ಸಂಸತ್ ಆವರಣದಲ್ಲಿ ಉಪ ರಾಷ್ಟ್ರಪತಿ ಧನಕರ್ ಅಣಕು ಖಂಡಿಸಿ ಬಿಜೆಪಿ ಪ್ರತಿಭಟನೆ । ರಾಹುಲ್‌ಗೆ ಸಂವಿಧಾನದ ಅರಿವಿಲ್ಲ: ವೀರೇಶ್ ಲೇವಡಿ
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯಸಭೆ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ರನ್ನು ಅಣಕು (ಮಿಮಿಕ್ರಿ) ಮಾಡಿದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಂಸದರ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು.
ನಗರದ ಕೆಬಿ ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿಯಿಂದ ಜಿಲ್ಲಾ ಪದಾಧಿಕಾರಿಗಳು, ಹಿರಿಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಕೇಂದ್ರದ ವಿಪಕ್ಷಗಳ ಸದಸ್ಯರ ವಿರುದ್ಧ ಘೋಷಣೆ ಕೂಗಿ ಶ್ರೀ ಜಯದೇವ ವೃತ್ತ ತಲುಪಿದರು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಸಾಂವಿಧಾನಿಕ ಹುದ್ದೆಯಾಗಿದ್ದು, ಕಲಾಪದ ವೇಳೆ ಜಗದೀಪ ಧನಕರ್ ಆಡಿದ ಮಾತುಗಳ ಅನುಕರಿಸಿ ವಿಪಕ್ಷ ಸಂಸದರು ಅಣಕು ಪ್ರದರ್ಶನ ಮಾಡಿದ್ದು ದುರಂತ. ಇದು ಕೇವಲ ಸಭಾಪತಿಗೆ ಮಾಡಿದ ಅವಮಾನವಲ್ಲ. ದೇಶದ ಸಂವಿಧಾನ ಹಾಗೂ ಜನತೆಗೆ ಮಾಡಿದ ಅವಮಾನವಾಗಿದೆ ಎಂದರು.ಅಣಕು ಪ್ರದರ್ಶಿಸುತ್ತಿದ್ದ ಸಂಸದನಿಗೆ ತಿಳಿ ಹೇಳಬೇಕಾದ ಎಐಸಿಸಿ ಮುಖಂಡ ರಾಹುಲ್ ಗಾಂಧಿ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಬೆಂಬಲಿಸುವಂತೆ ವರ್ತಿಸುತ್ತಿದ್ದು ಖಂಡನೀಯ. ತಕ್ಷಣವೇ ಕಾಂಗ್ರೆಸ್ ಸಂಸದರು ದೇಶದ ಜನರ ಕ್ಷಮೆಯಾಚಿಸಬೇಕು. ಸಾಂವಿಧಾನಿಕ ಹುದ್ದೆಗಳ ಬಗ್ಗೆ ಕನಿಷ್ಟ ಅರಿವಿಲ್ಲದ ರಾಹುಲ್ ಗಾಂಧಿಯನ್ನು ಇಂಡಿಯಾ ಕೂಟದ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕಿತ್ತು. ಆದರೆ, ರಾಹುಲ್ ಗಾಂಧಿಗೆ ಸಂವಿಧಾನದ ಅರಿವಿಲ್ಲವೆಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಿಸಲಾಗಿದೆ ಎಂದು ಟೀಕಿಸಿದರು.
ತಮ್ಮ ಪಕ್ಷದವರಿಂದಲೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗದ ನಾಯಕ ದೇಶವಾಗಲಿ, ಜನರಾಗಲೀ ಹೆಚ್ಚಿನದು ಏನು ನಿರೀಕ್ಷಿಸಲು ಸಾಧ್ಯ? ರಾಜ್ಯಸಭಾ ಸಭಾಪತಿ ವಿಚಾರದಲ್ಲಿ ರಾಹುಲ್ ಗಾಂಧಿ ವರ್ತನೆಗೆ ಇಡೀ ದೇಶದ ಜನತೆ ಬೇಸರ ಹೊರ ಹಾಕುತ್ತಿದ್ದಾರೆ ಎಂದು ದೂರಿದರು. ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆ ನಂತರ ವಿಪಕ್ಷ ಕಾಂಗ್ರೆಸ್ ವಿಪಕ್ಷವಾಗಿರದೇ, ಕೇವಲ ಪ್ರೇಕ್ಷಕನಾಗಿರಲಿದೆ. ಲೋಕಸಭೆಯಲ್ಲಿ ಈಚೆಗೆ ನಡೆದ ದುಷ್ಕೃತ್ಯವನ್ನು ಆಡಳಿತ ಮತ್ತು ವಿಪಕ್ಷಗಳು ಸೇರಿ, ಖಂಡಿಸುವ ಪದ್ಧತಿ ಇದೆ. ಆದರೆ, ಕಾಂಗ್ರೆಸ್ಸಿನವರು ಪರೋಕ್ಷವಾಗಿ ಕೃತ್ಯ ಎಸಗಿದವರ ಬೆಂಬಲಿಸುತ್ತಿದೆ. ಟಿಎಂಸಿ, ಕಾಂಗ್ರೆಸ್ ಸೇರಿ ಯಾರೇ ಸಂಸದರಿದ್ದರೂ ಸಾಂವಿಧಾನಿಕ ಹುದ್ದೆಯಲ್ಲಿರುವ ಉಪ ರಾಷ್ಟ್ರಪತಿಗಳ ಅಣಕು ಮಾಡಿದ್ದನ್ನು 140 ಕೋಟಿ ಭಾರತೀಯರು ಗಮನಿಸುತ್ತಾರೆಂಬ ಕನಿಷ್ಟ ಪರಿಜ್ಞಾನವೂ ಇಲ್ಲದಂತೆ ವರ್ತಿಸಿದ್ದು ನಾಚಿಕೆಗೇಡು ಎಂದು ಟೀಕಿಸಿದರು.ಪಕ್ಷದ ಹಿರಿಯ ಮುಖಂಡ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ಎಸ್.ಮಂಜಾನಾಯ್ಕ, ಶಿವರಾಜ ಪಾಟೀಲ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಎನ್.ರಾಜಶೇಖರ, ಡಿ.ಎಸ್.ಶಿವಶಂಕರ, ಎಚ್.ಪಿ.ವಿಶ್ವಾಸ್, ಪ್ರಕಾಶ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ, ಮಾಜಿ ಮೇಯರ್ ಎಸ್.ಟಿ.ವೀರೇಶ, ಕೆ.ಎಂ.ಸುರೇಶ, ಮಾಯಕೊಂಡ ದೇವೇಂದ್ರಪ್ಪ, ಕೃಷ್ಣಪ್ಪ, ಪಿ.ಎಸ್.ಬಸವರಾಜ, ನೀಲಗುಂದ ರಾಜು, ಶಿವನಗೌಡ ಪಾಟೀಲ್, ಬಸವರಾಜಯ್ಯ, ಟಿಂಕರ್ ಮಂಜಣ್ಣ, ಶಾಬನೂರು ರಾಜು, ಬಾಳೆಕಾಯಿ ಶಿವು, ಅತಿಥ್ ಅಂಬರಕರ್, ಕೆ.ರಾಜೇಶ್ವರಿ, ಧನುಷ ರೆಡ್ಡಿ ಇತರರಿದ್ದರು.
ಕಾಂಗ್ರೆಸ್‌ನದ್ದು ಟೊಳ್ಳು ಗ್ಯಾರಂಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚ ರಾಜ್ಯಗಳ ಚುನಾವಣೆ ಲೋಕಸಭೆ ಚುನಾವಣೆ ಸೆಮಿಫೈನಲ್ ಅಂತಾ ಹೇಳಿದ್ದರು. ಈಗ ಸೆಮಿಫೈನಲ್‌ನಲ್ಲಿ ಬಿಜೆಪಿ ಗೆದ್ದಾಗಿದೆ. ಇನ್ನೆನೀದ್ದರೂ ಫೈನಲ್‌ಗೆ ಹೋಗಬೇಕಿದೆ. ಅಲ್ಲೂ ಮೋದಿ ಸಾರಥ್ಯದ ಬಿಜೆಪಿ ಜಯಭೇರಿ ಬಾರಿಸಲಿದೆ. ಮೋದಿಯವರದ್ದು ಗಟ್ಟಿ ಗ್ಯಾರಂಟಿ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ರಾಜ್ಯ ಕಾಂಗ್ರೆಸ್‌ನಂತೆ ಟೊಳ್ಳು ಗ್ಯಾರಂಟಿಯಲ್ಲ. ಎಸ್.ಎಂ.ವೀರೇಶ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ .........