ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಾನೊಬ್ಬ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ, ಕೆಪಿಸಿಸಿ ಕಚೇರಿ ದೇವಾಲಯ, ಅಲ್ಲಿ ನನ್ನ ಅರ್ಹತೆ ಏನೆಂದರೆ ಕಸಗುಡಿಸುವವನು ನಾನು, ಗರ್ಭಗುಡಿಯ ಕೆಪಿಸಿಸಿ ದೇವರ ಬಗ್ಗೆ (ಡಿ.ಕೆ.ಶಿವಕುಮಾರ್) ಮಾತನಾಡುವಷ್ಟು ದೊಡ್ಡವನಲ್ಲ. ಬೇಕಾದರೆ ನನ್ನ ಲೆವೆಲ್ ನವರಾದಂತಹ ಆರ್.ಅಶೋಕ್, ಯತ್ನಾಳ್ , ಸಿ.ಟಿ.ರವಿ ಬಗ್ಗೆ ಬೇಕಾದರೆ ಮಾತನಾಡುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ನಮ್ಮ ಊರಿಗೆ ನಮ್ಮ ಶಾಸಕ ಎಂಬ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ಜಿಲ್ಲೆಯ ಮಂಚೇನಹಳ್ಳಿ ಪಟ್ಟಣದ ಐದನೇ ವಾರ್ಡ್ ನ ಬಡಾವಣೆಗಳಿಗೆ ಭೇಟಿ ನೀಡಿ ಜನರಿಂದ ಕುಂದು ಕೊರತೆಗಳ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಕುಂಭಸ್ನಾನ, ಈಶಾ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ನನ್ನ ಪಕ್ಷದ ಆಂತರಿಕ ವಿಚಾರ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ ಎಂದರು.ಕಾಂಗ್ರೆಸ್ ಸೇರುವಂತೆ ಆಹ್ವಾನ
ನಾನು ಅಶೋಕಣ್ಣನಿಗೆ ಒಂದು ಮಾತು ಹೇಳಲು ಇಚ್ಚೇಪಡುತ್ತೇನೆ. ಆರ್.ಅಶೋಕ್, ಯತ್ನಾಳ್ , ಸಿ.ಟಿ.ರವಿ ಈ ಮೂರು ಜನ ಕಾಂಗ್ರೆಸ್‌ಗೆ ಬಂದರೆ ಅವರನ್ನು ಬಿಜೆಪಿಯವರಿಗಿಂಥ ಚನ್ನಾಗಿ ನಡೆಸಿಕೊಳ್ಳುತ್ತೇವೆ. ನನಗೆ ನಂಭಿಕೆ ಇದೆ ಆರ್.ಅಶೋಕ್, ಯತ್ನಾಳ್,ಸಿ.ಟಿ.ರವಿ ಹಾಗೂ ವಿಜಯೇಂದ್ರ ಕೂಡ ಅಲ್ಲಿ ಬೇಜಾರಾದರೆ ನಮ್ಮ ಪಾರ್ಟಿಗೆ ಬರುತ್ತಾರೆ ಅಂತ ಮತ್ತು ಅವರು ಬರಲಿ ಎಂದು ಬಯಸುತ್ತೇನೆ ಎಂದರು.ಸಚಿವ ಸುಧಾಕರ್ ಮುಂದುವರಿಯಬೇಕು
ನಿನ್ನೆ ನಡೆದ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿಯ ಜೋಡಿ ಬ್ರಹ್ಮ ರಥೋತ್ಸವದಲ್ಲಿ ಭಕ್ತರೊಬ್ಬರು ತೇರಿಗೆ ಎಸೆಯುವ ಬಾಳೆಹಣ್ಣಿನ ಮೇಲೆ ಪ್ರದೀಪ್ ಈಶ್ವರ್ ಸಚಿವರಾಗಲಿ ಎಂದು ಬರೆದು ಹರಕೆ ಸಲ್ಲಿಸಿದ ಕುರಿತು ಕೇಳೆದ ಪ್ರಶ್ನೆಗೆ ಉತ್ತರಿಸಿ. ನಾನು ದೇವರಲ್ಲಿ ಪ್ರಾರ್ಥಿಸಿ, ಕೇಳಿಕೊಂಡು ಶಾಸಕನಾಗಿಲ್ಲ ಬದಲಿಗೆ ಶ್ರೀ ಭೋಗ ನಂದೀಶ್ವರನೇ ನನಗೆ ಆಶೀರ್ವದಿಸಿ ಶಾಸಕನಾಗಿ ಮಾಡಿದ್ದಾನೆ. ಆದರೆ ನಮ್ಮ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರೇ ಸಚಿವರಾಗಿ ಮುಂದುವರೆಯ ಬೇಕು ಎಂದರು. ಜಿಲ್ಲೆಯ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಎತ್ತಿನ ಹೊಳೆ ಯೋಜನೆಯೇ ಪರಿಹಾರ. ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ಹರಿಯಲು 450 ಕೋಟಿ ಅನುದಾನ ಬೇಕಿದ್ದು ಇದಕ್ಕಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದು ಬಿಡುಗಡೆ ಆದಲ್ಲಿ 1 ವರ್ಷ ದಲ್ಲಿ ನೀರು ತರಬಲ್ಲೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಲಿರುವ ಬಜೆಟ್ ನಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಹಲವು ಯೋಜನೆಗಳಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು ಅವರು ಹಣಕಾಸು ಮಂಜೂರಾತಿ ನೀಡುವ ವಿಶ್ವಾಸವಿದೆ ಎಂದರು.ಮಂಚೇನಹಳ್ಳಿ ಅಭಿವೃದ್ಧಿಗೆ ಬದ್ಧ
ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಂಚೇನಹಳ್ಳಿ ತಾಲೂಕಿನ ಸರ್ವತಮುಖ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಅತಿ ಶೀಘ್ರದಲ್ಲಿ ಕಲ್ಪಿಸಿ ಕೊಟ್ಟು ಮಂಚೇನಹಳ್ಳಿ ತಾಲೂಕನ್ನು ರಾಜ್ಯವೇ ತಿರುಗಿ ನೋಡುವಂತೆ ಮಾರ್ಪಡಿಸುತ್ತೇನೆ. ಈ ಪ್ರದೇಶದ ನಾಗರೀಕರಿಗೆ ಅತಿ ಅವಶ್ಯಕವಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಖಾತೆ ಸಮಸ್ಯೆ ಸೇರಿದಂತೆ ಎಲ್ಲಾ ಕೆಲಸಕಾರ್ಯಗಳನ್ನು ಯಾವುದೇ ರೀತಿಯ ನಿಧಾನಗತಿ ಇಲ್ಲದೆ ನಡೆಸಿಕೊಡುವಂತೆ ತಾವು ಸರ್ಕಾರಿ ಅಧಿಕಾರಿಗಳಲ್ಲಿ ಸೂಚಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಕ್ಷ್ಮೀನಾರಾಯಣ, ರಾಜಣ್ಣ, ಅರವಿಂದ್, ಕುಪೇಂದ್ರ, ವಿನಯ್ ಬಂಗಾರಿ, ತಹಸಿಲ್ದಾರ್ ದೀಪ್ತಿ ಒಳಗೊಂಡಂತ ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.