ಹೊಳಲ್ಕೆರೆಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಶಾಸಕ ಎಂ.ಚಂದ್ರಪ್ಪ ಬಣ್ಣನೆ ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲ ಧರ್ಮದವರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಪಟ್ಟಣದ ಸಂವಿಧಾನ ಸೌಧದಲ್ಲಿ ಬುಧವಾರ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕವೆಂದರೆ ಸರ್ವ ಧರ್ಮೀಯರು ಪ್ರೀತಿಸುವ ನೆಲವೆಂದರು. ಹಿಂದುಳಿದ ಜನಾಂಗದ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡಿದ್ದ ಧೀಮಂತ ನಾಯಕ, ಹಿಂದುಳಿದ ವರ್ಗಗಳ ಹರಿಕಾರ ದಿವಂಗತ ಡಿ.ದೇವರಾಜ ಅರಸುರವರು ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿ ಇಂದಿಗೆ ಐವತ್ತು ವರ್ಷಗಳಾಗಿದೆ. ಭಾರತದ ಭೂಪಟದಲ್ಲಿ ಕರ್ನಾಟಕ ರಾಜ್ಯಕ್ಕೆ ಅತ್ಯುತ್ತಮವಾದ ಸ್ಥಾನವಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಭಾರತದ ಯಾವ ರಾಜ್ಯಕ್ಕೂ ಇಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳು ದೊರತಿಲ್ಲವೆಂದರು. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ವಿಶಿಷ್ಟತೆಯಿದೆ. ಕರ್ನಾಟಕದ ಕೆಲವೊಂದು ಭಾಗಗಳು ಹರಿದು ಹಂಚಿ ಹೋಗಿದ್ದನ್ನು ಒಂದುಗೂಡಿಸುವಲ್ಲಿ ಆಲೂರು ವೆಂಕಟರಾಯರು, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಸೇರಿದಂತೆ ಅನೇಕ ಹಿರಿಯರು ಶ್ರಮಿಸಿದ್ದಾರೆ. ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ವಿದ್ಯಾರ್ಥಿಗಳು ಶಿಕ್ಷಣವಂತರಾಗುವುದರ ಜೊತೆಗೆ ಬುದ್ದಿವಂತರಾಗಿ ಗುರು-ಹಿರಿಯರು ತಂದೆ-ತಾಯಿಗಳಿಗೆ ಕೀರ್ತಿ ತರುವಂತಾಗಬೇಕು. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನಕ್ಕೆ ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ತಿಳಿದಿದ್ದೇನೆ. ಗುಣಮಟ್ಟದ ಶಾಲಾ-ಕಾಲೇಜುಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರಿಗೆ ಅಭಾವ ಎದುರಾಗಲಿದೆ ಎನ್ನುವುದನ್ನು ಮನಗಂಡು ಹಿಂದಿನ ಬಿಜೆಪಿ ಸರ್ಕಾರದಲ್ಲಿಯೇ ಅನುದಾನ ತಂದು ತಾಲೂಕಿನಾದ್ಯಂತ ಪ್ರತಿ ಮನೆಗೆ ನೀರು ಪೂರೈಕೆ ಮಾಡಲಾಗಿದೆ. ರೈತರಿರು ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸಬಾರದೆಂದು ಜೋಗ್‍ಫಾಲ್ಸ್‌ನಿಂದ ಚಿಕ್ಕಜಾಜೂರು ಸಮೀಪದ ಕೋಟೆಹಾಳ್ ಹತ್ತಿರ ನೇರವಾಗಿ ವಿದ್ಯುತ್ ತರಿಸಿಕೊಳ್ಳುವ ಕಾಮಗಾರಿ ಆರಂಭಗೊಂಡಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ತಹಸೀಲ್ದಾರ್ ಬೀಬಿ ಫಾತಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ.ವಾಸೀಂ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪುರಸಭೆ ಸದಸ್ಯರುಗಳಾದ ಅಶೋಕ್, ಕೆ.ಸಿ.ರಮೇಶ್, ಪಿ.ಎಂ.ಮುರುಗೇಶ್, ಮಲ್ಲಿಕಾರ್ಜುನಸ್ವಾಮಿ, ವಿಜಯ, ನಾಗರತ್ನ ವೇದಮೂರ್ತಿ, ಸುಧಾ ಬಸವರಾಜ್, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಜಯಸಿಂಹ ಕಾಟ್ರೋತ್, ಪೂರ್ಣಿಮ ಬಸವರಾಜ್ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು. ಎಸ್ಎಸ್ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಮಕ್ಕಳನ್ನು ಸನ್ಮಾನಿಸಲಾಯಿತು.