ಕನ್ನಡಪ್ರಭ ವಾರ್ತೆ ಶಿವಮೊಗ್ಗಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ. ಸಾರ್ವಜನಿಕರು ವೆಬ್‌ಸೈಟ್: ceo.karnataka/gov.in ಇಲ್ಲಿ ವೀಕ್ಷಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಅರ್ಜಿದಾರರು ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಿದ ಅರ್ಜಿದಾರರು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು. ಆಕ್ಷೇಪಣೆಗಳಿದ್ದಲ್ಲಿ 2023ರ ಡಿ.2 ರೊಳಗೆ ಸಲ್ಲಿಸಬಹುದು. ಅರ್ಹ ಶಿಕ್ಷಕರು ಮತ್ತು ಪದವೀಧರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಮೂನೆ-18 ಮತ್ತು 19ರಲ್ಲಿ ಸಲ್ಲಿಸಬಹುದು. ಮತದಾರರ ಪಟ್ಟಿಯ ಅಂತಿಮ ಪ್ರಕಟಣೆಯನ್ನು 2023ರ ಡಿಸೆಂಬರ್ 30ರಂದು ಪ್ರಕಟಿಸಲಾಗುವುದು ಎಂದರು.
ಈ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯೋಗವು ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಈವರೆಗೆ 66,982 ಅರ್ಜಿಗಳು ಸ್ವೀಕಾರಗೊಂಡಿದ್ದು, ದಾಖಲಾತಿಗಳು ಸರಿಯಾಗಿದ್ದ 65,566 ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. ಉಳಿದ 1,416 ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕತಗೊಳಿಸಲಾಗಿದೆ. 33,964 ಪುರುಷರು, 31,600 ಸ್ತ್ರೀಯರು, 2 ಇತರರು ಸೇರಿದಂತೆ ಒಟ್ಟು, 65,566 ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.ಶಿಕ್ಷಕರ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕ್ಷೇತ್ರದ ವ್ಯಾಪ್ತಿಯಲ್ಲಿ 17,402 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 16,950 ಸ್ವೀಕಾರಗೊಂಡಿದ್ದು, 452ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕತಗೊಳಿಸಲಾಗಿದೆ. ಮತದಾರರ ಪಟ್ಟಿಯಲ್ಲಿ 7,833 ಪುರುಷರು, 9,117 ಸ್ತ್ರೀಯರು ಸೇರಿದಂತೆ ಅರ್ಹರಾದ ಒಟ್ಟು 16,950 ಅರ್ಜಿದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.
ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ವ್ಯಾಪ್ತಿಗೊಳಪಡಲಿವೆ. ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ವ್ಯಾಪ್ತಿಗೊಳಪಡಲಿವೆ ಎಂದರು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು, ಕೈಬಿಡಲು, ತಿದ್ದುಪಡಿ ಮಾಡಲು ಹಾಗೂ ಸ್ಥಳಾಂತರಿಸಲು ಈವರೆಗೆ ಸ್ವೀಕರಿಸಲಾದ ಅರ್ಜಿಗಳ ಕರಡು ಮತದಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.
- - - -23ಕೆಪಿಎಸ್‌ಎಂಜಿ15: