ಪಿಎಲ್ ಡಿ ಬ್ಯಾಂಕ್ ನಿಂದ ವಂಚನೆ : ಆರೋಪ

KannadaprabhaNewsNetwork | Updated : May 10 2025, 10:17 AM IST
Follow Us

ಸಾರಾಂಶ

  ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಷೇರುದಾರರಿಗೆ ಬ್ಯಾಂಕ್ ನ ಆಡಳಿತ ಮಂಡಲಿ ಮತ್ತು ಅಲ್ಲಿನ ಸಿಬ್ಬಂದಿ ಸೂಕ್ತ ಮಾಹಿತಿಯನ್ನು ನೀಡದೇ ಅವರನ್ನು ಮತದಾನ ಪ್ರಕ್ರಿಯೆಯಿಂದ ವಂಚಿಸಲಾಗಿದೆ ಎಂದು  ಆರೋಪ

 ತುರುವೇಕೆರೆ : ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಷೇರುದಾರರಿಗೆ ಬ್ಯಾಂಕ್ ನ ಆಡಳಿತ ಮಂಡಲಿ ಮತ್ತು ಅಲ್ಲಿನ ಸಿಬ್ಬಂದಿ ಸೂಕ್ತ ಮಾಹಿತಿಯನ್ನು ನೀಡದೇ ಅವರನ್ನು ಮತದಾನ ಪ್ರಕ್ರಿಯೆಯಿಂದ ವಂಚಿಸಲಾಗಿದೆ ಎಂದು ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಮಹಲಿಂಗಯ್ಯ ಆರೋಪಿಸಿದ್ದಾರೆ. 

 ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಬ್ಯಾಂಕ್ ನಲ್ಲಿ ಸುಮಾರು 9700 ಮಂದಿ ಷೇರುದಾರರಿದ್ದಾರೆ. ಅವರಲ್ಲಿ ಸುಮಾರು 8 ಸಾವಿರ ಮಂದಿಗೆ ಮತದಾನದ ಹಕ್ಕು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಿದ್ದಾರೆ. ಆರಂಭದಲ್ಲಿ ಬ್ಯಾಂಕಿನ ಷೇರು 500 ರು. ತದ ನಂತರದ ದಿನಗಳಲ್ಲಿ ಒಂದು ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ.

 ಹೆಚ್ಚಿಸಿರುವ ಷೇರು ಹಣವನ್ನು ಕೂಡಲೇ ಬ್ಯಾಂಕಿಗೆ ಪಾವತಿಸಬೇಕೆಂದೂ ಷೇರುದಾರರಿಗೆ ಮಾಹಿತಿ ನೀಡಿಲ್ಲ ಎಂದು ದೂರಿದರು. ಷೇರು ಕಡಿಮೆ ಇದೆ ಎಂದು ಸಬೂಬು ಹೇಳುವುದಲ್ಲದೇ ಮತದಾನ ಪ್ರಕ್ರಿಯೆಗೆ ಐದು ವರ್ಷದಲ್ಲಿ ಎರಡು ವರ್ಷದ ಸಾಮಾನ್ಯ ಸಭೆಗೆ ಭಾಗವಹಿಸಬೇಕೆಂದು ಹೇಳಲಾಗುತ್ತಿದೆ. ಆದರೆ ಷೇರುದಾರರಿಗೆ ಸಾಮಾನ್ಯ ಸಭೆಯ ಮಾಹಿತಿಯನ್ನೇ ನೀಡಿಲ್ಲ. ಹೀಗಿರುವಾಗ ಸಾಮಾನ್ಯ ಸಭೆಗೆ ಹಾಜರಾಗುವುದಾದರೂ ಹೇಗೆ ಎಂದು ಆರ್.ಮಹಲಿಂಗಯ್ಯ ಪ್ರಶ್ನಿಸಿದ್ದಾರೆ. 

ಐದು ವರ್ಷದಲ್ಲಿ ಸಂಘದಲ್ಲಿ ಕನಿಷ್ಠ ಎರಡು ಬಾರಿಯಾದರೂ ವ್ಯವಹರಿಸಬೇಕು ಎಂಬ ನಿಯಮವನ್ನು ಅಳವಡಿಸಲಾಗಿದೆ. ಸಂಘದಲ್ಲಿ ಸಾಲವನ್ನೂ ಸಹ ನೀಡಿಲ್ಲ. ಯಾವುದೇ ಅನುಕೂಲವನ್ನೂ ಮಾಡಿಲ್ಲ. ಹಾಗಾಗಿ ಜನರು ಈ ಸಂಘದ ಬಗ್ಗೆ ನಿರಾಸಕ್ತರಾಗಿದ್ದಾರೆ. ಹಾಗಾಗಿ ರೈತಾಪಿಗಳು ಈ ಸಂಘದಲ್ಲಿ ಯಾವುದೇ ಪ್ರಯೋಜನವಿಲ್ಲವೆಂದು ವ್ಯವಹಾರ ಮಾಡಿಲ್ಲ ಎಂದು ಹೇಳಿದರು.

ಈ ಇಲ್ಲದ ಕಾನೂನುಗಳಿಂದ ಸುಮಾರು ತಾಲೂಕಿನಲ್ಲಿ ಸುಮಾರು 8 ಸಾವಿರ ಮಂದಿಗೆ ಮತದಾನದ ಹಕ್ಕನ್ನು ಈ ಬ್ಯಾಂಕ್ ಕಸಿದುಕೊಂಡಿದೆ. ಕೂಡಲೇ ಬ್ಯಾಂಕಿನ ಆಡಳಿತ ಮಂಡಲಿ ಮತ್ತು ಸಿಬ್ಬಂದಿ ಕಡಿಮೆ ಷೇರು ಹಣ ಕಟ್ಟಿರುವವರಿಂದ ಉಳಿಕೆ ಹಣ ಕಟ್ಟಿಸಿಕೊಂಡು ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ಬ್ಯಾಂಕಿನ ಮುಂಭಾಗ ಷೇರುದಾರರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಆರ್.ಮಹಲಿಂಗಯ್ಯ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಷೇರುದಾರರಾದ ಕುಣಿಕೇನಹಳ್ಳಿಯ ನರಸೇಗೌಡ ಮತ್ತು ಬೊಮ್ಮೇಗೌಡ ಉಪಸ್ಥಿತರಿದ್ದರು.ಸ್ಪಷ್ಟನೆ:

ಈ ಕುರಿತು ಸ್ಪಷ್ಟನೆ ನೀಡಿರುವ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕಿ ಎಚ್.ಎಸ್.ಪಲ್ಲವಿ, ಮತದಾನ ಪ್ರಕ್ರಿಯೆ ಇರುವ ಮಾನದಂಡವನ್ನು ರಾಜ್ಯ ಸರ್ಕಾರವೇ ನಿಗದಿಪಡಿಸಿದೆ. ಕಳೆದ ಹತ್ತು ವರ್ಷಗಳಿಂದಲೂ ಹಲವು ತಿದ್ದುಪಡಿ ತಂದು ಸಹಕಾರ ಸಂಘದ ಚುನಾವಣೆಗೆ ಮಾನದಂಡವನ್ನು ನೀಡಿದೆ. ಆ ಪ್ರಕಾರವಾಗೇ ನಾವು ಕ್ರಮ ಕೈಗೊಂಡಿದ್ದೇವೆ. ನಮ್ಮ ಸಂಘದಲ್ಲಿ ಸುಮಾರು 9700 ಮಂದಿ ಸದಸ್ಯರಿದ್ದಾರೆ. ಇವರಲ್ಲಿ ಸುಮಾರು ಎಂಟು ಸಾವಿರ ಮಂದಿ ಕಡಿಮೆ ಷೇರು ಇರುವ ಕಾರಣ, ಐದು ವರ್ಷದ ಅವಧಿಯಲ್ಲಿ 2 ಬಾರಿಯೂ ಸಾಮಾನ್ಯ ಸಭೆಗೆ ಹಾಜರಾಗದೇ ಇರುವುದು, ಕನಿಷ್ಠ ಎರಡು ಬಾರಿ ಬ್ಯಾಂಕಿನಲ್ಲಿ ವ್ಯವಹಾರ ಮಾಡದೇ ಇರುವ ಕಾರಣಕ್ಕೆ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 ಷೇರು ಹಣ ಒಂದು ಸಾವಿರ ರು. ಕಟ್ಟಿರುವವರೂ ಸಹ ಎರಡು ಬಾರಿ ವ್ಯವಹಾರ ಮಾಡದಿರುವ ಕಾರಣ ಮತ್ತು ಎರಡು ಸಾಮಾನ್ಯ ಸಭೆಗೆ ಹಾಜರಾಗದಿರುವ ಕಾರಣಕ್ಕೂ ಅವರ ಸದಸ್ಯತ್ವ ರದ್ದಾಗಿದೆ. ಮುಂಬರುವ ದಿನಗಳಲ್ಲಿ ಉಳಿಕೆ ಷೇರು ಹಣ ಕಟ್ಟಿ ಸದಸ್ಯತ್ವವನ್ನು ನವೀಕರಿಸಬಹುದು. ಮುಂಬರುವ 5 ವರ್ಷಗಳಲ್ಲಿ ಕನಿಷ್ಠ ಎರಡು ಬಾರಿ ವ್ಯವಹಾರ ನಡೆಸುವುದು, ಎರಡು ಸಾಮಾನ್ಯ ಸಭೆಗೆ ಹಾಜರಾಗುವ ಮೂಲಕ ತಮ್ಮ ಸದಸ್ಯತ್ವವನ್ನು ಉಳಿಸಿಕೊಂಡು ಚುನಾವಣಾ ಪ್ರಕ್ರಿಯೆಗೆ ಅವಕಾಶ ಮಾಡಿಕೊಳ್ಳಬಹುದಾಗಿದೆ ಎಂದು ಎಚ್. ಎಸ್.ಪಲ್ಲವಿ ಸ್ಪಷ್ಠಪಡಿಸಿದ್ದಾರೆ. ಸಂಘದಲ್ಲಿ 500 ರು.ಗಳಿಗಿಂತ ಹೆಚ್ಚು ಷೇರು ಹಣ ಇಟ್ಟಿರುವವರಿಗೆಲ್ಲಾ ಸಂಘದ ಬೈಲಾದ ಪ್ರಕಾರ ಎಲ್ಲಾ ಮಾಹಿತಿಯನ್ನು ಸಾಮಾನ್ಯ ಸಭೆಯ ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.