ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಬಿ.ಎಚ್. ರಸ್ತೆಯ ಶಂಕರಮಠದಲ್ಲಿ ಜಿಲ್ಲಾ ಬಾಹ್ಮಣ ಸಭಾದ ನೇತೃತ್ವದಲ್ಲಿ ಸಮಾವೇಶಗೊಂಡ ಆರ‍್ಯವೈಶ್ಯ, ವಿಶ್ವಕರ್ಮ ಹಾಗೂ ಜೈನ ಸಮುದಾಯದ ಮುಖಂಡರು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವ ಕುರಿತು ನಿರ್ಣಯ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಿ.ಎಸ್. ಬಸವರಾಜು ಸ್ವಾತಂತ್ರ‍್ಯ ಭಾರತದಲ್ಲಿ ಈ ರೀತಿಯ ಘಟನೆ ಎಂದೂ ಸಹ ನಡೆದಿರಲಿಲ್ಲ. ಈ ಘಟನೆ ಒಂದು ಸಮುದಾಯದ ಮೇಲೆ ನಡೆದ ದೌರ್ಜನ್ಯವಲ್ಲ, ಬದಲಾಗಿ ಸಂವಿಧಾನದ ಮೇಲೆ ನಡೆದ ದೌರ್ಜನ್ಯ. ಸಮಸ್ತ ಹಿಂದೂ ಸಮಾಜ ಇದನ್ನು ಖಂಡಿಸಬೇಕು ಎಂದರು.ಆರ‍್ಯವೈಶ್ಯ ಸಮಾಜದ ಮುಖಂಡ ಡಾ. ರಮೇಶ್ ಬಾಬು ಮಾತನಾಡಿ, ನಿರಂತರವಾಗಿ ಬಹುಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಘಟನೆಯ ಕೊರತೆ ಕಾರಣವಾಗಿದೆ. ಬೇರೆ ದೇಶದ ಜನರು ಇಂದು ಸನಾತನ ಧರ್ಮದ ಕಡೆಗೆ ಆಕರ್ಷಿತವಾಗುತ್ತಿರುವ ಸಂದರ್ಭಲ್ಲಿ ನಮ್ಮಲ್ಲಿ ಧರ್ಮದ ಕುರಿತು ಆಸಕ್ತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕಿದೆ ಎಂದರು.
ವಿಶ್ವಕರ್ಮ ಸಮುದಾಯದ ಮುಖಂಡರಾದ ಚಂದ್ರಶೇಖರ ಆಚಾರ್ ಮಾತನಾಡಿ, ದೂರದ ಬೀದರ್ ಅಥವಾ ಶಿವಮೊಗ್ಗದಲ್ಲಿ ನಡೆದ ಘಟನೆ ತುಮಕೂರಿನಲ್ಲಿ ಕೂಡ ನಡೆಯಬಹುದು. ಹಾಗಾಗಿ ಘಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. ಕೇವಲ ಇದು ಒಂದು ಸಮುದಾಯದ ಮೇಲಾಗಿರುವ ದೌರ್ಜನ್ಯವಲ್ಲ, ಸಮಸ್ತ ಹಿಂದೂ ಧರ್ಮದ ಮೇಲಿನ ದೌರ್ಜನ್ಯ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಚ್.ಎನ್. ಚಂದ್ರಶೇಖರ್ ಮಾತನಾಡಿ, ಜನಿವಾರ ತೆಗೆಸಿದ ಘಟನೆ ಸಣ್ಣ ವಿಷಯವೆಂದು ಭಾವಿಸಬಾರದು. ಘಟನೆ ಚಿಕ್ಕದಾಗಿರುವಾಗಲೇ ಹೊಸಕಿ ಹಾಕುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಬೆಂಬಲದೊಂದಿಗೆ ತುಮಕೂರಿನಲ್ಲಿ ದಿ. 28ರಂದು ಬೆಳಿಗ್ಗೆ 11ಗಂಟೆಗೆ ನಗರದ ಬಿ.ಜಿ.ಎಸ್. ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.