ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಅಗತ್ಯ ತೇವಾಂಶ ದೊರೆಯದೆ ಒಣಗಿವೆ.

ಹುಬ್ಬಳ್ಳಿ:

ಬರದಿಂದಾಗಿ ಬಿತ್ತಿದ ಬೆಳೆ ಕೂಡ ಬಂದಿಲ್ಲ. ಆದಕಾರಣ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಆಗ್ರಹಿಸಿದ್ದಾರೆ.ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಅಗತ್ಯ ತೇವಾಂಶ ದೊರೆಯದೆ ಒಣಗಿವೆ. ಮರುಬಿತ್ತನೆಯಲ್ಲೂ ರೈತರು ನಷ್ಟ ಅನುಭವಿಸಿದ್ದಾರೆ. ಅಂತರ್ಜಲ ಮಟ್ಟ ಕುಸಿದಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಆಗಿರುವುದರಿಂದ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆಯೂ ಎದುರಾಗಿದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ಮೆಕ್ಕೆಜೋಳ, ಹತ್ತಿ, ಸೋಯಾಬಿನ್, ತೊಗರಿ, ಕಡಲೆ, ಶೇಂಗಾ ಹಾಗೂ ಮೆಣಸಿನಕಾಯಿ ಸೇರಿದಂತೆ ಪ್ರಮುಖ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿವೆ. ಬರೀ ಬರಪೀಡಿತ ಎಂದು ಘೋಷಿಸಿದರೆ ಸಾಲದು. ಬರಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿಯೂ ಮಳೆ ಕೊರತೆಯಿಂದ ಬೆಳೆ ಹಾನಿ ಹಾಗೂ ನೀರಿನ ಸಮಸ್ಯೆ ಎದುರಾಗಿದೆ ಎಂದ ಅವರು, ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬರೀ ಕಚೇರಿಗಳಲ್ಲಿ ಕುಳಿತುಕೊಳ್ಳದೇ ರೈತರ ಬಳಿ ತೆರಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಬೇಕು. ರೈತರು ಬಿತ್ತನೆ ಮಾಡಿದ ಬೆಳೆಯೆಲ್ಲ ಹಾಳಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಬರದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಬೇಕು. ಪ್ರತಿ ಅಗತ್ಯ ಪ್ರದೇಶದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ, ಉದ್ಯೋಗದ ಕೊರತೆಯಿಂದ ಜನರು ಗುಳೆ ಹೋಗುವುದನ್ನು ತಡೆಯಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ ಶೆಟ್ಟರ್ ಒತ್ತಾಯಿಸಿದರು.4 ತಾಲೂಕಿಗೆ ಬರ ಘೋಷಣೆ:ಧಾರವಾಡ ಜಿಲ್ಲೆಯ ಧಾರವಾಡ, ಕಲಘಟಗಿ, ಕುಂದಗೋಳ ಹಾಗೂ ಅಳ್ನಾವರ ತಾಲೂಕುಗಳನ್ನು ಸರ್ಕಾರ ಹೊಸದಾಗಿ ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಿ, ಬರ ಪಟ್ಟಿಗೆ ಸೇರ್ಪಡೆ ಮಾಡಿದೆ. ಸೆ. 23ರಂದು ಸಂಜೆ ಸರ್ಕಾರ ಬಿಡುಗಡೆ ಮಾಡಿದ ನೂತನ ಬರ ತಾಲೂಕುಗಳ ಪಟ್ಟಿಯಲ್ಲಿ ಈ ನಾಲ್ಕು ತಾಲೂಕುಗಳು ಸೇರ್ಪಡೆಗೊಂಡಿವೆ. ಈ ಮೂಲಕ ಧಾರವಾಡ ಇಡೀ ಜಿಲ್ಲೆಯು ಬರಗಾಲದ ಪಟ್ಟಿಗೆ ಸೇರ್ಪಡೆಯಾದಂತಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.