‘ರಾಜ್ಯದಲ್ಲಿ ಬರದ ಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಬರ ಪರಿಸ್ಥಿತಿ ಎದುರಿಸಲು ತುರ್ತು ಕ್ರಮಗಳ ಮೂಲಕ ಸಜ್ಜಾಗಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ರಾಜ್ಯದಲ್ಲಿ ಬರದ ಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಬರ ಪರಿಸ್ಥಿತಿ ಎದುರಿಸಲು ತುರ್ತು ಕ್ರಮಗಳ ಮೂಲಕ ಸಜ್ಜಾಗಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕೃಷಿ, ತೋಟಗಾರಿಕೆ, ಸಹಕಾರ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ರಾಜ್ಯಾದ್ಯಂತ ಮುಂಗಾರು ಬಿತ್ತನೆ ಚಟುವಟಿಕೆ ಶುರುವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆ ಖಚಿತಪಡಿಸಿಕೊಳ್ಳುವ ಜತೆಗೆ ಮುಂದೆ ಬರದ ಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಬರ ಎದುರಿಸಲು ಸಜ್ಜಾಗಿ’ ಎಂದು ಕರೆ ನೀಡಿದರು.

ರಾಜ್ಯಕ್ಕೆ ಎಲ್‌ ನಿನೊ ಪರಿಣಾಮ ಹೆಚ್ಚಾಗಿ ಕಾಡುವ ಸಾಧ್ಯತೆಯಿದೆ. ಇದರಿಂದ ಮಳೆ ಕಡಿಮೆಯಾಗಿ ನೀರಿನ ಲಭ್ಯತೆಯೂ ಕಡಿಮೆಯಾಗಬಹುದು. ಈವರೆಗೆ ಇನ್ನೂ ಶೇ.30ರಷ್ಟೂ ಮಳೆ ಬಿದ್ದಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಎರಡೂ ರೀತಿಯ ಸ್ಥಿತಿ ಎದುರಿಸಲು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಸಭೆಯಲ್ಲಿ ಮುಂಗಾರಿಗೆ ಬಿತ್ತನೆ ಬೀಜ ಲಭ್ಯತೆ, ರಸಗೊಬ್ಬರ, ಕ್ರಿಮಿನಾಶಕ ಮತ್ತಿತರ ಔಷಧಗಳ ಲಭ್ಯತೆ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಯುದ್ಧದಿಂದ ಸಾಕಷ್ಟು ಸಮಸ್ಯೆಗಳು ಕೇಂದ್ರದಿಂದ ಆಗುತ್ತಿವೆ. ಇದರಲ್ಲಿ ರಸಗೊಬ್ಬರ ಕೊರತೆಯೂ ಒಂದು. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಸ್ವಾಭಾವಿಕ ಗೊಬ್ಬರಕ್ಕೆ ಹೋಗಿ, ಕಡಿಮೆ ಗೊಬ್ಬರ ಉಪಯೋಗಿಸಿ ಎಂದು ಪ್ರಧಾನಿಗಳು ಹೇಳಿದ್ದಾರೆ. ಹೀಗಾಗಿ ರೈತರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.ಸಬ್ಸಿಡಿ ಪ್ರತಿಫಲದ ಬಗ್ಗೆ ವರದಿ ನೀಡಿ:

ರೈತರಿಗೆ ಸಬ್ಸಿಡಿ ದರದಲ್ಲಿ ಕೊಟ್ಟಿರುವ ಸವಲತ್ತುಗಳು ಎಷ್ಟು ಪ್ರಯೋಜನಕಾರಿಯಾಗಿವೆ, ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಣಾಮವೇನು ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು. ಇವುಗಳ ಉದ್ದೇಶ ಈಡೇರುತ್ತಿದೆಯೇ ಎಂಬುದರ ಬಗ್ಗೆ ವರದಿ ನೀಡಿ ಎಂದು ಶಿವಕುಮಾರ್‌ ಸಲಹೆ ನೀಡಿದ್ದಾರೆ.

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿ:

ಇತರೆ ರಾಜ್ಯಗಳಲ್ಲಿರುವ ಕೃಷಿ ಮಾದರಿ ಯೋಜನೆ, ಮಾರ್ಗಗಳ ಬಗ್ಗೆಯೂ ಅಧ್ಯಯನ ನಡೆಸಿ ಕಾರ್ಯರೂಪಕ್ಕೆ ತನ್ನಿ. ಜತೆಗೆ ಡ್ರೋನ್‌, ಎಐ ಮತ್ತಿತರ ಆಧುನಿಕ ತಂತ್ರಜ್ಞಾನವು ಕೃಷಿಯಲ್ಲಿ ಬಳಕೆಯಾಗುವಂತೆ ಮಾಡಬೇಕು. ಕೃಷಿ ಹೊಂಡಗಳಿಗೆ ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಂಡಗಳಿಗೆ ಬೇಲಿ ನಿರ್ಮಿಸಬೇಕು. ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆ.

ರಫ್ತು ಉತ್ತೇಜನಕ್ಕೆ ಸೂಚನೆ:

ಕೃಷಿ ಇಲಾಖೆ ಅಧೀನದಲ್ಲಿರುವ ಐದು ನಿಗಮ ಮತ್ತು ಮಂಡಳಿಗಳ ಸ್ಥಿತಿಗತಿಯ ಅಧ್ಯಯನ‌ ನಡೆಸಿ ವರದಿ ನೀಡಬೇಕು. ರೈತರಿಗೆ ನೀಡಬೇಕಾದ ಪೂರಕ ಮಾಹಿತಿಗಳನ್ನು ವರದಿಯಲ್ಲಿ ಉಲ್ಲೇಖಿಸಬೇಕು. ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳ ಬಗ್ಗೆ ಪಟ್ಟಿ ಕೊಡಬೇಕು. ಜತೆಗೆ ಕೆಪೆಕ್ ಮೂಲಕ ರಫ್ತು ಎಷ್ಟು ಹೆಚ್ಚಾಗಿದೆ? ರಫ್ತು ಉತ್ತೇಜಿಸಲು ಏನೇನು ಕ್ರಮ ತೆಗೆದುಕೊಂಡಿದ್ದೀರಿ? ಎಂಬ ಬಗ್ಗೆ ವಿವರಣೆ ನೀಡಬೇಕು. ಅಲ್ಲದೆ ರಫ್ತು ಉತ್ತೇಜನಕ್ಕೆ ಪ್ರತ್ಯೇಕ ಯೋಜನೆ ರೂಪಿಸಬೇಕು ಎಂದು ತಮ್ಮ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಹಾಗೂ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್‌ ಗಿರಿನಾಥ್ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ಸಾಲ ದುರ್ಬಳಕೆ ತಡೆಯಿರಿ:

ಬ್ಯಾಂಕ್‌ಗಳು ನೀಡುವ ಬಡ್ಡಿ ರಹಿತ ಸಾಲದ ಸೌಲಭ್ಯ ಅಗತ್ಯವಿರುವವರಿಗೆ ತಲುಪುತ್ತಿಲ್ಲ. ಬ್ಯಾಂಕ್‌ನವರೇ ತಮಗೆ ಬೇಕಾದವರ ಹೆಸರಲ್ಲಿ ಸಾಲ‌ ಪಡೆಯುತ್ತಿದ್ದಾರೆ. ರೈತರಿಗೆ ವಂಚನೆ ಆಗಲು ಬಿಡಬಾರದು. 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ದುರುಪಯೋಗ ಆಗುತ್ತಿರುವ ಬಗ್ಗೆ ರೈತರು ನನ್ನ ಬಳಿ ಬಂದು ದೂರುತ್ತಿದ್ದಾರೆ. ಇದಕ್ಕೆ ಕಟ್ಟು ನಿಟ್ಟಿನ‌ ಬ್ರೇಕ್ ಹಾಕಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.

ಈ ವರ್ಷ 1068 ಕೋಟಿ ಮಾವು ಬೆಳೆ ನಾಶ ಆಗಿದೆ. ಈ ಪೈಕಿ ಶೇ. 25 ರಷ್ಟು ಅಂದರೆ 229 ಕೋಟಿ ರು. ಪರಿಹಾರ ಕೊಡಬೇಕಿದೆ. ಕರ್ನಾಟಕ ಸರಕಾರ 114 ಕೋಟಿ ರು. ಹಾಗೂ ಕೇಂದ್ರ ಸರಕಾರ 115 ಕೋಟಿ ರು. ನಷ್ಟ ಪರಿಹಾರ ಭರಿಸಬೇಕಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಿ. ಜತೆಗೆ ಎಪಿಎಂಸಿಗಳು ರೈತ ಸ್ನೇಹಿ ಆಗಿರುವಂತೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ ಅತೀಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಲವರು ಹಾಜರಿದ್ದರು.