ಹುಬ್ಬಳ್ಳಿ: ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಆಟೋ ಚಾಲಕರಿಗೂ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಆಟೋ ರಿಕ್ಷಾಗಳನ್ನೇ ನಂಬಿಕೊಂಡು ತಮ್ಮ ಉಪಜೀವನ ನಡೆಸುತ್ತಿರುವ ಆಟೋ ಚಾಲಕರು, ಉಚಿತ ಪ್ರಯಾಣದಂತಹ ಯೋಜನೆಯಿಂದ ಗ್ರಾಹಕರಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಚಾಲಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೋರ್ಟ್ ಆದೇಶದ ಅನ್ವಯ ಯಾತ್ರಿ, ಓಲಾ, ಉಬರ್, ಜಿಗ್ನೊ ಸೇರಿದಂತೆ ಹಲವಾರು ಟ್ರಾವೆಲ್ಸ್ ಏಜೆನ್ಸಿಗಳನ್ನು ಬಂದ್ ಮಾಡಲಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಪುನಃ ಆರಂಭಿಸಲು ಸರ್ಕಾರ ಅನುಮತಿ ನೀಡಬಾರದು. ಗುತ್ತಿಗೆ ಆಧಾರದ ಮೇಲೆ ಎರಡು, ಮೂರು ಚಕ್ರದ ವಾಹನ ಬಾಡಿಗೆ ನೀಡದಂತೆ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಆರೋಗ್ಯ ಸೇವೆ ನೀಡಿ: ಈ ವೇಳೆ ಸಂಘಟನೆ ರಾಜ್ಯಾಧ್ಯಕ್ಷ ಶೇಖರಯ್ಯಾ ಮಠಪತಿ ಮಾತನಾಡಿ, ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಆಟೋ ಚಾಲಕರಿಗೂ ನೀಡಬೇಕು. ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೀವನ್ ಉತ್ಕುರಿ, ರಫೀಕ್ ಕುಂದಗೋಳ, ರಾಜೇಶ ಬಿಜವಾಡ, ದಾವೂದ್ ಅಲಿಶೇಖ್, ಮಹಾವೀರ ಬಿಲಾನ್, ಮಲ್ಲಿಕಾರ್ಜುನ ನಂದಿಹಾಳ, ದಾವಲಸಾಬ್ ಕುರಹಟ್ಟಿ, ಗುರು ಬೆಟಗೇರಿ, ಮುರುಳಿ ಇಂಗಳಹಳ್ಳಿ, ಬಾಬರ್ ಜಮಖಾನ್, ಸಾದಿಕ್ ತಡಕೋಡ, ಅಮರ ಗದಗ, ಲೋಕೇಶ ಚಿಕ್ಕಮಗಳೂರ, ಅಮರೇಶ, ಶ್ರೀಕಾಂತ ಗಡಾದ, ಕಲ್ಲಪ್ಪ ಅಣ್ಣಿಗೇರಿ, ಶಿವರಾಜ ಸಿಂಗನಹಳ್ಳಿ, ಮಹೇಶ ದೊಡ್ಡಮನಿ, ಅಣ್ಣಪ್ಪ ಗುಡಿಹಾಳ ಸೇರಿದಂತೆ ಅನೇಕರಿದ್ದರು.