ಮಕ್ಕಳನ್ನು ದುಡಿಮೆಗೆ ನೂಕದೆ ಉತ್ತಮ ಶಿಕ್ಷಣ ನೀಡಿ

KannadaprabhaNewsNetwork |  
Published : Aug 22, 2025, 12:00 AM IST
ಸಿಕೆಬಿ-5 ನಗರದ ಬಾಪೂಜಿನಗರದಲ್ಲಿ ನಡೆದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು, ಕಾನೂನು ಅರಿವು ನೆರವು ಜಾಗೃತಿ ಅಭಿಯಾನದಲ್ಲಿ ನ್ಯಾ.ಬಿ.ಶಿಲ್ಪ ಮಾತನಾಡಿದರು | Kannada Prabha

ಸಾರಾಂಶ

ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಬಾಲ ಕಾರ್ಮಿಕರಿದ್ದರೆ ಕೂಡಲೇ ಸಂಬದಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಿ. ಬಾಲ ಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ದುಡಿಮೆಯಲ್ಲಿ ತೂಡಗಿಸಿಕೊಂಡರೆ 1098ಕ್ಕೆ ಕರೆ ಮಾಡಿ ತಿಳಿಸಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದಿನ ಮಕ್ಕಳೆ ದೇಶದ ನಾಳಿನ ಭವಿಷ್ಯದ ಕುಡಿಗಳು. ಅವರಿಗೆ ಒಳ್ಳೆಯ ಶಿಕ್ಷಣ ನೀಡಬೇಕೆ ಹೊರತು ದುಡಿಮೆಗೆ ಕಳಿಸಬಾರದು. ಮಕ್ಕಳನ್ನು ದುಡಿಮೆಗೆ ಹಚ್ಚದೆ ಅವರನ್ನು ಹಣತೆಯಂತೆ ಬೆಳಗಿಸಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಅಭಿಪ್ರಾಯಪಟ್ಟರು.

ನಗರದ ಬಾಪೂಜಿನಗರದಲ್ಲಿ ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು, ಕಾನೂನು ಅರಿವು ನೆರವು ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

1098 ಸಂಖ್ಯೆಗೆ ಕರೆ ಮಾಡಿ

ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಬಾಲ ಕಾರ್ಮಿಕರಿದ್ದರೆ ಕೂಡಲೇ ಸಂಬದಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಿ. ಬಾಲ ಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ದುಡಿಮೆಯಲ್ಲಿ ತೂಡಗಿಸಿಕೊಂಡರೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಸಂಬಂದಪಟ್ಟ ಇಲಾಖೆ ಗಮನಕ್ಕೆ ಅಥವಾ 1098 ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಬಹುದು ಎಂದು ತಿಳಿಸಿದರು.

ಕಡ್ಡಾಯ ಶಿಕ್ಷಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಬಡತನದ ನೆಪದಲ್ಲಿ ಯಾರು ಕೂಡ ತಮ್ಮ ಮಕ್ಕಳನ್ನು ದುಡಿಮೆಗೆ ಕಳಿಸಬಾರದು. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕಾನೂನಿನ ಪ್ರಕಾರ ಶಿಕ್ಷೆ ತಪ್ಪಿದ್ದಲ್ಲ. ನೈರ್ಮಲ್ಯ ಕಾಪಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯತೆ ಹೆಚ್ಚಿನ ಒತ್ತು ನೀಡಿ ಆರೋಗ್ಯಕರ ಸಮಾಜಕ್ಕೆ ಕೈಜೋಡಿಸಬೇಕೆಂದರು.

ಮಕ್ಕಳ ಪೋಷಕರಿಗೆ ಸಲಹೆ

ಪ್ಯಾನಲ್ ವಕೀಲ ಎಂ.ಎಸ್.ಸಂದೀಪ್ ಚಕ್ರವರ್ತಿ ಮಾತನಾಡಿ, ಭಾರತದಲ್ಲಿ ಬಡತನ ಅನಕ್ಷರತೆಯಿಂದ ತಮ್ಮ ಜೀವನ ಸಾಗಿಸಲು ಅನಿವಾರ್ಯವಾಗಿ ಪಾಲಕರು ತಮ್ಮ ಜೊತೆಗೆ ತಮ್ಮ ಮಕ್ಕಳು ದುಡಿಮೆ ಕರೆದುಕೊಂಡು ಹೋಗುತ್ತಿದ್ದಾರೆ. ಪಾಲಕರೇ ಚಿಂತನೆ ಮಾಡಿ, ಮಕ್ಕಳ ದುಡಿಮೆ ನಿಲ್ಲಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಮಕ್ಕಳನ್ನು ದುಡಿಸುವುದು ಅಪರಾಧ

ಕಾರ್ಮಿಕ ನಿರೀಕ್ಷಕಿ ಎಂ.ಮಂಜುಳಾ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.ಒಂದು ವೇಳೆ ದುಡಿಸಿಕೊಂಡಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಸಮಾರಂಭದಲ್ಲಿ ನಗರಸಭೆ ಸದಸ್ಯೆ ಅಣ್ಣಮ್ಮ, ವಕೀಲರುಗಳಾದ ವಂದನ, ಸರಳ, ನಜಿಮಾತಬ್ಜಮ್, ನರಸಿಂಹಮೂರ್ತಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಮೇಶ್, ಮತ್ತಿತರರು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ