ಬೆಂಗಳೂರು : ‘ಪಾನ್‌ ಮಸಾಲಾ, ಗುಟ್ಕಾದಲ್ಲಿ ಸ್ವಲ್ಪ ನಶೆ ಅಥವಾ ಅಮಲು ಪದಾರ್ಥವನ್ನೂ ಬೆರೆಸಲಾಗುತ್ತಿದೆ ಎಂಬ ಮಾಹಿತಿ ನನಗೆ ಬರುತ್ತಿದೆ. ಅದೇನಾದರೂ ನಿಜವೇ ಆಗಿದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್‌ ಮಸಾಲಾ, ಗುಟ್ಕಾ ಪದಾರ್ಥಗಳನ್ನು ನಿಷೇಧಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಶಾ ಮುಕ್ತ ರಾಜ್ಯ ನಿರ್ಮಾಣ

ನಶಾ ಮುಕ್ತ ರಾಜ್ಯ ನಿರ್ಮಾಣ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಆದರೆ, ಈಗ ಬರುತ್ತಿರುವ ಪಾನ್‌ ಮಸಾಲಾ, ಗುಟ್ಕಾದಲ್ಲಿ ಅಮಲು ಪದಾರ್ಥವನ್ನೂ ಬೆರೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಾನ್‌ ಮಸಾಲಾ, ಗುಟ್ಕಾ ತಯಾರಿಕಾ ಕಂಪನಿಗಳ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಇದನ್ನು ಯಾವುದೇ ಕಾರಣಕ್ಕೂ ನಾನು ಸಹಿಸುವುದಿಲ್ಲ. ನಿಮ್ಮ ಕಂಪನಿಗಳ ವ್ಯವಹಾರದಿಂದ ಸರ್ಕಾರಕ್ಕೆ ಹೆಚ್ಚೆಂದರೆ 100 ಕೋಟಿ ರು. ಆದಾಯ ಬರಬಹುದು. ಅದು ಹೋದರೆ ಹೋಗಲಿ, ತಲೆಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ಅಮಲು ಪದಾರ್ಥ ಬೆರೆಸಿರುವುದು ಕಂಡುಬಂದರೂ ರಾಜ್ಯದಲ್ಲಿ ಎಲ್ಲಾ ರೀತಿಯ ಗುಟ್ಕಾ, ಪಾನ್‌ ಮಸಾಲಾ ಮಾರಾಟ ನಿಷೇಧ ಮಾಡಲಾಗುವುದು ಎಂದರು.


ಮಾದಕದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಅದಕ್ಕಾಗಿ ನಾವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇಂದು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳು, ಬೋಧಕರು ಸೇರಿ ನಶೆ ಮುಕ್ತ ಭಾರತ ಸಮಾವೇಶ ಹಮ್ಮಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ನೀವೆಲ್ಲರೂ ಇದರ ರಾಯಭಾರಿಗಳು. ಮಾದಕ ವ್ಯಸನ ತಡೆಯುವಿಕೆ ದೊಡ್ಡ ಸವಾಲಾಗಿದ್ದು, ನಾವೆಲ್ಲರೂ ಒಂದಾಗಿ ಸೇರಿ, ಇದರ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯೋಣ. ಇದು ಎಲ್ಲರ ಕರ್ತವ್ಯವಾಗಿದೆ. ನೀವು ಜೀವ ರಕ್ಷಣೆಯ ವೃತ್ತಿ ಆಯ್ಕೆ ಮಾಡಿಕೊಂಡಿದ್ದು, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಸಿಗುವಂತೆ ಆಗಬೇಕು. ಬೆಂಗಳೂರಿನ ಹವಾಮಾನ ದೇಶದ ಬೇರೆ ಯಾವುದೇ ಭಾಗದಲ್ಲೂ ಇಲ್ಲ. ಹೀಗಾಗಿ ಇದನ್ನು ಹವಾನಿಯಂತ್ರಿತ ನಗರ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಇರುವಷ್ಟು ಆಸ್ಪತ್ರೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಕರ್ನಾಟಕ ದೇಶದಲ್ಲಿ ವೈದ್ಯಕೀಯ ರಾಜಧಾನಿಯೂ ಆಗಿದೆ. ಈ ವಿವಿಯು ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಕ್ಯಾಂಪಸ್‌ಗೆ ಸ್ಥಳಾಂತರವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌, ರಾಜ್ಯಪಾಲ ಥಾವರಚಂದ್ ಗೆಹಲೋತ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಆರೋಗ್ಯ ಸಚಿವ ಯು.ಟಿ.ಖಾದರ್‌, ವಿವಿಯ ಕುಲಪತಿ ಡಾ.ಭಗವಾನ್‌, ಕುಲಸಚಿವ ಅರ್ಜುನ್‌ ಒಡೆಯರ್‌ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

ಎಚ್ಚರಿಕೆ ಏಕೆ?

ಪಾನ್‌ ಮಸಾಲಾ, ಗುಟ್ಕಾಕ್ಕೆ ನಶೆ ಪದಾರ್ಥ ಸೇರ್ಪಡೆ ಬಗ್ಗೆ ಮಾಹಿತಿ

ಜನರಿಗೆ ಗುಟ್ಕಾದ ಚಟ ಹಿಡಿಸಲು ಕಂಪನಿಗಳಿಂದಲೇ ಕೃತ್ಯದ ಶಂಕೆ

ನಶೆ ಪದಾರ್ಥಗಳನ್ನು ಬಳಸಿ ಗುಟ್ಕಾ ಮಾರಾಟ ಕಾನೂನು ಬಾಹಿರ

ಇವುಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಹೀಗಾಗಿ ನಶೆ ಪದಾರ್ಥ ಬಳಸಿದ್ದು ಖಚಿತವಾದರೆ ಮಾರಾಟಕ್ಕೆ ನಿಷೇಧ

ಇದರಿಂದ ನಮಗೆ 100 ಕೋಟಿ ನಷ್ಟ ಆದಾರೂ ತಲೆ ಕೆಡಿಸಿಕೊಳ್ಳೋಲ್ಲ

ಗುಟ್ಕಾ ತಯಾರಿಕಾ ಕಂಪನಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ