ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಹುಲಸೂರ ಪಟ್ಟಣದಿಂದ ಹಾದು ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿನ ಅಂಗಡಿಯ ಮಾಲೀಕರು ರಸ್ತೆಯ ಬದಿಯಲ್ಲಿರುವ ಪಾದಚಾರಿ ಮಾರ್ಗ ಸಂಚಾರಕ್ಕೆ ಅಡೆ-ತಡೆ ತಂದಿರುವುದರ ಪರಿಣಾಮ ಶುಕ್ರವಾರ ಬೆಳಗ್ಗೆ 8ಗಂಟೆಗೆ ರಸ್ತೆ ತೆರವು ಕಾರ್ಯಾಚರಣೆ ನಡೆದಿದೆ.
ರಾಜ್ಯ ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅದರ ತಡೆ ಕಾರ್ಯವನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಹಾಯಕ ಆಯುಕ್ತ ಪ್ರಕಾಶ ಕುದರೆ, ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಬಾಬಳಗಿ, ತಾಪಂ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ಪಿಎಸ್ಐ ನಾಗೇಂದ್ರ ಕನಮೂಸೆ ಅಧಿಕಾರಿಗಳ ತಂಡವು ತೆರವು ಕಾರ್ಯಾಚರಣೆ ಕೈಗೊಂಡಿದೆ.ಹುಲಸೂರ ಪಟ್ಟಣದಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಎರಡು ಬದಿಯಲ್ಲಿ ವ್ಯಾಪಾರಿಗಳು ಅಲ್ಲಲ್ಲಿ ಕಾಯಂ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು, ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಅಪಘಾತಗಳು ಸಹ ಸಂಭವಿಸುತ್ತಿವೆ ಆದ್ದರಿಂದ ಪಾದಚಾರಿ ಮಾರ್ಗದಲ್ಲಿನ ಮತ್ತು ಇತರೆಡೆಯ ಅತಿಕ್ರಮಣ ತೆರವು ಗೊಳಿಸಬೇಕು ಎಂದು ಈಗಾಗಲೆ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಧ್ವನಿ ವರ್ಧಕ ಮೂಲಕ ಸಂದೇಶ ನೀಡಲಾಗಿತ್ತು.