ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: 2 ಸೊಸೈಟಿ ಅಮಾನತು

KannadaprabhaNewsNetwork |  
Published : Sep 09, 2025, 01:01 AM IST
ಮದಮದಮ | Kannada Prabha

ಸಾರಾಂಶ

ಯಾವ ಸೊಸೈಟಿಗೆ ಎಷ್ಟು ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿಯೇ ಇಲಾಖೆ ಪ್ರತಿ ತಿಂಗಳು ಸರಬರಾಜು ಮಾಡುವುದರಿಂದ ಅದ್ಹೇಗೆ ಕೈಗಡ ಪಡೆದ? ಏಕೆ ಕೈಗಡ ಪಡೆದ? ಯಾರಿಗೆ ಕೊಟ್ಟ ಎಂಬುದಕ್ಕೂ ಆತನ ಮೌನವೇ ಉತ್ತರವಾಗಿತ್ತು ಎಂಬುದು ಗ್ರಾಮಸ್ಥರ ಅಂಬೋಣ.

ಹುಬ್ಬಳ್ಳಿ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವ ಉದ್ದೇಶದಿಂದ ಒಂದು ಗ್ರಾಮದ ಗೋದಾಮಿನಿಂದ ಮತ್ತೊಂದು ಗ್ರಾಮದ ಗೋದಾಮಿಗೆ ಸಾಗಿಸಿದ್ದನ್ನು ಪತ್ತೆ ಹಚ್ಚಿರುವ ಗ್ರಾಮಸ್ಥರು, ಪಟ್ಟು ಹಿಡಿದು ಕ್ರಮ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮಸ್ಥರ ಒತ್ತಡಕ್ಕೆ ಮಣಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಎರಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಅಮಾನತುಗೊಳಿಸಿ ಆದೇಶಿಸಿದೆ.

ಆಗಿರುವುದೇನು?:

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಹಿರೇಹೊನ್ನಹಳ್ಳಿ ಗ್ರಾಮದ ಸಂಘಕ್ಕೆ ಬರೋಬ್ಬರಿ 40 ಚೀಲ ಅಕ್ಕಿ, 10 ಚೀಲ ಜೋಳವನ್ನು ರಾತ್ರೋರಾತ್ರಿ ಖಾಸಗಿ ವಾಹನದ ಮೂಲಕ ಸಾಗಿಸಲಾಗಿತ್ತು.

ಈ ವಿಷಯ ಮರುದಿನ ಮಿಶ್ರಿಕೋಟಿ ಗ್ರಾಮಸ್ಥರಿಗೆ ಗೊತ್ತಾಗಿದೆ. ಆ ಬಳಿಕ ಹಿರೇಹೊನ್ನಹಳ್ಳಿ ಗ್ರಾಮಕ್ಕೆ ತೆರಳಿ ಪರಿಶೀಲನೆಯನ್ನೂ ನಡೆಸಿದ್ದಾರೆ. ಜತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳೂ ಆಗಮಿಸಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಸಾಗಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಿಶ್ರಿಕೋಟಿ ಸೊಸೈಟಿಯ ಕಾರ್ಯದರ್ಶಿ, ತಾನು ಹಿರೇಹೊನ್ನಹಳ್ಳಿ ಸೊಸೈಟಿಯಿಂದ ಕೈಗಡವಾಗಿ (ಸಾಲ) ಅನ್ನಭಾಗ್ಯದ ಅಕ್ಕಿ ಪಡೆದಿದ್ದೆ. ಅದನ್ನು ವಾಪಸ್‌ ಕೊಟ್ಟಿದ್ದೇನೆ ಅಷ್ಟೇ ಎಂದು ಸಬೂಬು ನೀಡಿದ್ದಾನೆ. ಆದರೆ, ಈ ರೀತಿ ಸೊಸೈಟಿಯಿಂದ ಕೈಗಡ ಪಡೆದುಕೊಳ್ಳಲು, ಕೊಡಲು ಬರುತ್ತದೆಯೇ ಎಂಬ ಪ್ರಶ್ನೆಗೆ ಆತನ ಬಳಿ ಉತ್ತರವಿಲ್ಲ.

ಜತೆಗೆ ಯಾವ ಸೊಸೈಟಿಗೆ ಎಷ್ಟು ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿಯೇ ಇಲಾಖೆ ಪ್ರತಿ ತಿಂಗಳು ಸರಬರಾಜು ಮಾಡುವುದರಿಂದ ಅದ್ಹೇಗೆ ಕೈಗಡ ಪಡೆದ? ಏಕೆ ಕೈಗಡ ಪಡೆದ? ಯಾರಿಗೆ ಕೊಟ್ಟ ಎಂಬುದಕ್ಕೂ ಆತನ ಮೌನವೇ ಉತ್ತರವಾಗಿತ್ತು ಎಂಬುದು ಗ್ರಾಮಸ್ಥರ ಅಂಬೋಣ.

ಒಂದು ಹಂತದಲ್ಲಿ ಈ ಪ್ರಕರಣವನ್ನೇ ಮುಚ್ಚಿಹಾಕುವ ಯತ್ನವೂ ನಡೆದಿತ್ತು ಎಂಬ ಗುಮಾನಿಯೂ ಹಬ್ಬಿತ್ತು. ಇದಕ್ಕೆ ಪುಷ್ಟಿ ನೀಡಿದಂತೆ ಆರಂಭದಲ್ಲಿ ಆಹಾರ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ದೂರುಗಳಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಘಟನೆ ನಡೆದು ಏಳೆಂಟು ದಿನವಾದರೂ ಸರಿಯಾಗಿ ಕ್ರಮವಾಗದಿರುವುದಕ್ಕೆ ಗ್ರಾಮಸ್ಥರು, ಕೊನೆಗೆ ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಿದರು. ಆ ಬಳಿಕವೇ ಇಲಾಖೆ ಅಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಎರಡು ಸೊಸೈಟಿಗಳನ್ನು ಸದ್ಯಕ್ಕೆ ಅಮಾನತಿನಲ್ಲಿಡಲಾಗಿದೆ. ಇಲಾಖೆ ವಿಚಾರಣೆ ಮುಂದುವರಿಯಲಿದೆ. 90 ದಿನಗಳೊಳಗೆ ವಿಚಾರಣೆ ಮುಗಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯ ವರೆಗೂ ಈ ಎರಡು ಸೊಸೈಟಿಗಳಿಗೆ ಪಡಿತರ ಸರಬರಾಜು ಮಾಡುವುದಿಲ್ಲ ಎಂದು ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ತಿಳಿಸಿದ್ದಾರೆ.

ಒಟ್ಟಿನಲ್ಲಿ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಕಾಳಸಂತೆಗೆ ಸೇರುತ್ತಿದ್ದ ಅನ್ನಭಾಗ್ಯದ ಅಕ್ಕಿ ಮರಳಿ ಸರ್ಕಾರಿ ಗೋದಾಮು ಸೇರಿದಂತಾಗಿರುವುದಂತೂ ಸತ್ಯ.

ಮಿಶ್ರಿಕೋಟಿ ಸೊಸೈಟಿಯಲ್ಲಿನ ಅಕ್ಕಿ ಮತ್ತು ಜೋಳವನ್ನು ಹಿರೇಹೊನ್ನಳ್ಳಿ ಸೊಸೈಟಿಗೆ ಸಾಗಿಸಿದ್ದರು. ಮರುದಿನ ಇದು ಗೊತ್ತಾಗಿ ಪರಿಶೀಲನೆ ನಡೆಸಿದೆವು. ಜಿಲ್ಲಾಧಿಕಾರಿ, ಆಹಾರ ಇಲಾಖೆ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದೇವೆ. ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡುತ್ತೇವೆ ಎಂದು ಮಿಶ್ರಿಕೋಟಿಯ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಗೋವಿಂದ ಭೋವಿ ಹೇಳಿದರು.

ಮಿಶ್ರಿಕೋಟಿ ಸಂಘದ ಅಕ್ಕಿ, ಜೋಳ ಸಾಗಿಸಿದ್ದರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಸಂಘಗಳನ್ನು ಸದ್ಯ ಅಮಾನತಿನಲ್ಲಿಡಲಾಗಿದೆ. ಮುಂದೆ ಇಲಾಖೆ ವಿಚಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!