ತಾಯಿ, ಶಿಶು ಮರಣ ತಡೆಗೆ ‘ಕಿಲ್ಕಾರಿ’ ಸೇವೆ ಆರಂಭ: ಡಾ.ಸತೀಶ್ ಕುಮಾರ್

KannadaprabhaNewsNetwork |  
Published : Jun 21, 2026, 02:45 AM IST
ಚಿತ್ರ :  20ಎಂಡಿಕೆ3 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿದರು.  | Kannada Prabha

ಸಾರಾಂಶ

ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೋರಿದ್ದಾರೆ.

ಮಡಿಕೇರಿ: ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೋರಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ‘ಕಿಲ್ಕಾರಿ’ ಸೇವೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆ ಇದ್ದು, ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸರ್ಕಾರವು ಕಿಲ್ಕಾರಿ ಸೇವೆ ಜಾರಿಗೆ ತಂದಿದೆ. ಗರ್ಭಧಾರಣೆ, ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯದ ಮಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್ ಫೋನ್‌ಗೆ ತಲುಪಿಸಲಾಗುತ್ತದೆ ಎಂದು ಅವರು ವಿವರಿಸಿದರು. ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ‘ಕಿಲ್ಕಾರಿ’ ಎಂಬುದು ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಮೊಬೈಲ್ ಆಧಾರಿತ ಧ್ವನಿ ಸಂದೇಶ ಸೇವೆಯಾಗಿದೆ ಎಂದರು.

ಉಚಿತ ಮೊಬೈಲ್ ಆರೋಗ್ಯ ಸೇವೆ: ಕಿಲ್ಕಾರಿ ಮೈಸೂರು ವಿಭಾಗದ ಕಾರ್ಯಕ್ರಮ ಅಧಿಕಾರಿ ಗುರುಪಾದ ಅವರು ಮಾತನಾಡಿ, ಕಿಲ್ಕಾರಿ ಸೇವೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಚಿತ ಮೊಬೈಲ್ ಆರೋಗ್ಯ ಸೇವೆಯಾಗಿದೆ. ನವಜಾತ ಶಿಶುಗಳ ಆರೋಗ್ಯ, ಲಸಿಕೆ, ಪೌಷ್ಟಿಕ ಆಹಾರ ಮತ್ತು ತಾಯಿ ಮಗು ಸುರಕ್ಷತೆ ಕುರಿತು ಜಾಗೃತಿ ಮೂಡಿಸುವಲ್ಲಿ ನೋಂದಾಯಿತ ಫಲಾನುಭವಿ ಗರ್ಭಿಣಿಯರು ಹಾಗೂ ತಾಯಂದಿರಿಗೆ ಮಾಹಿತಿ ನೀಡಲಾಗುವುದು ಎಂದರು.

ಕಿಲ್ಕಾರಿಯಲ್ಲಿ ತಿಂಗಳಿಗೆ ಒಂದರಂತೆ ಒಟ್ಟು 18 ಕರೆಗಳು ಬರುತ್ತವೆ. ಗರ್ಭಿಣಿಯ ಸಮಯದಲ್ಲೇ 6 ಕರೆಗಳು (4ನೇ ತಿಂಗಳಿಂದ ಕರೆಗಳು ಪ್ರಾರಂಭವಾಗುತ್ತವೆ) ಹಾಗೂ ಮಗು ಜನಿಸಿದ ನಂತರ 12 ಕರೆಗಳು ಬರುತ್ತವೆ. ಕಿಲ್ಕಾರಿ ಸೇವೆಯ ಸದುಪಯೋಗ ಪಡೆಯಲು 14423 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. 1600403660 ಸಂಖ್ಯೆಯಿಂದ ನೋಂದಾಯಿತ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಕರೆ ಬರುತ್ತದೆ. ಫಲಾನುಭವಿಗಳು ಕರೆ ಸ್ವೀಕಾರ ಮಾಡಿ ಮಾಹಿತಿ ಪಡೆಯಬಹುದು. ಕರೆ ಸ್ವೀಕಾರ ಮಾಡದಿದ್ದಲ್ಲಿ ಕರೆ ಬ್ಲಾಕ್ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ ಹಾಗೂ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಇದ್ದರು. ಜಿಲ್ಲಾ ಎಂ.ಇ ವ್ಯವಸ್ಥಾಪಕರಾದ ಭೂಮಿಕ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿಗೆ ಪಿಎಂವಿಬಿಆರ್‌ವೈನಲ್ಲಿ 3.66 ಕೋಟಿ ರು.: ಕೋಟ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಪ್ರಥಮ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಯಶಸ್ವಿ