ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಪ್ರಖರ ಬಿಸಿಲಿನ ಹೊಡೆತಕ್ಕೆ ಬಾಯಾರಿಕೆಯಿಂದ ಬಳಲುತ್ತಿದ್ದ ಹಳ್ಳಿಗರ ಜಲಮೂಲ, ಕೃಷಿಕರ ಜೀವನಾಡಿ ಎನಿಸಿರುವ ಕೆರೆಗಳಲ್ಲಿ ಈಗ ನೀರು ಸಂಗ್ರಹಗೊಂಡಿದೆ. ಇದರೊಂದಿಗೆ ಕೆರೆಗಳ ತಳ ತಣಿದು ಜಲವೈಭವ ಸೃಷ್ಟಿಯಾಗಿದೆ. ಈ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಮುಂಗಾರು ಪೂರ್ವ ಮಳೆಯಿಂದ ಹುಕ್ಕೇರಿ ತಾಲೂಕಿನ ಕೆರೆಗಳಿಗೆ ಜೀವಕಳೆ ಬಂದಿದೆ. ನೀರಿಲ್ಲದೇ ಭಣಗುಡುತ್ತಿದ್ದ ಕೆರೆಗಳ ಒಡಲಲ್ಲಿ ಜೀವಜಲ ಶೇಖರಣೆಯಾಗಿದೆ. ಕಳೆದ ವರ್ಷ ಉಂಟಾದ ಭೀಕರ ಬರ ಪರಿಸ್ಥಿತಿಯಿಂದ ಕೆರೆ-ಕುಂಟೆ, ಕಳ್ಳ-ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದವು. ಇದೀಗ ಸುರಿದ ಪೂರ್ವ ಮುಂಗಾರು ಮಳೆ ನೀರಿನ ಸೆಲೆ ಮೂಡಿಸಿದೆ.ಗ್ರಾಮೀಣ ಜನರಿಗೆ ವರದಾನವಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರದಡಿ ಹೊಸ ಕೆರೆ ನಿರ್ಮಾಣ ಮತ್ತು ಹಳೆ ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಮೂಲಕ ಮಳೆ ನೀರು ಹಿಡಿದಿಟ್ಟು ಅಂತರ್ಜಲಮಟ್ಟ ಹೆಚ್ಚಿಸುವುದರೊಂದಿಗೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನರೇಗಾ ಉದ್ದೇಶ ಸಫಲವಾಗುವ ಆಶಾಭಾವ ಮೂಡಿಸಿದೆ.
ಮಹತ್ವಾಕಾಂಕ್ಷಿ ನರೇಗಾ ಯೋಜನೆಯ ಅಮೃತ ಸರೋವರದಡಿ 2023-24 ತಾಲೂಕಿನ 11 ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ₹1.92 ಕೋಟಿಗಳ ಅಂದಾಜು ಪತ್ರಿಕೆ ತಯಾರಿಸಿದ್ದು, ಈಗಾಗಲೇ ₹88.77 ಲಕ್ಷ ವೆಚ್ಚವಾಗಿದೆ. ಈ ಪೈಕಿ ಕೂಲಿ ಕಾರ್ಮಿಕರಿಗೆ ₹18.42 ಲಕ್ಷ ವೆಚ್ಚವಾದರೇ, ಸಾಮಗ್ರಿಗಾಗಿ ₹70.29 ಲಕ್ಷ ಖರ್ಚು ಮಾಡಲಾಗಿದೆ. ಜೊತೆಗೆ 5,829 ಮಾನವ ದಿನಗಳು ಸೃಜನೆಯಾಗಿವೆ.ತಾಲೂಕಿನ ಕರಿಕಟ್ಟಿಯಲ್ಲಿ ₹10 ಲಕ್ಷ, ಗುಡಸದಲ್ಲಿ ₹6 ಲಕ್ಷ, ಅಲದಾಳದಲ್ಲಿ ₹5 ಲಕ್ಷ ವೆಚ್ಚದಲ್ಲಿ ಹೊಸ ಕೆರೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರೆ ಯರನಾಳದಲ್ಲಿ ₹10 ಲಕ್ಷ, ದಡ್ಡಿಯಲ್ಲಿ ₹48 ಲಕ್ಷ, ಗುಡಸದಲ್ಲಿ ₹20 ಲಕ್ಷ, ಹೊಸೂರದಲ್ಲಿ ₹28 ಲಕ್ಷ, ಯರಗಟ್ಟಿಯಲ್ಲಿ ₹28 ಲಕ್ಷ, ಬಡಕುಂದ್ರಿಯಲ್ಲಿ ₹25 ಲಕ್ಷ, ರಕ್ಷಿಯಲ್ಲಿ ₹2 ಲಕ್ಷಗಳ ವೆಚ್ಚದಲ್ಲಿ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಕೆರೆಗಳಲ್ಲಿ ನೀರು ಸಂಗ್ರಹದಿಂದ ಜಲಚರ-ಜಾನುವಾರು, ಪಶು-ಪಕ್ಷಿಗಳಿಗೆ ಜೀವಸೆಲೆಯಾಗಿದೆ. ಅಷ್ಟೇ ಅಲ್ಲದೆ ಅಪಾರ ಪ್ರಮಾಣದ ಜಲಸಂಪತ್ತು ಮೈದುಂಬಿ ಜಲವೈಭವದ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಇದರೊಂದಿಗೆ ಹುಕ್ಕೇರಿ ತಾಲೂಕು ಪಂಚಾಯತಿಯು ಮಣ್ಣು, ನೀರು ಸಂರಕ್ಷಿಸುವಲ್ಲಿ ಮಹತ್ತರ ಸಾಧನೆ ಮಾಡಿದೆ. ಕೆರೆಗಳ ಒತ್ತುವರಿ ತೆರವು, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಆಯ್ದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ನೂರಾರು ಎಕರೆ ಪ್ರದೇಶ ನೀರಾವರಿಯಾಗಲಿದೆ. ಜತೆಗೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ.----------
ರೈತರ ಅನುಕೂಲಕ್ಕಾಗಿ ಮಣ್ಣು, ನೀರು ಸಂರಕ್ಷಣೆ ಮಾಡಲು ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.-ರಾಹುಲ್ ಶಿಂಧೆ, ಜಿಪಂ ಸಿಇಒ.
ದುಡಿಯುವ ಕೈಗಳಿಗೆ ಸ್ಥಳೀಯವಾಗಿಯೇ ಕೆಲಸ ಸಿಗುವುದರ ಜತೆಗೆ ಆಸ್ತಿ ಸೃಜನೆಗೆ ಒತ್ತು ನೀಡಲಾಗಿದೆ. ಕೆರೆಗಳ ನಿರ್ಮಾಣಕ್ಕೆ ಮಾನವ ಸಂಪನ್ಮೂಲ ಕೂಡ ಬಳಸಿಕೊಳ್ಳಲಾಗಿದೆ.-ಟಿ.ಆರ್.ಮಲ್ಲಾಡದ, ಇಒ ತಾಪಂ.ನೀರು ಅಮೃತವಿದ್ದಂತೆ. ನೀರು ಇಲ್ಲದಿದ್ದರೆ ಭೂಮಿ ಬರಡಾಗುವುದು. ಬರಡಾದ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಭೂಮಿ ಬರಡಾಗುವುದನ್ನು ತಪ್ಪಿಸಲು ಹಾಗೂ ಜೀವಿಗಳನ್ನು ಬದುಕಿಸಲು ನೀರು ಅವಶ್ಯಕ. ಈ ಎಲ್ಲ ಅಂಶಗಳನ್ನು ಗಮನಿಸಿ ಕೆರೆಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
-ಪಿ.ಲಕ್ಷ್ಮೀನಾರಾಯಣ, ನರೇಗಾ ಸಹಾಯಕ ನಿರ್ದೇಶಕ ಹಾಗೂ ಅರ್ಷದ್ ನೇರ್ಲಿ ತಾಂತ್ರಿಕ ಸಂಯೋಜಕರು.