ಬರಗಾಲ, ಅತಿವೃಷ್ಠಿ ಎದುರಿಸಲು ಸಿದ್ಧರಾಗಿ: ಎಚ್.ಡಿ.ನವೀನ್ ಕುಮಾರ್ ಕರೆ

| Published : Apr 05 2025, 12:47 AM IST

ಬರಗಾಲ, ಅತಿವೃಷ್ಠಿ ಎದುರಿಸಲು ಸಿದ್ಧರಾಗಿ: ಎಚ್.ಡಿ.ನವೀನ್ ಕುಮಾರ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮಳೆ ಬಾರದೇ ಹೋದರೆ ಬರಗಾಲ ಎದುರಿಸಲು ಸಿದ್ದರಾಗಬೇಕು. ಅತಿಯಾದ ಮಳೆಯಾದರೆ ಅತಿವೃಷ್ಠಿ ಎದುರಿಸಲು ಸಹ ಸಿದ್ದರಾಗಬೇಕು ಎಂದು ತಾಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್‌ಕುಮಾರ್ ಅಧಿಕಾರಿಗಳಿಗೆ ಕರೆ ನೀಡಿದರು.

ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆಗಳ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಳೆ ಬಾರದೇ ಹೋದರೆ ಬರಗಾಲ ಎದುರಿಸಲು ಸಿದ್ದರಾಗಬೇಕು. ಅತಿಯಾದ ಮಳೆಯಾದರೆ ಅತಿವೃಷ್ಠಿ ಎದುರಿಸಲು ಸಹ ಸಿದ್ದರಾಗಬೇಕು ಎಂದು ತಾಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್‌ಕುಮಾರ್ ಅಧಿಕಾರಿಗಳಿಗೆ ಕರೆ ನೀಡಿದರು.

ಶುಕ್ರವಾರ ತಾಪಂ ಸಾಮರ್ಥ್ಯಸೌಧದಲ್ಲಿ ತಹಸೀಲ್ದಾರ್ ತನುಜಾ. ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಬರ ನಿರ್ವಹಣೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿ, ಬರ ಪೀಡಿತ ತಾಲೂಕು ಎಂದು ಘೋಷಣೆ ಯಾದಲ್ಲಿ ಮಾತ್ರ ಟ್ಯಾಂಕರ್ ನೀರೊದಗಿಸಿದಕ್ಕೆ ಅನುದಾನ ಬಿಡುಗಡೆಯಾಗುತ್ತದೆ. ಇಲ್ಲವಾದಲ್ಲಿ ಅನುದಾನ ನೀಡುವುದಿಲ್ಲ. ಆದ್ದರಿಂದ ಯಾವುದಕ್ಕೂ ಮುಂಚಿತವಾಗಿ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಒದಗಿಸುವ ಸಂದರ್ಭ ಎದುರಾದರೆ ಕೂಡಲೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಅವರಿಗೆ ಮಾಹಿತಿ ನೀಡಬೇಕು. ಪ್ರತಿನಿತ್ಯ ಟ್ಯಾಂಕರ್ ನೀರೊದಗಿಸಿದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಹೇಳಿದರು.

ಕಳೆದೆರಡು ದಿನಗಳಿಂದ ಅಲ್ಪ ಮಳೆಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆ ಹರಿದಿದೆ. ಸಣ್ಣ ಪುಟ್ಟ ಪೈಪ್‌ಲೈನ್ ಕಾಮಗಾರಿ ಇನ್ನಿತರೆ ಸಮಸ್ಯೆಗಳನ್ನು ಗ್ರಾಪಂ ಹಂತದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಗುರುವಾರ ತಾಲೂಕಿನಲ್ಲಿ ಬಾರೀ ಗುಡುಗು, ಮಿಂಚು ಸಹಿತ ಅಧಿಕ ಮಳೆಯಾಗಿದೆ. ಇದೇ ರೀತಿ ಬಾರೀ ಪ್ರಮಾಣದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಮಳೆ ಬಂದಲ್ಲಿ ಅದಕ್ಕೂ ನಾವು ಸನ್ನದ್ಧರಾಗಬೇಕಿದೆ. ಮನೆ ಹಾನಿ, ಪ್ರಾಣ ಹಾನಿ ಬಗ್ಗೆ ಎಚ್ಚರವಹಿಸಬೇಕು. ಈಗಿನಿಂದಲೇ ಅಪಾಯದಲ್ಲಿರುವ ಹಾಗೂ ಬೀಳುವಂತಹ ಮರಗಳಿದ್ದರೆ ಕೂಡಲೇ ಅಂತಹ ಮರಗಳ ಕಡಿ ತಲೆ ಮಾಡಲು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಬೇಕು ಎಂದು ಸೂಚಿಸಿದರು. ತಹಸೀಲ್ದಾರ್ ತನುಜಾ. ಟಿ.ಸವದತ್ತಿ ಮಾತನಾಡಿ, ಏಪ್ರಿಲ್ ಹಾಗೂ ಮೇ ತಿಂಗಳು ಬಿಸಿಲು ಅಧಿಕವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಆದ್ದರಿಂದ ಎಲ್ಲಾ ಗ್ರಾಪಂ ನವರೂ ಕೂಡ ಎಲ್ಲೆಲ್ಲಿ ನೀರಿನ ಸಮಸ್ಯೆಗಳು ಉದ್ಭವಿಸ ಬಹುದಾಗಿದೆ. ಅಂತಹ ಗ್ರಾಮಗಳ ಪಟ್ಟಿ ಮಾಡಿ ಅಲ್ಲಿ ಏನು ಪರ್ಯಾಯ ವ್ಯವಸ್ಥೆ ಮಾಡಬಹುದು ಎಂಬ ಬಗ್ಗೆ ಕ್ರಮ ಕೈ ಗೊಳ್ಳಬೇಕು ಎಂದು ಸೂಚಿಸಿದರು. ಬೇಸಿಗೆಯಲ್ಲಿ ಸಾಕಷ್ಟು ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು. ವಿವಿಧ ಗ್ರಾಮ ಪಂಚಾಯಿತಿ ಪಿಡಿಒಗಳು ಸಭೆಗೆ ಮಾಹಿತಿ ನೀಡಿ, ಆಡುವಳ್ಳಿ ಗ್ರಾಪಂ ಗಡಿಗೇಶ್ವರ, ಅಂಡ್ವಾನಿ, ಕಡಹಿನ ಬೈಲು ಗ್ರಾಪಂ ವ್ಯಾಪ್ತಿಯ ಬಾಳೆಕೊಪ್ಪ, ಬಾಳೆ ಗ್ರಾಪಂ ವಗ್ಗಡೆ, ಕರ್ಕೇಶ್ವರ ಗ್ರಾಪಂ ಕೊಡಗಿಹಡ್ಲು, ಸೀತೂರು ಗ್ರಾಪಂ ಹಾತೂರು, ಬನ್ನೂರು ಗ್ರಾಪಂ ವ್ಯಾಪ್ತಿಯ ಕುಂಬ್ರುಮನೆ ಗ್ರಾಮಗಳಲ್ಲಿ ನೀರು, ಪೈಪ್‌ಲೈನ್ ಕಾಮಗಾರಿ ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಇದೆ ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಇಒ ಎಚ್.ಡಿ. ನವೀನ್‌ಕುಮಾರ್ ಮಾತನಾಡಿ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಮೆಸ್ಕಾಂ ಇಲಾಖೆ ಎಇಇ ಗೌತಮ್ ಅವರಿಗೆ ತಿಳಿಸಿದರು.

ಆರ್. ಡಬ್ಯೂ. ಎಸ್ ಎಇಇ ಮಾತನಾಡಿ, ನಮ್ಮ ಹಂತದಲ್ಲಿ ತೀರಾ ತುರ್ತು ಇರುವಂತಹ ಪೈಪ್‌ಲೈನ್ ಕಾಮಗಾರಿಗಳನ್ನು ನಿರ್ವಹಿಸಲು ಅನುದಾನವಿದೆ. ಸಣ್ಣಪುಟ್ಟ ಪೈಪ್‌ಲೈನ್ ಕಾಮಗಾರಿಗಳನ್ನು ಗ್ರಾಪಂನಿಂದ ನಿರ್ವಹಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಬೋರ್ ಕೊರೆಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿ ವಾಟರ್‌ಮ್ಯಾನ್‌ಗಳಿಗೆ ಮುಂದಿನ ವಾರದಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ತನುಜಾ ಟಿ.ಸವದತ್ತಿ ವಹಿಸಿದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಇ.ಒ. ನವೀನ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎ.ಡಬ್ಲ್ಯೂ ವೀರೇಶ್ ಇದ್ದರು.

ವಿವಿಧ ಇಲಾಖೆ ತಾಲೂಕು ಮಟ್ಟದ ಅದಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.

-- ಬಾಕ್ಸ್--

ಉತ್ತಮ ಸಾಧನೆ ಮಾಡಿದ ಗ್ರಾಪಂಗೆ ಪ್ರಶಸ್ತಿ

ಕರ ವಸೂಲಿಯಲ್ಲಿ ತಾಲೂಕಿನಲ್ಲೇ ಪ್ರಥಮ ಸ್ಥಾನ ಪಡೆದ ಬಾಳೆ ಗ್ರಾಮ ಪಂಚಾಯಿತಿ ಪಿಡಿಒ ಪ್ರೇಮ, ದ್ವಿತೀಯ ದರ್ಜೆ ಲೆಕ್ಕಾಧಿಕಾರಿ ಶಾಂತಲಾ, ಕರ ವಸೂಲಿಗಾರ ನಾಗರಾಜ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅಲ್ಲದೆ 15 ನೇ ಹಣಕಾಸು ಅನುದಾನವನ್ನು ಸಮರ್ಪಕ ವಾಗಿ ಬಳಸಿಕೊಂಡ ಗ್ರಾಮ ಪಂಚಾಯಿತಿಗೆ, ಅತಿ ಹೆಚ್ಚು ಮೊತ್ತದ ಕಂದಾಯ ವಸೂಲಿ, ನರೇಗಾ ಯೋಜನೆಯಡಿ ಅತಿ ಹೆಚ್ಚು ಪ್ರಗತಿ, ಜಿಪಿಎಸ್ ರ್ಯಾಂಕಿಂಗ್ ಸಿಸ್ಟಮ್ ನಲ್ಲಿ ಅತಿ ಹೆಚ್ಚು ಪ್ರಗತಿ, ಕಡತ ಮತ್ತು ದತ್ತಾಂಶ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳನ್ನು ಆರಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಪತ್ರ ನೀಡಲಾಯಿತು.