ಎಸ್ಪಿ ಸೂಚನೆಯನ್ನು ಪೊಲೀಸರೇ ಪಾಲಿಸುತ್ತಿಲ್ಲವೇಕೆ..?

KannadaprabhaNewsNetwork | Updated : May 10 2025, 10:54 AM IST

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಓವರ್‌ ಲೋಡ್‌ ಎಂ ಸ್ಯಾಂಡ್‌ ತುಂಬಿದ ಟಿಪ್ಪರ್‌ಗಳು. - ಎಸ್ಪಿ ಸೂಚನೆಯನ್ನು ಪೊಲೀಸರೇ ಪಾಲಿಸುತ್ತಿಲ್ಲವೇಕೆ..?

 ಗುಂಡ್ಲುಪೇಟೆ : ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇತ್ತೀಚೆಗೆ ಕ್ವಾರಿ ಲೀಸ್‌ದಾರರು, ಕ್ರಷರ್‌ ಮಾಲಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ನೀಡಿದ ಸೂಚನೆಯನ್ನು ಸ್ಥಳೀಯ ಪೊಲೀಸರೇ ಪಾಲಿಸುತ್ತಿಲ್ಲ ಎಂಬುದು ತಾಲೂಕಿನಾದ್ಯಂತ ದಿನೇ ದಿನೇ ಸಾಬೀತಾಗುತ್ತಿದೆ.!

ಸಂಚಾರ ನಿಯಮ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಕಳೆದ ತಿಂಗಳು ಕ್ವಾರಿ ಲೀಸ್‌ದಾರರು, ಕ್ರಷರ್‌ ಮಾಲಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿ, ಸಂಚಾರ ನಿಯಮ ಹಾಗೂ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದನ್ನು ಸ್ಮರಿಸಬಹುದು. ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಠಾಣಾ ಸರಹದ್ದಿನಲ್ಲಿ ಸಂಚರಿಸುವ ಟಿಪ್ಪರ್‌ಗಳು ಓವರ್‌ ಲೋಡ್‌ ಎಂ.ಸ್ಯಾಂಡ್‌, ಜಲ್ಲಿ ಹಾಗೂ ಕಲ್ಲನ್ನು ಮೇಲೋದಿಕೆ ಇಲ್ಲದೆ ಸಂಚರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ ಉಲ್ಲಂಘಿಸುತ್ತಿದ್ದರೂ ಪೊಲೀಸರು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

ಟಿಪ್ಪರ್‌ ಮಿತಿ ಭಾರ ಹಾಕಬಾರದು ಎಂಬ ಸೂಚನೆ ಸ್ಪಷ್ಟವಾಗಿ ಉಲ್ಲಂಘಿಸಿ, ಬೇಗೂರು, ತೆರಕಣಾಂಬಿ ಠಾಣಾ ಮುಂದೆಯೇ ಹೋದರೂ ಟಿಪ್ಪರ್‌ ತಡೆದು ತಪಾಸಣೆ ಮಾಡುತ್ತಿಲ್ಲ. ಅಧಿಕ ಭಾರದ ಪ್ರಕರಣಗಲ್ಲಿ ನ್ಯಾಯಾಲಯದ ದೋಷಾರೋಪಣಾ ಪಟ್ಟಿ ಸಲ್ಲಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂದ್ದಿದ್ದರೂ ಟಿಪ್ಪರ್‌ ಚಾಲಕರು ಕ್ಯಾರೆ ಎನ್ನದೆ ಪೊಲೀಸರ ಎದುರೇ ಸಂಚರಿಸುತ್ತಿವೆ.

ತಿಂಗಳ ವಸೂಲಿ ಕಾರಣ?

ಕ್ವಾರಿ ಹಾಗೂ ಕ್ರಷರ್‌ನಿಂದ ತಿಂಗಳ ವಸೂಲಿಗೆ ಅಧಿಕಾರಿಗಳು ಇಳಿದಿರುವ ಕಾರಣ ಮಿತಿ ಮೀರಿದ ಭಾರ ಹೊತ್ತರ ಟಿಪ್ಪರ್‌ಗಳು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದರೂ ಪೊಲೀಸರು ಕೇಳುತ್ತಿಲ್ಲ ಎಂಬ ಆರೋಪ ಜನರಲ್ಲಿ ಕೇಳಿ ಬರುತ್ತಿರುವುದಂತು ನಿಜ.

ಸಿಬ್ಬಂದಿ ಇದ್ದರೂ ಟಿಪ್ಪರ್‌ ನಿಲ್ಲಿಸಲ್ಲ!

ಕನ್ನಡಪ್ರಭ ವರದಿ ಬಳಿಕ ಹಿರೀಕಾಟಿ ಖನಿಜ ತನಿಖಾ ಠಾಣೆಗೆ ಸಿಬ್ಬಂದಿ ಹಾಕಿದ್ದರೂ ಟಿಪ್ಪರ್‌ಗಳು ಮಾತ್ರ ನಿಲ್ಲಿಸಲ್ಲ, ಪರ್ಮಿಟ್‌ ಹಾಗೂ ಎಂಡಿಪಿ ಎಂಟ್ರಿ ಮಾಡಿಸಲ್ಲ. ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಕಾಟಾಚಾರಕ್ಕೆ ಚೆಕ್‌ಪೋಸ್ಟ್‌ ಇದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಸ್ತುವಾರಿ ವಹಿಸಿದ್ದರೂ ತಪಾಸನೆ ಶೂನ್ಯ. ಚೆಕ್‌ಪೋಸ್ಟ್‌ ಓಪನ್‌ ಆಗಿದೆ, ಆದರೆ ಸಂಜೆ 5 ಅಥವಾ 6 ರ ಬಳಿಕ ಚೆಕ್‌ಪೋಸ್ಟ್‌ ಮುಚ್ಚಿ ಸಿಬ್ಬಂದಿ ತೆರಳುತ್ತಿದ್ದಾರೆ. 

ಬೀಗ ಬಿದ್ದ ಬಳಿಕ ಕ್ರಷರ್‌ಗಳಿಂದ ರಾತ್ರಿ ಪೂರ್ತಿ ಟಿಪ್ಪರ್‌ ಸಂಚರಿಸುತ್ತವೆ ಅದು ಪರ್ಮಿಟ್‌ ಹಾಗೂ ಎಂಡಿಪಿ ವಂಚಿಸಿ ಎಂದು ಬಿಡಿಸಿ ಹೇಳಬೇಕಿಲ್ಲ. ಈ ಸೌಭಾಗ್ಯಕ್ಕೆ ಚೆಕ್‌ ಪೋಸ್ಟ್‌ ಏಕೆ ಬೇಕು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಏಳುತ್ತಿದೆ. ಜಿಲ್ಲಾಡಳಿತ ಚೆಕ್‌ಪೋಸ್ಟ್‌ ಆರಂಭಿಸಿದ್ದೇ ಸಾಧನೆ ಎಂಬಂತೆ ಬೀಗುತ್ತಿದೆ. ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ರಾಜಧನ ವಂಚನೆ ತಡೆಯುವ ಕೆಲಸವಂತೂ ಮಾಡುತ್ತಿಲ್ಲ.