ಪತ್ನಿ ಚನ್ನಮ್ಮನವರ ಸಮಾಧಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪೂಜೆ

KannadaprabhaNewsNetwork |  
Published : Jul 22, 2026, 01:45 AM IST
ಹೊಳೆನರಸೀಪುರ ಕ್ಯಾತನಹಳ್ಳಿ ಸಮೀಪ ಚನ್ನಮ್ಮನವರ ಸಮಾಧಿ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪುತ್ರರಾದ ಎಚ್.ಡಿ.ರೇವಣ್ಣ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ಅನಸೂಯ, ಎಚ್.ಡಿ.ಶೈಲಜಾ ಹಾಗೂ ಸೊಸೆ ಭವಾನಿ ರೇವಣ್ಣ ಅವರು ಆಗಮಿಸಿ, ಪೂಜೆ ಸಲ್ಲಿಸಿದರು.ಫೋಟೊ ೨ : ಹೊಳೆನರಸೀಪುರ ಕ್ಯಾತನಹಳ್ಳಿ ಸಮೀಪ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಜೂನ್ ೩೦ರವರೆಗೆ ಹಚ್ಚಿದ ದೀಪ ಆರದಂತೆ ಶಾಸಕ ಎಚ್.ಡಿ.ರೇವಣ್ಣ, ಎಚ್.ಡಿ.ಅನುಸೂಯ ಹಾಗೂ ಭವಾನಿ ರೇವಣ್ಣ ಅವರು ಸಮಾದಿ ಪಕ್ಕದಲ್ಲಿ ಹಚ್ಚಿದ ದೀಪದ ಸುತ್ತಲೂ ಹಾಲೋಬ್ರಿಕ್ಸ್ ಇಟ್ಟುದೀಪ ಆರದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದರು.  | Kannada Prabha

ಸಾರಾಂಶ

ಇಂತಹ ಯಾವುದೇ ರಾಜ್ಯದಲ್ಲಾಗಲಿ ಘಟನೆಗಳು ನಡೆಯಬಾರದು, ಕೆಲವು ಬಾರಿ ಕೆಲವು ಸಮಸ್ಯೆಗಳನ್ನು ಹಣದ ಆಸೆಯಿಂದ ಉದ್ಭವ ಮಾಡ್ತಾರೆ. ಹಲವಾರು ಸಂದರ್ಭಗಳಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ, ಆದರೆ ಈ ಬಾರಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದನ್ನು ಈ ಮಟ್ಟದ ಅಸಮಾಧಾನ ವ್ಯಕ್ತಪಡಿಸಿ, ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಸಮೀಪ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ

ಪತ್ನಿ ಚನ್ನಮ್ಮನವರ ಸಮಾಧಿ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪುತ್ರರಾದ ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ಅನಸೂಯ, ಎಚ್.ಡಿ.ಶೈಲಜಾ ಹಾಗೂ ಸೊಸೆ ಭವಾನಿ ರೇವಣ್ಣ ಅವರು ಆಗಮಿಸಿ, ಸಮಾ ಬಳಿ ದೀಪ ಹಚ್ಚಿ ಪೂಜೆ ಸಲ್ಲಿಸಿದರು.

ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರ ನಿದ್ರೆಗೆ ಜಾರಿದ ಚನ್ನಮ್ಮ ಸಮಾಧಿ ಎದುರು ದೇವೇಗೌಡರು, ಪತ್ನಿ ಇಲ್ಲದ ಮೊದಲ ದಿನ ಕಳೆದು, ಭೂಮಿ ತಾಯಿ ಒಡಲು ಸೇರಿದ ಬಾಳ ಸಂಗಾತಿ ನೆನೆದು ಕಣ್ಣೀರು ಹಾಕುತ್ತಾ ಸಮಾಧಿ ಪ್ರದಕ್ಷಿಣೆ ಹಾಕಿ ಅರ್ಧಾಂಗಿಗೆ ನಮಿಸಿದರು.

ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಜೂನ್ 30ರವರೆಗೆ ಹಚ್ಚಿದ ದೀಪ ಆರದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆ ನೀಡಿದ್ದು, ಶಾಸಕ ಎಚ್.ಡಿ.ರೇವಣ್ಣ, ಎಚ್.ಡಿ.ಅನುಸೂಯ ಹಾಗೂ ಭವಾನಿ ರೇವಣ್ಣ ಅವರು ಸಮಾಧಿ ಪಕ್ಕದಲ್ಲಿ ಹಚ್ಚಿದ ದೀಪದ ಸುತ್ತಲೂ ಹಾಲೋಬ್ರಿಕ್ಸ್ ಇಟ್ಟು ದೀಪ ಆರದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದರು. ಶ್ರೀಮತಿ ಚನ್ನಮ್ಮ ಸಮಾಧಿಯ ಪಕ್ಕದಲ್ಲಿ ನಂದಾದೀಪ ಹಚ್ಚಿದ ಪುತ್ರಿ ಅನಸೂಯಾ ಪೂಜೆ ಸಲ್ಲಿಸಿದ ನಂತರ ನೆಲದ ಮೇಲೆ ಕುಳಿತು ಶ್ರೀ ವಿಷ್ಣು ಸಹಸ್ರನಾಮ ಪಠಿಸಿದರು.

ಶಿವಭಕ್ತೆಯಾಗಿದ್ದ ಚನ್ನಮ್ಮನವರು ನಿತ್ಯ ದೇವರ ಪೂಜೆ ವೇಳೆ ರುದ್ರ ಚಮಕ ಶ್ಲೋಕ ಪಠಿಸಿದ ನಂತರ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಹೇಳುತ್ತಿದ್ದ ಹಿನ್ನೆಲೆಯಲ್ಲಿ ಅವರ ಸಮಾಧಿ ಸ್ಥಳದಲ್ಲಿ ಶ್ಲೋಕಗಳ ಪಠಿಸಿ, ಪ್ರತಿ ನಿತ್ಯ ಪೂಜೆ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಅರ್ಚಕರಿಗೆ ಸೂಚಿಸಿದರು.

ಅರ್ಚಕರು ಶಿವನಿಗೆ ಪ್ರಿಯವಾದ ರುದ್ರ ಚಮಕ ಶ್ಲೋಕ ಪಠನೆ ಹಾಗೂ ಲಲಿತ ಸಹಸ್ರ ನಾಮ, ವಿಷ್ಣು ಸಹಸ್ರ ನಾಮ, ಗಾಯತ್ರಿ ಮಂತ್ರ ಉಚ್ಚಾರಣೆ ಮಾಡಿ ಪೂಜೆ ಸಲ್ಲಿಸಿದರು.

ದೆಹಲಿಯಲ್ಲಿ ವಿದ್ಯಾರ್ಥಿಗಳ ದಂಗೆ ಕುರಿತು ಕೇಂದ್ರ ಸಚಿವರ ಮಾತು:

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ವಿದ್ಯಾರ್ಥಿಗಳ ದಂಗೆ ವಿಚಾರ ಕುರಿತು ಮಾತನಾಡಿ, ಇಂತಹ ಯಾವುದೇ ರಾಜ್ಯದಲ್ಲಾಗಲಿ ಘಟನೆಗಳು ನಡೆಯಬಾರದು, ಕೆಲವು ಬಾರಿ ಕೆಲವು ಸಮಸ್ಯೆಗಳನ್ನು ಹಣದ ಆಸೆಯಿಂದ ಉದ್ಭವ ಮಾಡ್ತಾರೆ. ಹಲವಾರು ಸಂದರ್ಭಗಳಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ, ಆದರೆ ಈ ಬಾರಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದನ್ನು ಈ ಮಟ್ಟದ ಅಸಮಾಧಾನ ವ್ಯಕ್ತಪಡಿಸಿ, ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಾವುದೋ ಕಾಣದ ಶಕ್ತಿಗಳು ಇದರಲ್ಲಿ ಸೇರಿವೆ. ನಮ್ಮ ದೇಶದ ಅಭಿವೃದ್ಧಿ ಸಹಿಸಲಾರದೆ ಈ ತರ ಅವ್ಯವಸ್ಥೆ ಮಾಡುತ್ತಿದ್ದಾರೆ. ಈ ಹಿಂದೆಯೂ ಇಂತಹ ಸನ್ನಿವೇಶಗಳು ಉದ್ಬವವಾದಾಗ ಈ ಮಟ್ಟದ ತೀವ್ರತೆಯಲ್ಲಿ ನಡೆದಿದ್ದನ್ನು ನಾವು ನೋಡಬಹುದು. ನಮ್ಮ ತಂದೆ ಪ್ರಧಾನಮಂತ್ರಿಯಾದಾಗ ಹಲವಾರು ಘಟನೆಗಳು ನಡೆದಿದೆ ಎಂಬುದನ್ನು ಕಂಡಿದ್ದೀರಿ. ದೇಶ- ವಿದೇಶಗಳ ಮಧ್ಯದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಬೇರೆ ಬೇರೆ ಭಿನ್ನಾಭಿಪ್ರಾಯಗಳನ್ನು ಉಂಟು ಮಾಡುವ ಶಕ್ತಿಗಳಿವೆ. ನಮ್ಮ ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಲ್ಲಿ ದೇಶದ ಭದ್ರತೆಯನ್ನು ಅಸ್ಥಿರಗೊಳಿಸಲು ಹಲವಾರು ಕಾಣದ ಕೈಗಳು ಪ್ರಯತ್ನಪಡುತ್ತಿವೆ. ಆದ್ದರಿಂದ ಯುವ ಜನತೆ ತಾಳ್ಮೆಯಿಂದ ವರ್ತಿಸಬೇಕಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಭೈರತಿ ಸುರೇಶ್ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ
ಜನ ಕೇಂದ್ರಿತ ಚಿಂತನೆಗಳಿಂದ ಸಂಘಟನೆ ಯಶಸ್ಸು ಸಾಧ್ಯ