ಭೀಮಾ ನದಿಗೆ ಹಕ್ಕಿನ ನೀರು ಹರಿಸುವಲ್ಲಿ ‘ಮಹಾ’ ಮೊಂಡುತನ

KannadaprabhaNewsNetwork |  
Published : Mar 28, 2024, 12:49 AM IST
ಫೋಟೋ- 27ಜಿಬಿ1 ಮತ್ತು 27ಜಿಬಿ2ಅಫಜಲ್ಪುರ ಗಡಿಯಲ್ಲಿರುವ ಹಿಳ್ಳಿ ಬಾಂದಾರಲ್ಲಿ 5 ಮೀಟರ್‌ ನೀರು ತುಂಬುತ್ತಿದ್ದಂತೆಯೇ ಗೇಟ್‌ ಬಂದ್‌ ಮಾಡಿರುವ ಮಹಾರಾಷ್ಟ್ರ ಸರ್ಕಾರ ಹನಿ ನೀರು ಕರ್ನಾಟಕದ ಗ್ರಾಮಗಳತ್ತ ಹರಿಯದಂತೆ ಕ್ರಮ ಕೈಗೊಂಡಿದೆ. ನೀರು ತುಂಬಿರುವುದು ಮಹಾರಾಷ್ಟ್ರ ಭಾಗ,  ನೀರಿಲ್ಲದೆ ಬತ್ತಿ ಬಣಗುಡುತ್ತಿರೋದು ಶೇಷಗಿರಿವಾಡಿ, ಮಣ್ಣೂರು ಗ್ರಾಮಗಳ ಭೂಭಾಗ | Kannada Prabha

ಸಾರಾಂಶ

ಅಫಜಲ್ಪುರ ಗಡಿಯಲ್ಲಿರುವ ಹಿಳ್ಳಿ ಬಾಂದಾರಲ್ಲಿ 5 ಮೀಟರ್‌ ನೀರು ತುಂಬುತ್ತಿದ್ದಂತೆಯೇ ಗೇಟ್‌ ಬಂದ್‌ ಮಾಡಿರುವ ಮಹಾರಾಷ್ಟ್ರ ಸರ್ಕಾರ ಹನಿ ನೀರು ಕರ್ನಾಟಕದ ಗ್ರಾಮಗಳತ್ತ ಹರಿಯದಂತೆ ಕ್ರಮ ಕೈಗೊಂಡಿದೆ

ಶೇಷಮೂರ್ತಿ ಅವಧಾನಿ

ಕನ್ನಡಪ್ರಭೆ ವಾರ್ತೆ ಕಲಬುರಗಿ

ಭೀಮಾ ನದಿಗೆ ಉಜನಿ ಜಲಾಶಯದಿಂದ ಹಕ್ಕಿನ 5 ಟಿಎಂಸಿ ನೀರು ಹರಿಬಿಡುವ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಮನವಿಗೆ ಸ್ಪಂದಿಸದೆ ತಳೆದಿರುವ ಸರ್ವಾಧಿಕಾರಿತನದ ಧೋರಣೆಯಿಂದಾಗಿ ಬರುವ ದಿನಗಳಲ್ಲಿ ರಾಜ್ಯದ ಭೀಮಾ ತೀರದಲ್ಲಿನ ಜಲಕ್ಷಾಮ ಇನ್ನೂ ಉಲ್ಬಣಿಸುವ ಸಾಧ್ಯತೆಗಳು ದಟ್ಟವಾಗಿವೆ.

ಬಚಾವತ್‌ ನ್ಯಾಯಾಧಿಕರಣದ ತೀರ್ಪಿನಂತೆ ನಮ್ಮ ಪಾಲಿನ 15 ಟಿಎಂಸಿ ನೀರಲ್ಲಿ ಸಂಕಷ್ಟದ ಈ ಬೇಸಿಗೆಯಲ್ಲಾದರೂ ಜನ- ಜಾನುವಾರುಗಳಿಗೆ ಕುಡಿಯಲು ನೀರು ಹರಿಸುವಂತೆ ಕೋರಿದ್ದ ರಾಜ್ಯದ ಮನವಿಗೆ ಮಾನವೀಯತೆ ಹಿನ್ನೆಲೆ ಸ್ಪಂದಿಸದೆ ಮಹಾರಾಷ್ಟ್ರ ಮೊಂಡುತನದ ಧೋರಣೆ ಪ್ರದರ್ಶಿಸುತ್ತಿದ್ದರೂ ಕೂಡಾ, ಅದನ್ನು ಕಂಡರೂ ಕಾಣದಂತೆ ಕರ್ನಾಟಕ ಸರ್ಕಾರ ಜಾಣ ಕುರುಡತನದ ಮೊರೆ ಹೋಗಿದೆ.

ಕಲಬುರಗಿ, ವಿಜಯಪೂರ, ಯಾದಗಿರಿ ಜಿಲ್ಲೆಯಲ್ಲಿ ತಲೆದೋರಿರುವ ಜಲಕ್ಷಾಮ ನೀಗಿಸಲು ಉಜನಿ ಜಲಾಶಯದಿಂದ 5 ಟಿಎಂಸಿ ನೀರನ್ನು ಹರಿಸುವಂತೆ ಮಾ. 7 ರಂದೇ ಸಿಎಂ ಸಿದ್ದರಾಮಯ್ಯ ಪತ್ರಕ್ಕೂ ಕ್ಯಾರೆ ಎನ್ನದೆ ಸುಮ್ಮನಿದ್ದ ಮಹಾರಾಷ್ಟ್ರ, ಸೊಲ್ಲಾಪುರ, ಅಕ್ಕಲಕೋಟೆಯ ನೀರಿನ ಸಮಸ್ಯೆ ಪರಿಹಾರಕ್ಕೆ ಕಳೆದ 12 ದಿನ ಅದೇ ಉಜನಿ ಜಲಾಶಯದಿಂದ ನಿತ್ಯ 6 ಸಾವಿರ ಕ್ಯುಸೆಕ್‌ ನೀರು ಹರಿಸಿ ಭೀಮಾ ನದಿಗುಂಟ ತನ್ನ ವ್ಯಾಪ್ತಿಯಲ್ಲಿರುವ 10 ಬಾಂದಾರುಗಳಲ್ಲಿ ಭರಪೂರ್‌ ನೀರು ಸಂಗ್ರಹಿಸಿಟ್ಟುಕೊಂಡಿದೆ.

ಉಜನಿ ಜಲಾಶಯದಿಂದ ಕೆಳಗಡೆ ಮಹಾರಾಷ್ಟ್ರ ನಿರ್ಮಿಸಿರುವ ಬಾಂದಾರುಗಳಲ್ಲಿ ಕೊನೆಯದಾಗಿರುವ ಹಿಳ್ಳಿ ಬ್ಯಾರೇಜ್‌ನಲ್ಲಿ ಕಳೆದ 2 ದಿನಗಳ ಹಿಂದಷ್ಟೆ ಭೀಮಾ ನೀರು ಹರಿದು ಬಂದಿದ್ದು 5 ಮೀಟರ್‌ಗೂ ಹೆಚ್ಚು ನೀರಿನ ಸಂಗ್ರಹವಿದೆ.

ಈ ಬಾಂದಾರಿನ ಗೇಟ್‌ಗಳಲ್ಲಿ ಅಲ್ಪ ಸೋರಿಕೆ ಇತ್ತು. ಇದರಿಂದ ನೀರು ರಭಸದಿಂದ ಅಫಜಲ್ಪುರ ತಾಲೂಕಿನ ಗ್ರಾಮಗಳಾದ ಶೇಷಗಿರಿವಾಡಿ ಮೂಲಕ ಮಣ್ಣೂರು, ಕೋಡನೂರ್‌ ಸೇರಿದಂತೆ ಕರ್ನಾಟಕದ ಗಡಿಗ್ರಾಮಗಳತ್ತ ರಭಸದಿಂದ ಹೊರಟಿತ್ತು.

ಇದನ್ನು ತಿಳಿದ ಸೊಲ್ಲಾಪುರ ಜಿಲ್ಲಾಡಳಿತ ತಕ್ಷಣ ಉಜನಿ ಜಲಾಶಯದ ಇಂಜಿನಿಯರಿಂಗ್‌ ವಿಭಾಗವನ್ನು ಸಂಪರ್ಕಿಸಿ ಹಿಳ್ಳಿ ಬಾಂದಾರು ಗೇಟ್‌ಗಳ ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿದೆ, ಹೀಗಾಗಿ ಬುಧವಾರದಿಂದ ಹನಿ ನೀರು ಸಹ ಹಿಳ್ಳಿ ಬಾಂದಾರು ದಾಟಿ ಕರ್ನಾಟಕದತ್ತ ಹರಿಯುತ್ತಿಲ್ಲ.

ಮಹಾ ಮೊಂಡುತನ ಪ್ರಶ್ನಿಸುವ ಎದೆಗಾರಿಕೆ ರಾಜ್ಯಕ್ಕಿಲ್ಲವೆ?:

ಭೀಮೆಗೆ ನೀರು ಹರಿ ಬಿಡುವ ವಿಚಾರದಲ್ಲಿ ಮಹಾರಾಷ್ಟ್ರದ ಮೊಂಡುತನ, ಸರ್ವಾಧಿಕಾರಿತನ ಧೋರಣೆ ಪ್ರಶ್ನಿಸುವ ಎದೆಗಾರಿಕೆ ರಾಜ್ಯ ಸರ್ಕಾರಕ್ಕಿಲ್ಲವೆ? ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿ ಕಾಡುತ್ತಿದೆ.

ಭೀಮಾನದಿ ಪರಿಸರ, ಅಲ್ಲಿನ ಜಲಚರಗಳ ಉಳಿವಿಗಾಗಿ ವರ್ಷದ 365 ದಿನಗಳ ಕಾಲ ನದಿಯಲ್ಲಿ ನೀರಿನ ಹರಿವು ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಹಾರಾಷ್ಟ್ರದ್ದು ಎಂದು ಬಚಾವತ್‌ ನ್ಯಾಧಿಕರಣದ ತೀರ್ಪಲ್ಲಿ ಸ್ಪಷ್ಟ ಉಲ್ಲೇಖವಿದೆ.

ಹೀಗಿದ್ದರೂ ಕೂಡಾ ಮಹಾರಾಷ್ಟ್ರ ತೀರ್ಪಿನ ಮೂಲ ಆಶಯವನ್ನೇ ಧಿಕ್ಕರಿಸಿ ಮೊಂಡುತನ ತೋರುತ್ತಿದ್ದರೂ ಕರ್ನಾಟಕದಿಂದ ಅದನ್ನು ಪ್ರಶ್ನಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲವೆಂಬ ಅಸಮಾಧಾನ ಭೀಮಾ ತೀರದ ಜನಮನದಲ್ಲಿ ಮೂಡಿದೆ.

ಬರೀ ಪತ್ರ ಬರೆಯೋದರಿಂದ ಅಂತರಾಜ್ಯ ನೀರಿನ ವಿಚಾರ ಪರಿಹಾರ ಕಾಣೋದಿಲ್ಲ. ಉಭಯ ರಾಜ್ಯಗಳ ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಗಳ ಹಂತದಲ್ಲಿ, ಮಂತ್ರಿಗಳ ಹಂತದಲ್ಲಿ ಸಮಾಲೋಚನೆ ನಡೆಯಬೇಕು, ಇಲ್ಲಿನ ಸಮಸ್ಯೆ, ಅಲ್ಲಿನ ನೀರಿನ ಸಂಗ್ರಹ ಎಲ್ಲವೂ ಚರ್ಚೆಯಾಗಬೇಕು. ಅದ್ಯಾವುದೂ ಆಗದೆ ಬರೀ ಪತ್ರ ಬರೆದು ನೀರು ಬಿಡಿ ಎಂದು ಆಗ್ರಹಿಸಿದರೆ ಮಹಾರಾಷ್ಟ್ರ ಸ್ಪಂದಿಸುತ್ತಾ? ಎಂದು ಭೀಮಾ ತೀರದ ಜನ ಹಕ್ಕಿನ ನೀರು ಕೇಳಲಿಕ್ಕೂ ರಾಜ್ಯದ ನೀರಸ ಸ್ಪಂದನೆಗೆ ಆಕ್ಷೇಪಿಸುತ್ತಿದ್ದಾರೆ.

117 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಉಜನಿ ಜಲಾಶಯದಲ್ಲಿ 60 ಟಿಎಂಸಿ ಡೆಡ್‌ ಸ್ಟೋರೇಜ್‌ ನೀರಿದೆ, ಇಷ್ಟೊಂದು ಪ್ರಮಾಣದ ಡೆಡ್‌ ಸ್ಟೋರೇಜ್‌ ನೀರಿರುವ ಅಣೆಕಟ್ಟೆ ಬೇರೊಂದಿಲ್ಲ ಎನ್ನಲಾಗುತ್ತಿದ್ದರೂ, ಈ ತುರ್ತು ಸಂದರ್ಭದಲ್ಲಿ ಡೆಡ್ ಸ್ಟೋರೇಜ್‌ನ ನೀರು ದಾಸ್ತಾನು ಕರುನಾಡಿಗೆ ಹರಿಸುವಂತೆ ಅದ್ಯಾಕೆ ರಾಜ್ಯ ಸರ್ಕಾರ ಮಹಾರಾಷ್ಟ್ರದ ಕಿವಿ ಹಿಂಡಬಾರದು? ಎಂದು ಭೀಮಾ ತೀರದ ಜನ ಪ್ರಶ್ನಿಸುತ್ತಿದ್ದಾರೆ.

ನಮ್ಮ ಪಾಲಿನ ಹಕ್ಕಿನ ನೀರು ಮಹಾರಾಷ್ಟ್ರದಿಂದ ಕೇಳಿ ಪಡೆಯದೆ ನಮ್ಮ ಪಕ್ಕದ ನಾರಾಯಣಪುರ ಜಲಾಶಯದಲ್ಲಿರುವ ಕೃಷ್ಣೆಯ ನೀರನ್ನೇ ಮತ್ತೆ ಮತ್ತೆ ಭೀಮೆಗೆ ಹರಿಸುತ್ತ ಹೊಂದಾಣಿಕೆ ಮಾಡಿಕೊಳ್ಳುವ ಕೆಲಸವಾಗುತ್ತಿದೆ. ಹಕ್ಕಿನ ನೀರು ಹರಿದು ಬರೋದು ಯಾವಾಗ? ಇಂತಹ ಹೊಂದಾಣಿಕೆಗಿಂತ ನಮ್ಮ ಹಕ್ಕಿನ ನೀರು ನಮಗೆ ದೊರಕಿದಲ್ಲಿ ಸಮಸ್ಯೆಯೇ ಇರೋದಿಲ್ಲವೆಂದು ಜನ ಹೇಳುತ್ತಿದ್ದಾರೆ.

ಸಂಪೂರ್ಣ ಭೀಮಾ ಪಾತ್ರಕ್ಕೆ ಹರಿಯಲಿ ಕೃಷ್ಣೆಯ ನೀರು!

ಕೃಷ್ಣೆಯಿಂದ 1 ಟಿಎಂಸಿ ನೀರು ಬಿಟ್ಟರೂ ಕೂಡಾ ಆ ನೀರು ಬರಿದಾದ ಭೀಮೆಯ ಒಡಲನ್ನು ಮಣ್ಣೂರಿನಿಂದ ತುಂಬುತ್ತಿಲ್ಲ.

ನಾರಾಣಪುರ ಜಲಾಶದಿಂದ 1 ಟಿಎಂಸಿ ನೀರನ್ನು ಕೆಬಿಜೆಎನ್‌ಎಲ್ ಕಾಲುವೆ ನಂಬರ್‌ 84 ಬಳಗಾನೂರ, ನಂ-11 ಕುಳಕಮಡಿ, ಎಸ್ಕೇಪ್‌ ಗೇಟ್‌ 50 ಅಥವಾ ಇಂಡಿ ಶಾಖಾ ಕಾಲುವೆಯಿಂದ 13, 14 ನೇ ವಿತರಣೆ ಕಾಲುವೆಯಿಂದಲಾದರೂ ಸದರಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಆದೇಶವಿದ್ದು ಹೀಗೆಯೇ ನೀರು ಹರಿದು ಬಂದಲ್ಲಿ ಅರ್ಧಕ್ಕರ್ಧ ಭೀಮಾತೀರ ಹಾಗೇ ಬರಿದಾಗಿಯೇ ಇರಲಿದೆ.

ಇದಕ್ಕೆ ಬದಲಾಗಿ ಬಿಜಾಪೂರ ಜಿಲ್ಲೆಯ ಇಂಡಿ ತಾಲೂಕಿನ ಬೇನೂರ ಎಸ್ಕೇಪ್ ನಂಬರ 118 ಬೇನೂರ ಕಾಲುವೆ ನಂಬರ 23-24 ಕಾಲುವೆ ಮುಖಾಂತರ ನೀರು ಹರಿದಲ್ಲಿ ಸಾಲೂಟಗಿ, ಇಂಡಿ, ಬೇನೂರ, ಚಿಕ್ಕಮಣ್ಣೂರ, ಭೂಯ್ಯಾರ ಗುಂಟ ನೀರು ಹರಿದು ಬಂದು ಭೀಮಾನದಿಗೆ ಸೇರುತ್ತದೆ. ಈ ದಾರಿಗುಂಟ ಕೃಷ್ಣೆ ಬಂದರೆ ಮಾತ್ರ ಅಫಜಲ್ಪುರ ತಾಲೂಕಿನ ಉಡಚಾಣ, ಶಿವೂರ, ಕೂಡಿಗನೂರ, ಮಣ್ಣೂರ, ಶೇಷಗಿರಿ. ಇಂಡಿ ತಾಲೂಕಿನ ನದಿ ದಂಡೆಯ ರೊಡಗಿ, ಖಾಡಗಿ, ನಾಗರಳ್ಳಿ, ಭೂಯ್ಯಾರ, ಚಿಕ್ಕಮಣ್ಣೂರಗಳಿಗೆಲ್ಲ ನೀರು ಸಿಗುತ್ತದೆ. ಆಡಳಿತ ಇದನ್ನು ಗಮನಿಸಲಿ ಎಂದು ಜನ ಆಗ್ರಹಿಸುತ್ತಿದ್ದಾರೆ.

ಸೊಲ್ಲಾಪುರ, ಅಕ್ಕಲಕೋಟೆ ಕುಡಿಯುವ ನೀರಿನ ಬವಣೆ ನೀಗಿಸಲು ಅಗತ್ಯವಿರುವಷ್ಟು ನೀರು ಅದಾಗಲೇ ಉಜನಿಯಿಂದ ಹರಿಬಿಡಲಾಗಿದೆ, ಈ ನೀರಿ ನಮ್ಮ ಕೊನೆಯ ಹಿಳ್ಳಿ ಬಾಂದಾರು ತುಂಬಿದೆ. ಸೊಲ್ಲಾಪೂರಕ್ಕೆ ಸಾಕಾಗುವಂತೆ ನೀರಿನ ಸಂಗ್ರಹ ಮಾಡಲಾಗಿದೆ. ಸದ್ಯಕ್ಕೆ ಉಜನಿ ನೀರು ಬಿಡೋದಿಲ್ಲ, ಅಗತ್ಯ ಕಂಡಲ್ಲಿ ಮೇ ಅಥವಾ ಜೂನ್‌ ತಿಂಗಳಲ್ಲಿ ನೀರು ಮತ್ತೆ ಉಜನಿಯಿಂದ ಹರಿಸುತ್ತೇವೆ. ಹಿಳ್ಳಿ ಬಾಂದಾರಿಗೆ 2 ದಿನದಲ್ಲಿ ಪೊಲೀಸ್‌ ಭದ್ರತೆ ಒದಗಿಸುತ್ತೇವೆ. ರಾತ್ರಿ ಬಾಂದಾರು ಗೇಟ್‌ ಎತ್ತುವ, ನೀರು ಹರಿದು ಹೋಗುವಂತೆ ಮಾಡುವ ಕೆಲಸಗಳಿಗೆ ಬ್ರೆಕ್‌ ಹಾಕುತ್ತೇವೆ. ಈಗಾಗಲೇ ನಮ್ಮ ಕಡೆ ಲಿಡರ್‌ಗಳು ಫೋನ್‌ ಮಾಡಿ ಹಿಳ್ಳಿಯಿಂದ ಆಚೆ ಒಂದು ಹನಿ ನೀರು ಹರಿದು ಹೋಗಕೂಡದು, ಬೇಗ ಗೇಟ್‌ಗಳನ್ನು ದುರಸ್ಥಿ ಮಾಡಿರೆಂದು ಒತ್ತಡ ಹಾಕುತ್ತಿದ್ದಾರೆ. ಗುರುವಾರ ಸಂಜೆಯೊಳಗೆ ಹಿಳ್ಳಿ ಬಾಂದಾರಿಂದ ಹನಿ ನೀರು ಹೊರಗೆ ಹೋಗೋದಿಲ್ಲ ಹಾಗೆ ಮಾಡುತ್ತೇವೆ.

ಹೆಸರು ಹೇಳಲು ಇಚ್ಚಿಸದ ನೀರಾವರಿ ಇಲಾಖೆ ಇಂಜಿನಿಯರ್‌, ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ