ದಿ. ಏರ್‌ ಕಮೊಡೋರ್‌ ಚಂದ್ರಶೇಖರ್‌ಗೆ ಶ್ರದ್ಧಾಂಜಲಿ

KannadaprabhaNewsNetwork |  
Published : Sep 15, 2025, 01:00 AM IST
M K Chandrashekar 5 | Kannada Prabha

ಸಾರಾಂಶ

 ವಾಯುಸೇನೆಯಲ್ಲಿ ಸುದೀರ್ಘ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ವಯೋಸಹಜ ಅನಾರೋಗ್ಯದಿಂದ ಇತ್ತೀಚೆಗೆ ನಿಧನ ಹೊಂದಿದ ಏರ್ ಕಮೊಡೋರ್ ಎಂ.ಕೆ.ಚಂದ್ರಶೇಖರ್ (ನಿವೃತ್ತ) ಅವರಿಗೆ ಫ್ಲ್ಯಾಗ್ಸ್‌ ಆಫ್‌ ಹಾನರ್‌ ಫೌಂಡೇಷನ್‌ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

  ಬೆಂಗಳೂರು :  ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ವಯೋಸಹಜ ಅನಾರೋಗ್ಯದಿಂದ ಇತ್ತೀಚೆಗೆ ನಿಧನ ಹೊಂದಿದ ಏರ್ ಕಮೊಡೋರ್ ಎಂ.ಕೆ.ಚಂದ್ರಶೇಖರ್ (ನಿವೃತ್ತ) ಅವರಿಗೆ ಫ್ಲ್ಯಾಗ್ಸ್‌ ಆಫ್‌ ಹಾನರ್‌ ಫೌಂಡೇಷನ್‌ ವತಿಯಿಂದ ಇಲ್ಲಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಭಾನುವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಚಂದ್ರಶೇಖರ್‌ ಅವರ ಪುತ್ರ ಹಾಗೂ ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌, ವಾಯುಪಡೆ ಸೇರಿದಂತೆ ಹಿರಿಯ ಸೇನಾಧಿಕಾರಿಗಳು, ಸಮಕಾಲೀನ ಅಧಿಕಾರಿಗಳು, ಸ್ನೇಹಿತರು, ಕುಟುಂಬಸ್ಥರು ಪುಷ್ಪಾರ್ಪಣೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸಿದರು.

ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ವಾಯುಸೇನೆಯಲ್ಲಿ ಚಂದ್ರಶೇಖರ್ ಅವರ ದೇಶಸೇವೆ ಅನನ್ಯವಾದುದು. ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಯುದ್ಧವಿಮಾನವನ್ನು ಪೈಲಟ್‌ ಆಗಿ ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ನಿವೃತ್ತಿ ಬಳಿಕವೂ ಅವರು ಸಕ್ರಿಯರಾಗಿ ಸೇನೆಯ ಸೇವಾಕಾರ್ಯ, ಕಾರ್ಯಚಟುವಟಿಕೆ ಮುಂದುವರಿಸಿದ್ದರು ಎಂದರು.

ತಂದೆಯ ದಾರಿಯಲ್ಲಿ ಮುನ್ನಡೆದಿರುವ ರಾಜೀವ್‌ ಚಂದ್ರಶೇಖರ್‌ ಅವರು ಒಬ್ಬ ಉದ್ಯಮಿ, ರಾಜಕಾರಣಿಗಿಂತ ಹೆಚ್ಚಾಗಿ ಶಿಸ್ತಿನ ಸೇನಾವರ್ಗಕ್ಕೆ ಸೇರಿದಂತೆ ಕಾಣುತ್ತಾರೆ, ಅವರ ದೃಢತೆ, ಕಾರ್ಯ ಪೂರ್ಣಗೊಳಿಸುವ ರೀತಿಯಲ್ಲಿ ಅದು ತೋರುತ್ತದೆ ಎಂದರು.

ಏರ್‌ ಕಮೋಡೋರ್‌ ಭಟ್‌ ಮಾತನಾಡಿ, ಸಾಕಷ್ಟು ಪರಿಣತ ವಾಯುಪಡೆಯ ಪೈಲಟ್‌ ಆಗಿದ್ದ ಚಂದ್ರಶೇಖರ್ ಅವರು ಅತ್ಯುತ್ತಮ ಟಾಸ್ಕ್‌ಮಾಸ್ಟರ್‌ ಅಗಿದ್ದರು. ನಿಖರತೆಯಿಂದ ಕೆಲಸ ಮಾಡುತ್ತಿದ್ದ ಅವರಿಂದ ಕಲಿಯುವುದು ಸಾಕಷ್ಟಿತ್ತು ಎಂದರು.

ಏರ್‌ ಮಾರ್ಷಲ್‌ ಎಸ್‌.ಕೆ.ನಾಯರ್‌ ಮಾತನಾಡಿ, ಯುದ್ಧ ವಿಮಾನ ಹಾರಾಟದಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದ ಚಂದ್ರಶೇಖರ್‌ ಅವರು ಬಲಬದಿಯಲ್ಲಿ ಕೂತು ಪುಸ್ತಕ ಓದುತ್ತ ವಿಮಾನ ಹಾರಾಟ ಮಾಡುವಷ್ಟು ಕೌಶಲ್ಯ ಗಳಿಸಿದ್ದರು. ಅದರಲ್ಲೂ ಡಕೋಟಾ ಡಿಸಿ3 ವಿಪಿ905 ಪರಶುರಾಮ ಯುದ್ಧ ವಿಮಾನ ಹಾರಾಟಕ್ಕೆ ಹೆಸರು ಗಳಿಸಿದ್ದರು ಎಂದರು.

ಹವಾಲ್ದಾರ್‌ ವೀರಪ್ಪ ಗುಮಕರ್‌ ಮಾತನಾಡಿ, ಮಿಲಿಟರಿ ಸ್ಮಾರಕ ಹೇಗಿರಬೇಕು? ಎಂಬ ಸ್ಪಷ್ಟ ಕಲ್ಪನೆ ಹೊಂದಿದ್ದ ಚಂದ್ರಶೇಖರ್‌ ಅವರು ಸುಮಾರು ಒಂದೂವರೆ ದಶಕಗಳ ಕಾಲ ಆ ಕಾರ್ಯವನ್ನು ಧ್ಯಾನದಂತೆ ಮಾಡಿದ್ದಾರೆ. ಸ್ಮಾರಕ ನಿರ್ಮಿಸಲು ಹಗಲು ರಾತ್ರಿ ಶ್ರಮಿಸಿದ್ದರು. ವೀರಗಲ್ಲನ್ನು ತರಿಸಿ ಅದನ್ನು ಪ್ರತಿಷ್ಠಾಪಿಸುವವರೆಗೆ ಅವರ ಕೊಡುಗೆಯಿದೆ ಎಂದು ಹೇಳಿದರು.

ಲೆಫ್ಟಿನೆಂಟ್‌ ಕರ್ನಲ್‌ ಪಳನಿರಾಜ್ ಮಾತನಾಡಿ, ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿನ ವಸ್ತು ಸಂಗ್ರಹಾಲಯವನ್ನು ಅವರು ಸಾಕಷ್ಟು ಮುತುವರ್ಜಿಯಿಂದ ಕಟ್ಟುವಲ್ಲಿ ಮಾರ್ಗದರ್ಶನ ಮಾಡಿದ್ದರು. ರಾಜ್ಯ ಸರ್ಕಾರ ಆದಷ್ಟು ಬೇಗ ಆ ಸಂಗ್ರಹಾಲಯವನ್ನು ಪೂರ್ಣಗೊಳಿಸಿ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು.

ಕ್ಯಾ.ಎಸ್‌.ವಿ.ಭಂಡಾರಿ ಮಾತನಾಡಿ, ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ನಿರ್ಮಿಸಲಾಗುವ ಭವನ, ಹಾಲ್‌ಗೆ ಎಂ.ಕೆ.ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಹೇಳಿದರು.

ನಿವೃತ್ತ ಸೇನಾಧಿಕಾರಿಗಳಾದ ವಿಂಗ್‌ ಕಮಾಂಡರ್ ಎನ್‌ಜೆಡೆಇ ಕಾನ್ಸ್ಐಸೊ, ಕರ್ನಲ್‌ ಎಸ್‌.ಎಸ್‌.ರಾಜನ್‌, ಕ್ಯಾ. ಬಾಲಚಂದ್ರನ್‌, ಹವಾಲ್ದಾರ್ ರಾಘವೇಂದ್ರರಾವ್‌, ಹವಾಲ್ದಾರ್‌ ಆರ್‌.ಎಂ.ಮರಿಬಸಪ್ಪ ಸೇರಿ ಇತರರು ಎಂ.ಕೆ.ಚಂದ್ರಶೇಖರ್ (ನಿವೃತ್ತ) ಅವರಿಗೆ ಪುಷ್ಪನಮನ ಸಲ್ಲಿಸಿದರು. ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ