ತಿರುಪತಿಗೆ ತೆರಳುತ್ತಿದ್ದ ಕಾರು ಪಲ್ಟಿ: ನಾಲ್ವರು ದಾರುಣ ಸಾವು

| Published : May 25 2024, 12:46 AM IST

ಸಾರಾಂಶ

ತಿರುಪತಿಗೆ ತೆರಳುತ್ತಿದ್ದ ಎರಟಿಗಾ ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಹಾಗೂ ಒಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ನಾಲ್ಕು ಜನರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ತಡರಾತ್ರಿ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಹಳೇ ಅಂತರವಳ್ಳಿ ಬ್ರಿಡ್ಜ್ ಹತ್ತಿರ ಸಂಭವಿಸಿದೆ.

ರಾಣಿಬೆನ್ನೂರು: ತಿರುಪತಿಗೆ ತೆರಳುತ್ತಿದ್ದ ಎರಟಿಗಾ ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಹಾಗೂ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ನಾಲ್ಕು ಜನರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ತಡರಾತ್ರಿ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಹಳೇ ಅಂತರವಳ್ಳಿ ಬ್ರಿಡ್ಜ್ ಹತ್ತಿರ ಸಂಭವಿಸಿದೆ.

ಘಟನೆಯಲ್ಲಿ ಸುರೇಶ ವೀರಪ್ಪ ಜಾಡಿ, ಐಶ್ವರ್ಯ ಹೊನ್ನಪ್ಪ ಬಾರ್ಕಿ, ಚೇತನಾ ಪ್ರಭುರಾಜ ಸಮಗೊಂಡಿ, ಪವಿತ್ರಾ ಪ್ರಭುರಾಜ ಸಮಗೊಂಡಿ (ಎಲ್ಲರೂ ಹಾವೇರಿ) ಮೃತಪಟ್ಟಿದ್ದಾರೆ.

ಎಲ್ಲರೂ ದೇವರಿಗೆ ಹರಕೆ ತೀರಿಸುವ ಸಲುವಾಗಿ ಹಾವೇರಿಯಿಂದ ತಿರುಪತಿಗೆ ಎರಟಿಗಾ ಕಾರಿನಲ್ಲಿ ಹೊರಟಿದ್ದರು. ಕಾರು ಚಾಲಕನು ರಾಣಿಬೆನ್ನೂರು ಬಳಿ ಅತೀ ವೇಗವಾಗಿ ವಾಹನ ಚಲಾಯಿಸುತ್ತಾ ನಿದ್ದೆ ಮಂಪರಿನಲ್ಲಿ ನಿಯಂತ್ರಣ ತಪ್ಪಿದ್ದರಿಂದ ಎಡಭಾಗದ ಗಟಾರ ದಾಟಿ ಸರ್ವಿಸ್ ರಸ್ತೆಯ ಮೇಲೆ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸಾವಿತ್ರಿ ಸುರೇಶ ಜಾಡಿ, ವಿಕಾಸ ಹೊನ್ನಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗೊಂಡಿ, ಗೀತಾ ಹೊನ್ನಪ್ಪ ಬಾರ್ಕಿ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚನ್ನವೀರೇಶ ಸುರೇಶ ಜಾಡಿ, ಹೊನ್ನಪ್ಪ ನೀಲಪ್ಪ ಬಾರ್ಕಿ ಅವರಿಗೆ ರಾಣಿಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ, ಶಹರ ಠಾಣೆ ಸಿಪಿಐ ಪ್ರವೀಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಪೂರ್ವ ವಲಯ ಐಜಿಪಿ ಡಾ. ಕೆ. ತ್ಯಾಗರಾಜನ್, ಹಾವೇರಿ ಎಸ್‌ಪಿ ಅಂಶುಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.