ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಬಹುತೇಕ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢವಾಗಿ ಜೀವನ ಸಾಗಿಸುವ ಅವಕಾಶ ಲಭಿಸಿದೆ ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ಕೆ ಪಿ ಚಂದ್ರಕಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಬಹುತೇಕ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢವಾಗಿ ಜೀವನ ಸಾಗಿಸುವ ಅವಕಾಶ ಲಭಿಸಿದೆ ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ಕೆ ಪಿ ಚಂದ್ರಕಲಾ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಲಾದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸರ್ಕಾರಕ್ಕೆ ಸಮಾನಾಂತರ ವಾಗಿ ಯೋಜನೆಗಳನ್ನು ತಳಮಟ್ಟದ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ತಲುಪಿಸುವಲ್ಲಿ ಕ್ಷೇತ್ರ ಯೋಜನೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದ ಅವರು, ಕ್ಷೇತ್ರದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಶಿಕ್ಷಕಿ ಎನ್ ಕೆ ಮಾಲಾ ದೇವಿ ಅವರು ಮಾತನಾಡಿ, ಆರೋಗ್ಯವಂತ ಕುಟುಂಬದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.ಇದೇ ಸಂದರ್ಭ ಮಕ್ಕಳ ಸಂಜೀವಿನಿ ಎಂದೇ ಖ್ಯಾತಿ ಗಳಿಸಿರುವ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಭೂಮಿಕಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಫಿಲೋಮಿನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ವಿ ಡಿ ಪುಂಡರಿಕಾಕ್ಷ, ಎ ಪಿ ಸಿ ಎಂ ಎಸ್ ಉಪಾಧ್ಯಕ್ಷೆ ಎಚ್‌ ಟಿ ಚಂದ್ರಕಲಾ, ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಕುಶಾಲನಗರ ವಲಯ ಮೇಲ್ವಿಚಾರಕರಾದ ನಾಗರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಇದ್ದರು. ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ, ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ಜರುಗಿದವು.