ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಕೆಂಪೇಗೌಡ ಜಯಂತಿ ದಿನದಂದು 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸ್ಥಳೀಯ ಜಾತಿಯ ಸಸಿಗಳನ್ನು ನೆಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದೆ.

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಕೆಂಪೇಗೌಡ ಜಯಂತಿ ದಿನದಂದು 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸ್ಥಳೀಯ ಜಾತಿಯ ಸಸಿಗಳನ್ನು ನೆಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದೆ.

ಇದು ನಗರ ಪ್ರದೇಶದಲ್ಲಿ ಕೈಗೊಂಡ ಅತಿದೊಡ್ಡ ಸಮನ್ವಯಿತ ಹಸಿರು ಅಭಿಯಾನಗಳಲ್ಲಿ ಒಂದಾಗಿದೆ. 12 ಗಂಟೆಗಳ ಅವಧಿಯಲ್ಲಿ ಬಹು ಸ್ಥಳಗಳಲ್ಲಿ ತಂಡವೊಂದು ಅತಿ ಹೆಚ್ಚು ಸಸಿಗಳನ್ನು ನೆಟ್ಟ ಸಾಧನೆ ಎಂಬ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆಯಾಗಿ ಮಾನ್ಯತೆ ಪಡೆದಿದೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್‌ ಅವರು ಗಿನ್ನೆಸ್‌ ವಿಶ್ವದಾಖಲೆ ತೀರ್ಪುಗಾರ ರಿಷಿನಾಥ್‌ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು. ಈ ವೇಳೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್‌ ಇದ್ದರು.

ಬೆಂಗಳೂರು ನಗರ ಪರಿಸರ ಪುನಶ್ಚೇತನ ಮಿಷನ್ 2026–30ರ ಪ್ರಮುಖ ಭಾಗವಾಗಿರುವ ಬೃಹತ್ ಸಸಿ ನೆಡುವ ಅಭಿಯಾನವು ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಶಿವರಾಮ ಕಾರಂತ ಬಡಾವಣೆ, ಆಕ್ಸಿಜನ್ ಟ್ರೀ ಪಾರ್ಕ್‌ಗಳು, ಮಿಯಾವಾಕಿ ಅರಣ್ಯ ವಲಯಗಳು ಹಾಗೂ ಗುರುತಿಸಲಾದ ಇತರ ಹಸಿರು ಪ್ರದೇಶಗಳಲ್ಲಿ ನಡೆಯಿತು. ನಗರ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ವೈಜ್ಞಾನಿಕವಾಗಿ ಆಯ್ಕೆ ಮಾಡಿದ ಸ್ಥಳೀಯ ಜಾತಿಯ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಹ್ಯಾರೀಸ್‌ ಮಾತನಾಡಿ, 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವುದು ಕೇವಲ ವಿಶ್ವ ದಾಖಲೆಯಲ್ಲ; ಇದು ಮುಂದಿನ ಪೀಳಿಗೆಗೆ ನೀಡುತ್ತಿರುವ ನಮ್ಮ ಬದ್ಧತೆಯ ಸಂಕೇತವಾಗಿದೆ. ಅಭಿವೃದ್ಧಿ ಮತ್ತು ಪ್ರಕೃತಿ ಕೈಜೋಡಿಸುವ ಹಸಿರು, ಆರೋಗ್ಯಕರ ಹಾಗೂ ಸುಸ್ಥಿರ ಬೆಂಗಳೂರನ್ನು ನಿರ್ಮಿಸುವಲ್ಲಿ ಬಿಡಿಎ ಸದಾ ಬದ್ಧವಾಗಿದೆ. ಈ ಅಭಿಯಾನದಲ್ಲಿ ನೂರಾರು ಸ್ಥಳಗಳಲ್ಲಿ ಹತ್ತಾರು ಸಾವಿರ ಸ್ವಯಂಸೇವಕರು, ವಿವಿಧ ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದು ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಬಡಾವಣೆ ಗುರಿ ನೆಟ್ಟ ಗಿಡಗಳು ಸಾಧನೆ

ಎನ್‌ಪಿಕೆಎಲ್‌ 6,90,000 6,77,500 ಶೇ.98

ಡಿಎಸ್‌ಕೆಎಲ್‌ 7,05,000 7,12,250 ಶೇ.101.03

ಬಿಎಸ್‌ಕೆಎಲ್‌ 1,05,000 1,05,800 ಶೇ.100

ಒಟ್ಟು 15,00,000 14,95,550 ಶೇ.99.70