ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಶೇ.21ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಕೂಡ ಕಡಿಮೆ ಬಿದ್ದಿರುವುದರಿಂದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಕಡಿಮೆಯಿರುವುದು ಆತಂಕ ಮೂಡಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.36ರಷ್ಟು ಕಡಿಮೆ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಕರಾವಳಿಯಲ್ಲೂ ಶೇ.41ರಷ್ಟು ಕಡಿಮೆ ಮಳೆಯಾಗಿದೆ. ಇನ್ನು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಕ್ರಮವಾಗಿ ಶೇ.2 ಮತ್ತು ಶೇ.1ರಷ್ಟು ಕಡಿಮೆ ಮಳೆಯಾಗಿದೆ.

ಡ್ಯಾಂಗಳು ಬರೀ 23% ಭರ್ತಿ

ಪೂರ್ವ ಮುಂಗಾರು ಹಾಗೂ ದುರ್ಬಲ ಮುಂಗಾರು ಪರಿಣಾಮ ಜಲಾಶಯಗಳ ಮೇಲೆ ಉಂಟಾಗಿದ್ದು, ಡ್ಯಾಂಗಳಲ್ಲಿ ಜೂ.15ರವರೆಗೆ ಒಟ್ಟು ಸಾಮರ್ಥ್ಯದ ಶೇ.23ರಷ್ಟು ಮಾತ್ರ ನೀರಿದೆ. ಜೂ.15ರಂದು ರಾಜ್ಯದ ಎಲ್ಲಾ ಜಲಾಶಯಗಳಲ್ಲಿ 206.45 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ, ಕಳೆದ ವರ್ಷ ಜೂ.15ರಂದು 349 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಬೇಸಿಗೆ ಕಾಲದ ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ಆತಂಕ ಉಂಟಾಗಿದೆ.


ರಾಜ್ಯದ ಎಲ್ಲಾ ಜಲಾಶಗಳಲ್ಲೂ ನೀರಿನ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ. ಅದರಲ್ಲೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್‌ ಜಲಾಶಯದಲ್ಲಿ 11.39 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ವೇಳೆಗೆ 30.84 ಟಿಎಂಸಿ ನೀರು ಸಂಗ್ರಹವಾಗಿತ್ತು.

ಮುಂದಿನ ತಿಂಗಳು ಎಲ್‌ ನಿನೋ?:

ಪೂರ್ವ ಮುಂಗಾರು ಜೊತೆಗೆ ನೈಋತ್ಯ ಮುಂಗಾರು ಕೂಡ ದುರ್ಬಲವಾಗಿರುವುದರಿಂದ ಜಲಾಶಯಗಳಲ್ಲಿ ಕಡಿಮೆ ನೀರಿದೆ. ಪೂರ್ವ ಮುಂಗಾರು ಉತ್ತಮವಾಗಿ ಬಿದ್ದಿದ್ದರೆ ಜಲಾನಯನ ಪ್ರದೇಶಗಳಲ್ಲಿ ಚೆನ್ನಾಗಿ ನೀರು ಹಿಂಗುತ್ತಿತ್ತು. ತದ ನಂತರ ಮುಂಗಾರು ಮಳೆ ಬಿದ್ದಾಗ ನೀರು ಜಲಾಶಯಗಳಿಗೆ ಹರಿದು ಬರುತ್ತಿತ್ತು ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಇನ್ನು ಮೊದಲ 15 ದಿನ ಮುಂಗಾರು ಮಳೆ ಕಡಿಮೆ ಇದೆ. ಅದರ ಜೊತೆಗೆ ಮುಂದಿನ ತಿಂಗಳು ಎಲ್‌ ನೀನೋ ಪರಿಣಾಮ ರಾಜ್ಯದ ಮುಂಗಾರು ಮೇಲೆ ಬೀರುವ ಸಾಧ್ಯತೆ ಇದೆ. ಹೀಗಾಗಿ, ಮಳೆ ಪ್ರಮಾಣ ಮತ್ತಷ್ಟು ಕಡಿಮೆಯಾದರೂ ಅಚ್ಚರಿಯಿಲ್ಲ. ಎಲ್‌ ನಿನೋ ಪರಿಣಾಮ ಎಷ್ಟರ ಮಟ್ಟಿಗೆ ಇರುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.ಬಾಕ್ಸ್‌...ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಕೊರತ

ಭಾಗಗಳುಸರಾಸರಿ ಮಳೆ (ಮಿ.ಮೀ)ಆಗಿರುವ ಮಳೆ (ಮಿ.ಮೀ)ಕೊರತೆ ಪ್ರಮಾಣದಕ್ಷಿಣ ಒಳನಾಡು41.840.8-2%ಉತ್ತರ ಒಳನಾಡು51.5 51.2 -1%ಮಲೆನಾಡು132.084.8-36%ಕರಾವಳಿ312.6184.7-41%ರಾಜ್ಯ85.567.7-21%ಬಾಕ್ಸ್....ಕೃಷ್ಣಾ- ಕಾವೇರಿ ಕಣಿವೆಯ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಒಟ್ಟಾರೆ ಸಾಮರ್ಥ್ಯಜೂ.15ರಂದು2025 ಜೂ.15

895.65 ಟಿಎಂಸಿ206.45 ಟಿಎಂಸಿ349.01 ಟಿಎಂಸಿ

ಕೋಟ್‌...

2- 3 ದಿನದಲ್ಲಿ ಚುರುಕಾಗುತ್ತೆಮೊದಲ 2 ವಾರಗಳ ರಾಜ್ಯದಲ್ಲಿ ಕಡಿಮೆ ಮಳೆಯಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕು ಪಡೆಯುವ ನಿರೀಕ್ಷೆ ಇದೆ.

- ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ