ಕನ್ನಡಪ್ರಭ ವಾರ್ತೆ ಮಂಗಳೂರುನಿಜವಾದ ರಾಮಭಕ್ತರು ನಾವು ಕಾಂಗ್ರೆಸಿಗರು. ನಮಗೆ ಎಲ್ಲ ಸಮಾಜ, ಧರ್ಮದ ಬಗ್ಗೆ ಗೌರವ ಇದೆ. ರಾಮ ಮಂದಿರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವಕಾಶ ಸಿಕ್ಕಿದಾಗ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬಿಜೆಪಿಯವರಿಗೆ ಕೆಟ್ಟ ಸ್ವಾಭಾವ ಇದೆ, ದೇವರು ಮತ್ತು ಸಾವಿನಲ್ಲಿ ರಾಜಕೀಯ ಮಾಡುತ್ತಾರೆ. ಈಗ ರಾಮನನ್ನು ತೆಗೊಂಡಿದ್ದಾರೆ. ಹಾಗೆ ರಾಜಕೀಯ ಮಾಡಬೇಡಿ ಎನ್ನುವ ಅಧಿಕಾರ ನಮಗಿಲ್ಲ. ಆದರೆ ರಾಮನ ನಿಜವಾದ ಭಕ್ತರು ನಾವು, ಮಂದಿರ ಉದ್ಘಾಟನೆಗೆ ಕರೆಯದಿದ್ದರೂ ಇಲ್ಲಿಂದಲೇ ರಾಮನ ನಂಬುತ್ತೇವೆ. ನಾನು ಒರಿಜಿನಲ್ ಹಿಂದು, ಯಾರು ಡೂಪ್ಲಿಕೇಟ್ ಎಂದು ಅವರೇ ನೋಡಿಕೊಳ್ಳಲಿ ಎಂದು ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದರು.
ನಾನು ಹಿಂದು, ಹಿಂದು ಎಂದು ಹೇಳಿಕೊಂಡು ಹೋಗುವುದಿಲ್ಲ. ಬೇರೆ ಧರ್ಮಕ್ಕೂ ಗೌರವ ನೀಡುವುದು ಒರಿಜಿನಲ್ ಹಿಂದು ಮಾತ್ರ. ಹಿಂದು ಎಂದು ಹೇಳಿಕೊಂಡು ಕರಾವಳಿ ಭಾಗದಲ್ಲಿ ಶಾಂತಿ ಕದಡಿರುವುದನ್ನು ಜನತೆ ನೋಡಿದೆ. ಮತಬ್ಯಾಂಕ್‌ಗಾಗಿ ಹಿಂದುತ್ವ ಮಾಡುವ ಕೆಲಸ ಬಿಜೆಪಿಗರದ್ದು ಎಂದರು.ನನಗೆ ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುತ್ತೇನೆ ಅಥವಾ ಎಲ್ಲಿ ಬೇಕಾದರೂ ಹೋಗುತ್ತೇನೆ. ಅಯೋಧ್ಯೆ, ಮಸೀದಿ, ಚರ್ಚ್, ಬುದ್ಧಗಯಾ ಕೂಡ ಹೋಗುತ್ತೇನೆ. ಆದರೆ ಬಂಗಾರಪ್ಪ ಮಗನಾಗಿ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿ ದೇವರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.
ನಳಿನ್ ಕುಮಾರ್ ರಾಜಿನಾಮೆ ನೀಡಲಿ:
ಬಿಜೆಪಿ ಸೋಲಿಗೆ ನಳಿನ್ ಕಾರಣ:
ನಳಿನ್ ಕುಮಾರ್‌ಗೆ ಮತ್ತೆ ಟಿಕೆಟ್ ನೀಡೇಕು. ಆಗ ಇಲ್ಲಿಗೆ ನಾನೇ ಬರುತ್ತೇನೆ. ಅವರು ಇಲ್ಲಿ ಸೋಲಬೇಕು. ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ನಾನು ಇಲ್ಲಿ ಮಾಡುತ್ತೇನೆ. ನಾನು ಕೂಡ ಅದರ ಪಾತ್ರಧಾರ ಆಗುತ್ತೇನೆ. ನಾನು ಯಾರ ಮೇಲೂ ವೈಯಕ್ತಿಕ ಹೋಗಲ್ಲ, ಆದರೆ ಅವರು ನನ್ನ ರಾಜಿನಾಮೆ ಕೇಳಿದ್ದರು, ನನ್ನ ತಂದೆಯವರ ಭಿಕ್ಷೆಯಲ್ಲಿ ನಳಿನ್ ಕುಮಾರ್ ಇಲ್ಲಿ ಉಳಿದುಕೊಂಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಉಸ್ತುವಾರಿ ಸಚಿವರೇ ಹೊಣೆ ಎಂಬ ಹೈಕಮಾಂಡ್ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಹೈಕಮಾಂಡ್ ಹಾಗೆ ಹೇಳಿದ್ದು ಸರಿ ಇದೆ, ಮತ್ತೆ ಅಧಿಕಾರ ಪುಕ್ಸಟ್ಟೆ ಬರುತ್ತಾ? ಸುಮ್ಮನೆ ಪ್ರಚಾರಕ್ಕೆ ಹೋಗಿ ಬಂದರೆ ಆಗುತ್ತಾ? ಜವಾಬ್ದಾರಿ ತೆಗೋಬೇಕು, ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಉಳಿದುಕೊಳ್ಳುತ್ತಾರೆ, ಇಲ್ಲದಿದ್ದರೆ ಏನು ಎನ್ನುವುದು ಅವರಿಗೆ ಬಿಟ್ಟಿದ್ದು. ಇದರಲ್ಲಿ ಏನೂ ತಪ್ಪಿಲ್ಲ, ಹೈಕಮಾಂಡ್ ಏನು ಹೇಳುತ್ತಾರೆ ಅದನ್ನೇ ಕೇಳಬೇಕು ಎಂದು ಸಮರ್ಥಿಸಿಕೊಂಡರು.
ಲೋಕಸಭಾ ಅಭ್ಯರ್ಥಿ ಆಯ್ಕೆ ಕೆಲಸ ನನಗೆ ಕೊಟ್ಟಿದ್ದಾರೆ. ದ.ಕ. ಅಭ್ಯರ್ಥಿ ಬಗ್ಗೆ ಕೆಲವು ವಿಚಾರ ಕಳುಹಿಸಿದ್ದೇನೆ, ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಶುಕ್ರವಾರ ಶಿವಮೊಗ್ಗದಲ್ಲಿ ಯುವನಿಧಿಗೆ ಚಾಲನೆ ಕೊಡಲಾಗಿದೆ. ಬಿಜೆಪಿಯವರು ಗ್ಯಾರಂಟಿ ಕೊಡಲ್ಲ ಎಂದಿದ್ದರು. ನಾವು ಕೊಟ್ಟಿದ್ದೇವೆ. ಟೀಕೆ ಮಾಡಿದವರು ಅವರ ಹಣೆ ಬರಹಕ್ಕೆ ಒಂದು ಇಂಥ ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನು ಅಡವು ತಗೊಂಡಿದ್ದರು. ಅವರ ಹೆಸರನ್ನು ದುರ್ಬಳಕೆ ಮಾಡಿದ್ದಕ್ಕೆ ಇವತ್ತು ಬಿಜೆಪಿಗೆ ಶಿಕ್ಷೆ ಆಗಿದೆ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಮುಖಂಡರಾದ ಪದ್ಮರಾಜ್, ಸುಧೀರ್ ಇದ್ದರು.