ಸಚಿವ ಸುಧಾಕರ್ ಈಗ ಸಹಕಾರಿ ಕ್ಷೇತ್ರದ ಸುಧಾರಕ

KannadaprabhaNewsNetwork |  
Published : Aug 22, 2025, 12:00 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಿ.ಸುಧಾಕರ್ ಅವರ ಸಹಕಾರಿ ಸೇವೆ ಗುರುತಿಸಿ, ಸರ್ಕಾರ 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದೆ.

ಚಿತ್ರದುರ್ಗ: ಸಹಕಾರ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಿ.ಸುಧಾಕರ್ ಅವರ ಸಹಕಾರಿ ಸೇವೆ ಗುರುತಿಸಿ, ಸರ್ಕಾರ 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಸಚಿವ ಡಿ.ಸುಧಾಕರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿದರು. ಚಿತ್ರದುರ್ಗ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತ, ಧರ್ಮಾತೀತವಾಗಿ ಹೆಸರಿಸಬಹುದಾದ ಕೆಲವೇ ವ್ಯಕ್ತಿಗಳಲ್ಲಿ ಡಿ.ಸುಧಾಕರ್ ರವರು ಒಬ್ಬರಾಗಿದ್ದು, ಸುಮಾರು 25 ವರ್ಷಗಳಿಂದ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಸಮಾನತೆ, ಸಹಬಾಳ್ವೆ, ಸಹಕಾರ, ಸಮರಸವನ್ನು ಅಳವಡಿಸಿಕೊಂಡು ಸಹಕಾರ ರಂಗದಲ್ಲಿ ದುಡಿಯುತ್ತಿದ್ದಾರೆ. ಇವರ ಸಹಕಾರ ಕ್ಷೇತ್ರದ ಸೇವೆ ಚಿತ್ರದುರ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ಮಟ್ಟದಲ್ಲೂ ವ್ಯಾಪಿಸಿದೆ. 2003ನೇ ಸಾಲಿನಲ್ಲಿ ಚಳ್ಳಕೆರೆಯ ಹೊಯ್ಸಳ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಸ್ಥೆಯ ಸಂಸ್ಥಾಪಕರಾಗಿ ಸಂಘ ನೋಂದಾಯಿಸಿ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾಗಿ ಇದುವರೆವಿಗೂ ಅಂದರೆ ಸುಮಾರು 22 ವರ್ಷಗಳಿಂದ ಈ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಘವು ರು.102.63 ಕೋಟಿಯ ದುಡಿಯುವ ಬಂಡವಾಳ, ರು. 111.72 ಕೋಟಿ ವ್ಯವಹಾರ, ರು.5.63 ಕೋಟಿಗಳ ನಿವ್ವಳ ಲಾಭಗಳಿಸಿ ಶೇ.25 ಡಿವಿಡೆಂಡ್ ಸದಸ್ಯರಿಗೆ ನೀಡಿದೆ. ಸದಸ್ಯರ ಹಾಗೂ ಗ್ರಾಹಕರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿದೆ. ಚಳ್ಳಕೆರೆ ತಾಲೂಕು ನಗರಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸುಧಾಕರ್ ಅವರು ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2004 ರಿಂದ 2024 ರವರೆಗೆ 5 ವರ್ಷಗಳ ಅವಧಿಗಳಲ್ಲಿ ನಡೆದ ಚಿತ್ರದುರ್ಗ ಡಿಸಿಸಿ ಬ್ಯಾಂಕಿನ ಚುನಾವಣೆಗಳಲ್ಲಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿ ನಂತರ ಬ್ಯಾಂಕಿನ ಅಧ್ಯಕ್ಷರಾಗಿ 20 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2024ರಿಂದ 2029ರ 5 ವರ್ಷಗಳ ಅವಧಿಗೆ ನಡೆದ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಿರ್ದೇಶಕರಾಗಿ ಮರು ಆಯ್ಕೆಯಾಗಿ ಮತ್ತೊಮ್ಮೆ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಧಾಕರ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜಿಲ್ಲೆಯ ಸಣ್ಣ, ಅತಿಸಣ್ಣ ರೈತರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ, ಅಲ್ಪಸಂಖ್ಯಾತ ಮತ್ತು ಮಹಿಳಾ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗಿದೆ. ಮತ್ತು ಬ್ಯಾಂಕ್ ಲಾಭಗಳಿಸಲು ಸಾಧ್ಯವಾಗಿದೆ. 2018-2019ನೇ ಸಾಲಿನಿಂದ ಬ್ಯಾಂಕಿನ ಸದಸ್ಯರುಗಳಿಗೆ ಡಿವಿಡೆಂಡ್‍ನ್ನು ನೀಡಲಾಗುತ್ತಿದೆ. ಡಿಸಿಸಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಮುಖ ಆಧ್ಯತೆಯನ್ನು ನೀಡಿ ಬ್ಯಾಂಕ್ ಪ್ರಗತಿ ಪಥದತ್ತ ಸಾಗಲು ಶ್ರಮಿಸಿದ್ದಾರೆ. 2013-14ರಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳ ರು.205.29 ಕೋಟಿ ಇದ್ದು, 2024-25ನೇ ಸಾಲಿನ ಅಂತ್ಯಕ್ಕೆ ರು. 1338.40 ಕೋಟಿಯಷ್ಟಾಗಿದೆ. ಬ್ಯಾಂಕಿನಿಂದ 71207 ರೈತರಿಗೆ ರು.703 ಕೋಟಿ ಕೃಷಿ, 280 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಬ್ಯಾಂಕ್ 2024-25ನೇ ಸಾಲಿಗೆ ರು. 8.03 ಕೋಟಿ ಲಾಭ ಗಳಿಸಿದೆ.ಸಿಡಿಸಿಸಿ ಬ್ಯಾಂಕಿನ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಸುಮಾರು 15 ವರ್ಷದಿಂದ ಸುಧಾಕರ್ ಸೇವೆ ಸಲ್ಲಿಸುತ್ತಿದ್ದಾರೆ. 2017-18ನೇ ಸಾಲಿನಲ್ಲಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಕ್ಕಾಗಿ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕಿನಿಂದ ಲೆಕ್ಕ ಪರಿಶೋಧನೆಯಲ್ಲಿ ‘ಎ’ ವರ್ಗೀಕರಣ ನೀಡಿ ರಾಜ್ಯಕ್ಕೆ ಪ್ರಥಮ ಸ್ಥಾನದ ಪ್ರಶಸ್ತಿ ಕೊಡಲಾಗಿತ್ತು.20 ವರ್ಷಗಳ ಹಿಂದೆ ಚಳ್ಳಕೆರೆಯಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಇದರ ಅಧ್ಯಕ್ಷರಾಗಿ ಈ ಸಂಸ್ಥೆಯ ಮೂಲಕ ಸಾವಿರಾರು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಚಳ್ಳಕೆರೆಯಲ್ಲಿ ಪಾಶ್ರ್ವನಾಥಜೈನ್ ಮಂದಿರದ ಟ್ರಸ್ಟ್ ಎಲ್ಲಾ ವರ್ಗದ ಬಡ ಮಕ್ಕಳಿಗೆ ಶಿಕ್ಷಣ, ಹಿರಿಯರಿಗೆ, ಮಹಿಳೆಯರಿಗೆ ಆರ್ಥಿಕ ಧನ ಸಹಾಯ ನೀಡುತ್ತಿದ್ದಾರೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ