ಬೆಂಗಳೂರು : ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ ಎರಡೇ ದಿನದಲ್ಲಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ನಿಲುವು ಬದಲಿಸಿದ್ದಾರೆ.

‘ನನ್ನ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ. ಈ ತಿಂಗಳ 14ರಂದು ಸದನದಲ್ಲೇ ರಾಜೀನಾಮೆ ನೀಡುವೆ’ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತವರ ಸಂಪುಟದ ಕೆಲವು ಸಚಿವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಹೊರಟ್ಟಿ ಅವರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡರು ಎನ್ನಲಾಗಿದೆ.


ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ನಿಮ್ಮನ್ನು ಕೆಳಗೆ ಇಳಿಸುವುದು ಸರಿಯಲ್ಲ ಎಂದರು. ಯತೀಂದ್ರ ಸಭಾನಾಯಕ ಆಗಿದ್ದಾನೆ. ಅವನಿಗೆ ನಿಮ್ಮಂಥ ಹಿರಿಯರ ಸಲಹೆ ಬೇಕು ಎಂಬ ಮಾತನ್ನು ಹೇಳಿದ್ದರು. ಆದರೆ, ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ ಎಂದಿದ್ದಾರೆ. ನೋಡೋಣ ಆ.14ರಂದು ರಾಜೀನಾಮೆ ನೀಡುವ ಯೋಚನೆ ಇದೆ. ಅಂದು ವಿದಾಯ ಭಾಷಣ ಮಾಡುವೆ. ಕೊನೆಯಲ್ಲಿ ಏನಾದರೂ ಬದಲಾವಣೆಯಾದರೆ ಗೊತ್ತಿಲ್ಲ. ಆದರೆ, ಯಾರಿಗೂ ಈ ರೀತಿ ಆಗಿರಲಿಲ್ಲ’ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆ ಮಾಡಿ ರಾಜೀನಾಮೆ ನೀಡುವಂತೆ ಹೇಳಿದ್ದಾರೆ. 1956ರಿಂದ ಈವರೆಗೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ರಾಜೀನಾಮೆ ಕೊಟ್ಟ ನಿದರ್ಶನವಿಲ್ಲ. ಎಲ್ಲ ಸಭಾಪತಿಗಳು ಅವಧಿ ಪೂರ್ಣಗೊಳಿಸಿದ್ದಾರೆ. ನನ್ನ 46 ವರ್ಷದ ಅನುಭವದಲ್ಲಿ ಮೊದಲ ಬಾರಿಗೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಉಭಯ ಸದನಗಳ ಸಾಂವಿಧಾನಿಕ ಹುದ್ದೆಗಳಿಗೆ ಪಕ್ಷದ ಹೈಕಮಾಂಡ್‌ ಆಯ್ಕೆ ಮಾಡುವುದು ಸದನವನ್ನೇ ಹೈಜಾಕ್‌ ಮಾಡಿದಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೇಯ ಬೆಳವಣಿಗೆ ಅಲ್ಲ ಎಂದು ಇದೇ ವೇಳೆ ಹೊರಟ್ಟಿ ತಮ್ಮ ಅಸಮಾಧಾನದ ಮಾತುಗಳನ್ನು ಪುನರುಚ್ಚರಿಸಿದರು.

ಅವಿಶ್ವಾಸಕ್ಕೆ ಕಾರಣಗಳೇ ಇಲ್ಲ:

‘ನನ್ನ ಕಡೆಯಿಂದ ಯಾವುದೇ ತಪ್ಪು ಇಲ್ಲ. ಅವಿಶ್ವಾಸ ನಿರ್ಣಯ ಮಂಡಿಸಲು ಕಾರಣ ಇಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದು, ಅವರು ಮಂಡಿಸಲಿ. ಈಗ ನಾನು ಏನೂ ಹೇಳಲ್ಲ. ನಿಮ್ಮನ್ನು ಇಳಿಸುವುದು ನಮಗೂ ಇಷ್ಟವಿಲ್ಲ ಎಂದು ಹಲವು ಸಚಿವರು ಹೇಳಿದ್ದಾರೆ. ಕೆಪಿಪಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸಹ ಮನವೊಲಿಸಲು ಬಂದಿದ್ದರು. ವೈಯಕ್ತಿಕವಾಗಿ ನಿಮ್ಮನ್ನು ಇಳಿಸುವುದು ನನಗೂ ಇಷ್ಟವಿಲ್ಲ. ಆದರೆ, ಪಕ್ಷದ ಸೂಚನೆ ಮೇರೆಗೆ ಬಂದಿದ್ದೇನೆ ಎಂದು ಹೇಳಿದರು. ಎಲ್ಲರೂ ಹೀಗೆ ಹೇಳುತ್ತಾರೆ. ಹೈಕಮಾಂಡ್‌ ತೀರ್ಮಾನ ಎನ್ನುತ್ತಾರೆ. ಏನೇ ಇದ್ದರೂ ನನ್ನ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಸದನದಲ್ಲೇ ರಾಜೀನಾಮೆ ಕೊಡುತ್ತೇನೆ’ ಎಂದು ಹೊರಟ್ಟಿ ಹೇಳಿದರು.

ನಿರ್ಗಮನ ಹಾದಿ

- ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್‌ ಸಿದ್ಧತೆ ಆರಂಭಿಸಿತ್ತು

- ಮೊದಲು ರಾಜೀನಾಮೆ ನೀಡಲ್ಲ, ಅವಿಶ್ವಾಸ ಎದುರಿಸುವೆ ಎಂದಿದ್ದ ಹೊರಟ್ಟಿ

- ಆದರೆ ಬುಧವಾರ ತಡರಾತ್ರಿ ಸಿಎಂ ಡಿ.ಕೆ.ಶಿವಕುಮಾರ್ ಜತೆ ಹೊರಟ್ಟಿ ಚರ್ಚೆ

- ಕೆಲವು ಸಚಿವರ ಜತೆಗೂ ಸಭೆ, ಬಳಿಕ ರಾಜೀನಾಮೆಗೆ ಸಭಾಪತಿ ನಿರ್ಧಾರ