‘ನವರಾತ್ರಿಯಲ್ಲಾದ್ರೂ ಸಮೀಕ್ಷೆಯಿಂದ ಬಿಡುವು ಕೊಡಿ’

KannadaprabhaNewsNetwork |  
Published : Sep 15, 2025, 01:00 AM IST
ಶಾಲೆ | Kannada Prabha

ಸಾರಾಂಶ

ಸೆ.22ರಿಂದ ಅ.7ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಸಮೀಕ್ಷೆ) ಕಾರ್ಯದ ಹೊರೆಯನ್ನು ಸರ್ಕಾರಿ ಶಾಲೆಗಳ 1.75 ಲಕ್ಷ ಶಿಕ್ಷಕರಿಗೆ ಮಾತ್ರ ಹೊರಿಸಿರುವ ಸರ್ಕಾರದ ಕ್ರಮಕ್ಕೆ ಶಿಕ್ಷಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದಲ್ಲಿ 40ಕ್ಕೂ ಹೆಚ್ಚು ಇಲಾಖೆಗಳಿದ್ದರೂ ಸೆ.22ರಿಂದ ಅ.7ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಸಮೀಕ್ಷೆ) ಕಾರ್ಯದ ಹೊರೆಯನ್ನು ಸರ್ಕಾರಿ ಶಾಲೆಗಳ 1.75 ಲಕ್ಷ ಶಿಕ್ಷಕರಿಗೆ ಮಾತ್ರ ಹೊರಿಸಿರುವ ಸರ್ಕಾರದ ಕ್ರಮಕ್ಕೆ ಶಿಕ್ಷಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕೊನೆಯ ಪಕ್ಷ ಸರ್ಕಾರ ಪೂರ್ಣ ದಸರಾ ರಜೆ ದಿನಗಳಲ್ಲೇ ಸಮೀಕ್ಷಾ ಕಾರ್ಯ ನಡೆಸುವ ಬದಲು, ನವರಾತ್ರಿ ದಿನಗಳಲ್ಲಾದರೂ ನಮಗೆ ಬಿಡುವು ನೀಡಬೇಕು. ಈ ಅವಧಿಯ ಸಮೀಕ್ಷಾ ಕಾರ್ಯವನ್ನು ನಂತರ ಕೆಲ ಶಾಲಾ ದಿನಗಳಲ್ಲಿ ತರಗತಿ ಅವಧಿ ಮುಗಿದ ಬಳಿಕ ಅಥವಾ ಶನಿವಾರ ಭಾನುವಾರ ಪೂರ್ಣಗೊಳಿಸಿಕೊಡಲು ಅವಕಾಶ ಕಲ್ಪಿಸಬೇಕು ಎಂದು ಶಿಕ್ಷಕರು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಶಿಕ್ಷಕರ ಸಂಘವೂ ಸಹಮತ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ಸರ್ಕಾರ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದೆ.

ದಸರಾ ರಜೆ ಸೆ.20ರಿಂದ ಅ.7ರವರೆಗೆ (18 ದಿನ) ಇದೆ. ಈ 18 ದಿನಗಳ ಪೈಕಿ 17 ದಿನಗಳನ್ನು ಸಮೀಕ್ಷಾ ಕಾರ್ಯಕ್ಕೇ ಮೀಸಲಿಡಬೇಕಾಗಿದೆ. ದಸರಾ ರಜೆ ಅವಧಿಯಲ್ಲಿ ಸಮೀಕ್ಷೆಗೆ ಬಳಸಿದರೆ ನಮಗೆ ರಜೆ ಯಾವಾಗ, ವಿಶ್ರಾಂತಿ ಬೇಡವೇ, ನಮಗೂ ಕುಟುಂಬ ಇದೆ ಎನ್ನುವುದನ್ನು ಸರ್ಕಾರ ಮನಗಾಣಬೇಕು ಎನ್ನುವುದು ಶಿಕ್ಷಕರ ಒತ್ತಾಯವಾಗಿದೆ.

ರಜೆ ರಹಿತ ವೃತ್ತಿ ಎಂದು ಘೋಷಿಸಲಿ:

ದಸರಾ, ಬೇಸಿಗೆ ರಜೆ ಇರುತ್ತದೆ ಎನ್ನುವ ಕಾರಣಕ್ಕೆ ಶಿಕ್ಷಕ ವೃತ್ತಿಯನ್ನು ರಜೆ ಸಹಿತ ವೃತ್ತಿ ಎಂದು ಗುರುತಿಸಲಾಗಿದೆ. ಆದರೆ, ಇದು ಹೆಸರಿಗಷ್ಟೇ. ದಸರಾ, ಬೇಸಿಗೆ ರಜೆ ಅವಧಿಯಲ್ಲೂ ಸರ್ಕಾರ ಒಂದಿಲ್ಲೊಂದು ಕೆಲಸಕ್ಕೆ ನಮ್ಮನ್ನು ಬಳಸಿಕೊಳ್ಳುತ್ತದೆ. ಇದಕ್ಕೆ ಪ್ರತಿಯಾಗಿ ನಮಗೆ ಬೇರೆ ಇಲಾಖೆಗಳಂತೆ ಗಳಿಕೆ ರಜೆಯನ್ನೂ ನೀಡುವುದಿಲ್ಲ. ಹಾಗಾಗಿ ನಮ್ಮ ವೃತ್ತಿಯನ್ನೂ ರಜೆ ರಹಿತ ವೃತ್ತಿ ಎಂದು ಘೋಷಿಸಿ ಗಳಿಕೆ ರಜೆಗೆ ಅವಕಾಶ ಕಲ್ಪಿಸಲಿ. ಇಲ್ಲವೇ ದಸರಾ, ಬೇಸಿಗೆ ರಜೆ ಅವಧಿಯಲ್ಲಿ ನಮ್ಮನ್ನು ಯಾವುದೇ ಕಾರ್ಯಕ್ಕೆ ಬಳಸಿಕೊಂಡರೆ ಆ ದಿನಗಳನ್ನು ಗಳಿಕೆ ರಜೆಗಳಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡಲಿ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಆಗ್ರಹಿಸಿದ್ದಾರೆ.

-ಬಾಕ್ಸ್‌-

ಕಳೆದ ಸಮೀಕ್ಷೆ ಬಾಕಿ ಕೊಟ್ಟಿಲ್ಲ

ಈ ಮಧ್ಯೆ, ಸರ್ಕಾರ ಶಿಕ್ಷಕರನ್ನು ಚುನಾವಣಾ ಕಾರ್ಯ, ವಿವಿಧ ಜಾತಿ, ಜನಗಣತಿ ಸಮೀಕ್ಷಾ ಕಾರ್ಯ ಸೇರಿ ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುತ್ತದೆ. ಆದರೆ, ಕಾಲ ಮಿತಿಯಲ್ಲಿ ಅದಕ್ಕೆ ಸಂಬಂಧಿಸಿದ ಗೌರವಧನ ನೀಡುವುದಿಲ್ಲ. ಇಲ್ಲವೇ ಕೊಡುವ ಗೌರವಧನ ಕೆಲಸಕ್ಕೆ ತಕ್ಕಂತೆ ಇರುವುದಿಲ್ಲ ಎನ್ನುವುದು ಕೂಡ ಶಿಕ್ಷಕರ ಆರೋಪ. 2024ರಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಾಗಿ (ಬಿಎಲ್‌ಒ) ಕಾರ್ಯ ನಿರ್ವಹಿಸಿದವರಿಗೆ ಈವರೆಗೆ ಗೌರವಧನ ಪಾವತಿಸಿಲ್ಲ. ಕಳೆದ ಜಾತಿ ಸಮೀಕ್ಷೆ ಕಾರ್ಯ ನಡೆಸಿದವರಿಗೂ ಇನ್ನೂ ಪೂರ್ಣ ಸಂಭಾವನೆ ಬಂದಿಲ್ಲ ಎಂದು ಅನೇಕರು ದೂರಿದ್ದಾರೆ.

ರಜೆ ಅವಧಿಯಲ್ಲಿ ನಿರ್ವಹಿಸಿದ ಕಾರ್ಯಗಳಿಗೆ ಸಂಬಂಧಪಟ್ಟ ಪ್ರಾಧಿಕಾರಗಳು ಹಾಜರಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಬಿಇಒ ಬದಲಾಗಿದ್ದರೆ ನನ್ನ ಅವಧಿಯಲ್ಲಿ ಮಾಡಿಲ್ಲ ಎನ್ನುತ್ತಾರೆ. ಇದೆಲ್ಲದರ ಬಗ್ಗೆ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವೂ ಆಗಿಲ್ಲ ಎನ್ನುವುದು ಶಿಕ್ಷಕರ ಸಂಘದ ಪದಾಧಿಕಾರಿಗಳ ದೂರು.

-ಕೋಟ್‌-

ಸರ್ಕಾರ ಜಾತಿ ಸಮೀಕ್ಷೆ ಕಾರ್ಯವನ್ನು ನವರಾತ್ರಿ ನಂತರ ಆರಂಭಿಸಲಿ ಅಥವಾ ನವರಾತ್ರಿ ಅವಧಿಯಲ್ಲಾದರೂ ಶಿಕ್ಷಕರಿಗೆ ಬಿಡುವು ನೀಡಿ ನಂತರದ ಶಾಲಾ ಅವಧಿಯ ದಿನದಲ್ಲೇ ತರಗತಿ ಅವಧಿ ಮುಗಿದ ಬಳಿ, ಕೆಲ ಶನಿವಾರ, ಭಾನುವಾರ ಸಮೀಕ್ಷೆ ನಡೆಸಲು ಅವಕಾಶ ನೀಡಲಿ.

- ಚಂದ್ರಶೇಖರ ನುಗ್ಗಲಿ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ