ಪ್ರಜಾಸೌಧದ ಮೇಲೆ ‘ಕಾಯಕವೇ ಕೈಲಾಸ’ ಫಲಕ

KannadaprabhaNewsNetwork |  
Published : Aug 17, 2025, 01:36 AM ISTUpdated : Aug 17, 2025, 01:37 AM IST
ಚಿತ್ರ 16ಬಿಡಿಆರ್‌2ಬೀದರ್‌ ನಗರದ ಜಿಲ್ಲಾಧಿಕಾರಿ ಕಚೇರಿಯ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಜಾಸೌಧ ಕಟ್ಟಡದ ಕಾಮಗಾರಿಯ ಆರಂಭದ ಕಾರ್ಯದ ಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಮಾಡಿದರು. | Kannada Prabha

ಸಾರಾಂಶ

ಸರ್ಕಾರದ ಕೆಲಸ ದೇವರ ಕೆಲಸ’ಎಂದು ರಾಜಧಾನಿಯ ವಿಧಾನಸೌಧದ ಮೇಲೆ ಬರೆಯಲಾಗಿದ್ದರೆ, ಬರುವ 18 ತಿಂಗಳಲ್ಲಿ ಬೀದರ್‌ ನಗರದಲ್ಲಿ ನಿರ್ಮಾಣ ಗೊಳ್ಳಲಿರುವ ಪ್ರಜಾಸೌಧದ ಮೇಲೆ ಕಾಯಕವೇ ಕೈಲಾಸ ರಾರಾಜಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

‘ಸರ್ಕಾರದ ಕೆಲಸ ದೇವರ ಕೆಲಸ’ಎಂದು ರಾಜಧಾನಿಯ ವಿಧಾನಸೌಧದ ಮೇಲೆ ಬರೆಯಲಾಗಿದ್ದರೆ, ಬರುವ 18 ತಿಂಗಳಲ್ಲಿ ಬೀದರ್‌ ನಗರದಲ್ಲಿ ನಿರ್ಮಾಣ ಗೊಳ್ಳಲಿರುವ ಪ್ರಜಾಸೌಧದ ಮೇಲೆ ಕಾಯಕವೇ ಕೈಲಾಸ ರಾರಾಜಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿಯ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಜಾಸೌಧ ಕಟ್ಟಡದ ಕಾಮಗಾರಿಯ ಆರಂಭದ ಕಾರ್ಯದ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಸರ್ಕಾರದ ಈ ಅವಧಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ 48.32 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲಾಗಿದ್ದು, ಮುಖ್ಯಮಂತ್ರಿಗಳು ಏಪ್ರಿಲ್‌ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದು, ಜಿಲ್ಲೆಯ ಜನರ ಹಲವು ದಶಕಗಳ ಕನಸು ಈಡೇರಿದಂತಾಗಿದೆ ಎಂದರು.

5 ಎಕರೆ 11 ಗುಂಟೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಜಾಸೌಧ 8 ಸರ್ಕಾರಿ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಬರುವಂತೆ ಮಾಡುವ ಯೋಜನೆ ಯಲ್ಲಿದ್ದು, ಮುಂದಿನ 18 ತಿಂಗಳಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಿ ಮುಖ್ಯಮಂತ್ರಿಗಳನ್ನು ಕರೆಯಿಸಿ ಉದ್ಘಾಟನೆ ನೆರವೇರಿಸುತ್ತೇವೆ ಎಂದು ಹೇಳಿದರು.

ಇನ್ನು, ಜಿಲ್ಲಾ ಪಂಚಾಯತ್‌ ನೂತನ ಕಟ್ಟಡಕ್ಕೂ ಸರ್ಕಾರದಿಂದ ಅನುದಾನ ತಂದು ಹೊಸ ಕಟ್ಟಡವನ್ನು ನಿರ್ಮಿಸಲಾಗುವದು ಹಾಗೆಯೇ ಬೀದರ್‌ ಮಹಾನಗರ ಪಾಲಿಕೆ ಕೇವಲ ಘೋಷಣೆಗೆ ಸೀಮಿತವಾಗದೇ ಅಗತ್ಯ ಕ್ರಮಗಳನ್ನು ಕೈಗೊಂಡು ಸ್ವಚ್ಛ ನಗರಿಯ ಪಟ್ಟವನ್ನು ಸಾಧಿಸುವ ಕೆಲಸವನ್ನು ಮಾಡುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪೌರಾಡಳಿತ ಸಚಿವ ರಹೀಮ್‌ ಖಾನ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವೊತ್ತೂ ಸುಮ್ಮನೇ ಘೋಷಣೆ ಮಾಡೋಲ್ಲ ಅವರು ನಮ್ಮ ಒತ್ತಡ ಎಷ್ಟೇ ಇದ್ದರೂ ಅನುದಾನ ಇಟ್ಟ ನಂತರ ಘೋಷಣೆ ಮಾಡುವುದಾಗಿ ಹೇಳಿ ಅದರಂತೆ ನಡೆದುಕೊಂಡರು ಎಂದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲಿ ಈ ಜಿಲ್ಲಾ ಸಂಕೀರ್ಣ ನಿರ್ಮಾಣದ ಯೋಜನೆಯಾಗಿತ್ತು, ಈ ಕಟ್ಟಡ ಗುಣಮಟ್ಟದಿಂದ ಕೂಡಿರಬೇಕು ಅದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ್‌ ಗೌಸ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಎಡಿಸಿ ಶಿವಾನಂದ ಕರಾಳೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶಂಕರ ಕಾಮಶೆಟ್ಟಿ ಮತ್ತು ಗುತ್ತಿಗೆದಾರ ಜಾವೇದ್‌ ಸೇರಿದಂತೆ ಮತ್ತಿತರರು ಇದ್ದರು.

2ನೇ ಹಂತಕ್ಕೂ ಅನುದಾನ ತರ್ತೇವೆ, ಮಹಾನಗರ ಪಾಲಿಕೆಗೆ 400 ಹುದ್ದೆಗಳು

ಪ್ರಜಾಸೌಧದ ಮೊದಲ ಹಂತದ ಕಾಮಗಾರಿ ಇದಾಗಿದ್ದು, ಇದರ ಹಿಂಭಾಗದಲ್ಲಿಯೂ ಎರಡನೇ ಹಂತದ ಕಾಮಗಾರಿಗೆ ನಮ್ಮ ಸರ್ಕಾರ ಅನುದಾನ ನೀಡುತ್ತೆ ಎಂಬ ಭರವಸೆ ಇದೆ. ಅದನ್ನು ತಂದೇ ತರುತ್ತೇನೆ, ನಗರಸಭೆಯ 2 ಎಕರೆ ಜಮೀನನ್ನು ಪ್ರಜಾಸೌಧಕ್ಕೆ ನೀಡಿದ್ದೇವೆ, ಮಹಾನಗರಸಭೆಗೆ 200 ಕೋಟಿ ರು. ಕೊಡಲೇಬೇಕೆಂದು ಸಿಎಂ ಅವರಿಗೆ ಆಗ್ರಹಿಸಿದ್ದೇನೆ ಶೀಘ್ರದಲ್ಲಿ ಅದೂ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದರು.

ಬೀದರ್‌ ಮಹಾನಗರ ಸಭೆಗೆ 400 ಹುದ್ದೆಗಳನ್ನು ಸೃಷ್ಟಿಸಿ ಆರ್ಥಿಕ ಇಲಾಖೆಯಿಂದ ಪರವಾನಿಗೆ ಪಡೆದು ಸರ್ಕಾರಿ ಆದೇಶ ಹೊರಡಿಸಿದ್ದೇವೆ, ಅತ್ಯುತ್ತಮ ಬೀದರ್‌ ಎಂಬ ಹೆಗ್ಗಳಿಗೆ ಪಡೆಯಲು ಎಲ್ಲ ಪ್ರಯತ್ನ ಮಾಡ್ತೇವೆ ಇನ್ನು ಆಯುಕ್ತರನ್ನಾಗಿ ಐಎಎಸ್‌ ಅಧಿಕಾರಿಯನ್ನು ತರುವ ಪ್ರಯತ್ನವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಜೊತೆಗೂಡಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಾವೇ ಎಷ್ಟೇ ಅಭಿವೃದ್ಧಿ ಮಾಡಿದರೂ ಸಣ್ಣದೊಂದು ಗಲಭೆ ಇಡೀ ವ್ಯವಸ್ಥೆಯನ್ನು ಹದೆಗೆಡಿಸುತ್ತದೆ. ಹೀಗಾಗಿ ಅಭಿವೃದ್ಧಿಯ ಜೊತೆ ಜೊತೆಗೆ ಸಹೋದರತ್ವ ಭಾವನೆ ನಮ್ಮ ಗುರಿಯಿದೆ. ಬೀದರ್‌ನಲ್ಲಿ ಕೋಮುವಾದಿ ವಿಷ ಬೀಜ ಬಿತ್ತುವವರನ್ನು ಮಟ್ಟ ಹಾಕುವದೇ ನಮ್ಮ ಪ್ರಥಮಾಧ್ಯತೆ ಎಂದು ಸಚಿವ ರಹೀಮ್‌ ಖಾನ್‌ ಹೇಳಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ