28ರಿಂದ ‘ಹೈಫ್ಲೈಯರ್ಸ್‌ ಕಪ್‌’ ಕೌಟುಂಬಿಕ ಹಾಕಿ ಪಂದ್ಯಾವಳಿ

KannadaprabhaNewsNetwork |  
Published : Nov 25, 2023, 01:15 AM IST
ಚಿತ್ರ : 24ಎಂಡಿಕೆ1 :  ಹೈಪ್ಲೈಯರ್ಸ್ ಕಪ್- 2023ಗಾಗಿ ವಿ. ಬಾಡಗದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನು ಸಿದ್ಧಗೊಳಿಸುತ್ತಿರುವುದು. | Kannada Prabha

ಸಾರಾಂಶ

. ವಿ. ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯಲಿರುವ ಈ ಹಾಕಿ ಪಂದ್ಯಾವಳಿಗಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು ಅಂತಿಮ ಹಂತದಲ್ಲಿವೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ವಿರಾಜಪೇಟೆ ತಾಲೂಕಿನ 3 ನಾಡುಗಳ ವ್ಯಾಪ್ತಿಯ ಕೊಡವ ಕೌಟುಂಬಿಕ 2ನೇ ವರ್ಷದ ಹಾಕಿ ಪಂದ್ಯಾವಳಿ ‘ಹೈಫ್ಲೈಯರ್ಸ್‌ ಕಪ್-2023’ ನ28ರಿಂದ ಆರಂಭಗೊಳ್ಳಲಿದೆ. ವಿ. ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯಲಿರುವ ಈ ಹಾಕಿ ಪಂದ್ಯಾವಳಿಗಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು ಅಂತಿಮ ಹಂತದಲ್ಲಿವೆ.

ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ 2ನೇ ಬಾರಿಗೆ ನಡೆಯುತ್ತಿದ್ದು, ಇದಕ್ಕಾಗಿ ಗ್ರಾಮದ ಯುವಕರು ಉತ್ಸಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದ್ದು, ಈಗಾಗಲೇ 19 ಕೊಡವ ಕುಟುಂಬ ಹಾಕಿ ತಂಡಗಳು ತಮ್ಮ ಹೆಸರು ನೋಂದಾಯಿಸಿಕೊಂಡಿವೆ. ಪಂದ್ಯಾವಳಿಯು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಆಯೋಜನೆಗೊಂಡಿದೆ. ಈ ಪಂದ್ಯಾವಳಿಯ ನೆಪದಲ್ಲಿ ತೀರಾ ದುಸ್ಥಿತಿಯಲ್ಲಿದ್ದ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮೈದಾನವನ್ನು ಲಕ್ಷಾಂತರ ಮೊತ್ತದ ಹಣ ವಿನಿಯೋಗಿಸಿ ಈ ಬಾರಿಯೂ ಅಭಿವೃದ್ಧಿಪಡಿಸಲಾಗಿದೆ. ವಿ. ಬಾಡಗ ಹೈಫ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಮೈದಾನದ ಸಿದ್ಧತೆ ಕೆಲಸ ನಡೆಯುತ್ತಿದ್ದು, ಮೈದಾನವನ್ನು ಹಾಕಿ ಪಂದ್ಯಾವಳಿಗಾಗಿ ಪೂರ್ಣರೂಪದಲ್ಲಿ ಸಜ್ಜುಗೊಳಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಕುಪ್ಪಂಡ ದಿಲನ್ ಬೋಪಣ್ಣ ತಿಳಿಸಿದ್ದಾರೆ. ಮೈದಾನದಲ್ಲಿ ಹಾಕಿ ಅಂಕಣದ ಗುರುತು ಹಾಕುವ ಕೆಲಸ ಮಾತ್ರ ಬಾಕಿ ಉಳಿದಿದೆ. ಭಾನುವಾರ ಸಂಜೆಯೊಳಗಾಗಿ ಈ ಕಾರ್ಯವು ಪೂರ್ಣಗೊಳ್ಳಲಿದೆ. ಪಂದ್ಯಾವಳಿಯ ಟೈಸ್ ಅಂತಿಮಗೊಳಿಸಲಾಗಿದೆ. ಹಾಗೆ ತಾಂತ್ರಿಕ ಸಮಿತಿ ಕೂಡ ಸಿದ್ಧಗೊಂಡಿದೆ ಎಂದು ಮಾಹಿತಿ ನೀಡಿರುವ ಪಂದ್ಯಾವಳಿಯ ತಾಂತ್ರಿಕ ಸಮಿತಿಯ ನಿರ್ದೇಶಕರು ಆಗಿರುವ ದಿಲನ್ ಬೋಪಣ್ಣ, ಪಂದ್ಯಾವಳಿ ಯಶಸ್ವಿಗಾಗಿ ಕಳೆದ ಬಾರಿಯಂತೆ ಇಡೀ ಗ್ರಾಮಸ್ಥರು ಕೈಜೋಡಿಸಿದ್ದು, ಈ ಬಾರಿಯ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯ ಅಸ್ತಿತ್ವವನ್ನು ಉಳಿಸಬೇಕೆಂಬ ಉದ್ದೇಶದಿಂದ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ವಿ.ಬಾಡಗ ಗ್ರಾಮದಲ್ಲಿ ಆಯೋಜಿಸಲಾಗಿದೆ. ಕಳೆದ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿಯ ಯಶಸ್ವಿಯೇ 2ನೇ ವರ್ಷದ ಪಂದ್ಯಾವಳಿಯನ್ನು ಆಯೋಜಿಸಲು ಸ್ಫೂರ್ತಿ ನೀಡಿದೆ. ಕೆಲವು ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಆರ್ಥಿಕ ಸಹಾಯ ನೀಡುವುದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲಾಗುತ್ತಿರುವ ಹಾಕಿ ಪಂದ್ಯಾವಳಿಯನ್ನು ಉತ್ತೇಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಕೌಟುಂಬಿಕ ಹಾಕಿ ಉತ್ಸವದ ಹಿನ್ನೆಲೆಯಲ್ಲಿ

ಅಭಿವೃದ್ಧಿಪಡಿಸಲಾದ ಗ್ರಾಮದ ಸರಕಾರಿ ಶಾಲೆಯ ಹಾಕಿ ಮೈದಾನದ ಗುಣಮಟ್ಟವನ್ನು ಮುಂದೆಯೂ ನಿರ್ವಹಣೆ ಮಾಡಲು ಹೈಫ್ಲೈಯರ್ಸ್‌ ಸಂಸ್ಥೆ ಮುಂದೆಯೂ ಬದ್ಧವಾಗಿದೆ.

- ಅಮ್ಮಣಿಚಂಡ ರಂಜು ಪೂಣಚ್ಚ, ಅಧ್ಯಕ್ಷರು, ವಿ. ಬಾಡಗ ಹೈಫ್ಲೈಯರ್ಸ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವಜಾತ ಶಿಶು ಕತ್ತು ಕುಯ್ದುಟಾಯ್ಲೆಟ್‌ಗೆ ಎಸೆದ ತಾಯಿ
ಸಾಲಗಾರರ ಕಾಟ: 17 ನೇಮಹಡಿಯಿಂದ ಹಾರಿ ಆತ್ಮಹತ್ಯೆ