ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಿಲ್ಲಾ ಪಂಚಾಯ್ತಿ, ನಗರಸಭೆ, ಪುರಸಭೆ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಕಾರ್ಯಕರ್ತರು, ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಮುಖಂಡರಿಗೆ ಸಚಿವ ಚಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ನಗರಸಭೆ ಸದಸ್ಯೆ ಮಂಜುಳಾ, ಮಾಜಿ ಸದಸ್ಯರಾದ ಮಂಜು, ಆಯೇಷಾ ತಬ್ಸಂ, ಚಂದ್ರಕುಮಾರ, ಎಪಿಎಂಸಿ ಅಧ್ಯಕ್ಷ ರಘು, ಪುರಸಭಾ ಮಾಜಿ ಉಪಾಧ್ಯಕ್ಷ, ಗಣೇಶ್, ತಾಪಂ ಮಾಜಿ ಅಧ್ಯಕ್ಷ ಬೈರವ, ಕೆರಗೋಡು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಸೇರಿದಂತೆ ಜೆಡಿಎಸ್, ಬಿಜೆಪಿ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಶಾಸಕ ಪಿ.ರವಿಕುಮಾರ್ ಅವರು ಜೆಡಿಎಸ್-ಬಿಜೆಪಿ ಪಕ್ಷದಲ್ಲಿದ್ದವರ ಮನವೊಲಿಸಿ ಕೈ ಪಾಳಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಪ್ರಮುಖ ಮುಖಂಡರು-ಕಾರ್ಯಕರ್ತರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಬಲ ತುಂಬಿದಂತಾಗಿದೆ.
ಕಳೆದ ೩೦ ವರ್ಷದಿಂದ ಜೆಡಿಎಸ್ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಜಿಲ್ಲೆಯನ್ನು ಅಭಿವೃದ್ಧಿಯಿಂದ ವಂಚಿತಗೊಳ್ಳುವಂತೆ ಮಾಡಿದೆ. ಸುಳ್ಳು ಮತ್ತು ಅಭಿವೃದ್ಧಿ ಮೇಲೆ ಈ ಚುನಾವಣೆ ನಡೆಯಲಿದೆ. ಸತ್ಯ, ಅಭಿವೃದ್ಧಿ ಬೇಕಿದ್ದರೆ ಕಾಂಗ್ರೆಸ್ ಬೆಂಬಲಿಸಿ. ಕಣ್ಣೀರಾಕಿ ವೋಟ್ ಕೇಳುವವರಿಗೆ ಕಿವಿಗೊಡಬೇಡಿ ಎಂದರು.
೩೩ ಕೋಟಿ ರು. ವೆಚ್ಚದಲ್ಲಿ ಮಂಡ್ಯದೊಳಗೆ ಹಾದುಹೋಗಿರುವ ಹೆದ್ದಾರಿ ರಸ್ತೆಯನ್ನು ಉಮ್ಮಡಹಳ್ಳಿ ಗೇಟ್‌ನಿಂದ ಕಿರಗಂದೂರು ರಸ್ತೆಯವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಅತ್ಯಂತ ಗುಣಾತ್ಮಕವಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಪ್ರಮುಖ ವೃತ್ತಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ ನಗರಕ್ಕೆ ಹೊಸ ರೂಪ ನೀಡಲಾಗುವುದು ಎಂದರು.
ವಿರೋಧ ಪಕ್ಷದವರಿಗೆ ಮತ ಹಾಕಿದರೆ ಅವರು ಅಭಿವೃದ್ಧಿಗೆ ಅಡ್ಡಗಾಲಾಗುತ್ತಾರೆ. ಆದ್ದರಿಂದ ಜನರು ಮತ್ತೆ ತೊಂದರೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅಭಿವೃದ್ಧಿ ಮತ್ತಷ್ಟು ಹಿನ್ನಡೆಯಾಗುತ್ತದೆ. ಅದಕ್ಕಾಗಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.