ಕೋಲ್ಕತಾ : ದೇಶದ 31 ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆ ಬಹಿರಂಗಪಡಿಸಿದ್ದು, ಕರ್ನಾಟಕದ ಡಿ.ಕೆ.ಶಿವಕುಮಾರ್‌ ಅವರು 1413 ಕೋಟಿ ರು. ಆಸ್ತಿಗಳೊಂದಿಗೆ ಅತಿ ಸಿರಿವಂತ ಸಿಎಂ ಎನಿಸಿಕೊಂಡಿದ್ದಾರೆ. ಕಾಶ್ಮೀರದ ಒಮರ್‌ ಅಬ್ದುಲ್ಲಾ ಕೇವಲ 55. 24 ಲಕ್ಷ ರು. ಆಸ್ತಿ ಹೊಂದಿದ್ದು ಬಡ ಸಿಎಂ ಎನಿಸಿಕೊಂಡಿದ್ದಾರೆ.

31 ಸಿಎಂಗಳು ಒಟ್ಟು 3660 ಕೋಟಿ ರು. ಆಸ್ತಿ ಹೊಂದಿದ್ದು, ನಾಲ್ವರು ಶತಕೋಟ್ಯಧಿಪತಿಗಳಾಗಿದ್ದಾರೆ. ಇದರಲ್ಲಿ ಡಿಕೆಶಿ ಅವರು 1413 ಕೋಟಿ ರು. ಆಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು (931 ಕೋಟಿ ರು.), ತಮಿಳುನಾಡು ಮುಖ್ಯಮಂತ್ರಿ ವಿಜಯ್‌ (648 ಕೋಟಿ ರು.), ಅರುಣಾಚಲ ಪ್ರದೇಶದ ಪೇಮಾ ಖಂಡು (332 ಕೋಟಿ ರು.) ಇದ್ದಾರೆ.

ಸುವೇಂದು, ಒಮರ್‌ ಅತಿ ಬಡವ:

ಎಡಿಆರ್‌ ಅಂಕಿ ಅಂಶಗಳ ಪ್ರಕಾರ, ಜಮ್ಮು -ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ₹55.24 ಲಕ್ಷ ರು. ಘೋಷಿತ ಆಸ್ತಿಯನ್ನು ಹೊಂದಿದ್ದು, ದೇಶದ ಅತಿ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ (85.87 ಲಕ್ಷ ರು.), ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ (1.46 ಕೋಟಿ ರು.+) ಇದ್ದಾರೆ.


14 ಸಿಎಂಗಳ ವಿರುದ್ಧ ಕ್ರಿಮಿನಲ್ ಪ್ರಕರಣ

ಇನ್ನು ಎಡಿಆರ್‌ ಮಾಹಿತಿ ಪ್ರಕಾರ, 31 ಮುಖ್ಯಮಂತ್ರಿಗಳ ಪೈಕಿ ಶೇ.45ರಷ್ಟು ಅಂದರೆ 14 ಸಿಎಂಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ 11 ಸಿಎಂಗಳ ವಿರುದ್ಧ ಗಂಭೀರ ಪ್ರಕರಣಗಳಿವೆ.