತದೆ. ವೈಜ್ಞಾನಿಕ ಮೌಲ್ಯಮಾಪನ ವರದಿ ಬಂದ ನಂತರ ಬರ ಪೀಡಿತ ತಾಲೂಕುಗಳ ಪಟ್ಟಿಗೆ ಅವುಗಳನ್ನು ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

