ಬಿತ್ತನೆ ಬೀಜಕ್ಕಾಗಿ ರೈತರು ಆತಂಕಪಡುವ ಅಗತ್ಯವಿಲ್ಲ-ಸಂಗಮೇಶ

| Published : May 25 2024, 12:46 AM IST

ಸಾರಾಂಶ

ಬಿತ್ತನೆ ಬೀಜ ಮತ್ತು ರಸಗೊಬ್ಬರದ ಯಾವುದೇ ರೀತಿಯ ಕೊರತೆ ಇಲ್ಲ. ತಾಲೂಕಿನ ಎಲ್ಲ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದ್ದು, ರೈತರು ಬಿತ್ತನೆ ಬೀಜಕ್ಕಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದರು.

ಹಾನಗಲ್ಲ: ಬಿತ್ತನೆ ಬೀಜ ಮತ್ತು ರಸಗೊಬ್ಬರದ ಯಾವುದೇ ರೀತಿಯ ಕೊರತೆ ಇಲ್ಲ. ತಾಲೂಕಿನ ಎಲ್ಲ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದ್ದು, ರೈತರು ಬಿತ್ತನೆ ಬೀಜಕ್ಕಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದರು.

ಹಾನಗಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ತಾಲೂಕಿನ ರೈತರಿಗೆ ಸಹಾಯ ಧನದ ಆಧಾರದಲ್ಲಿ ಕೃಷಿ ಇಲಾಖೆಯಿಂದ ವಿತರಿಸುತ್ತಿರುವ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.ಉತ್ತಮ ಮುಂಗಾರು ಮಳೆ ಆರಂಭವಾಗಿದ್ದು, ಭೂಮಿ ಹದಗೊಳಿಸಿಕೊಂಡು ತೇವಾಂಶವನ್ನು ಅನುಸರಿಸಿ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಬೇಕು. ಕೃಷಿ ಬೆಳೆಗಳಿಗೆ ಸಮಗ್ರ ಪೋಷಕಾಂಶ ಒದಗಿಸಿದರೆ ಉತ್ತಮ ಬೆಳೆ ಸಾಧ್ಯ. ರೋಗಗಳಿಂದಲೂ ಮುಕ್ತಿ ಸಾಧ್ಯ. ಕಾಂಪ್ಲೆಕ್ಸ್‌ ರಸಗೊಬ್ಬರ ಬಳಕೆ ಅಗತ್ಯವಿದೆ. ರೈತರು ಪ್ರಮಾಣೀಕೃತವಲ್ಲದ ಬೀಜ ಖರೀದಿಯ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಖರೀದಿಸಿದ ಬಿತ್ತನೆ ಬೀಜಗಳ ಬಗೆಗೆ ಖಾತ್ರಿಪಡಿಸಿಕೊಳ್ಳುವುದು ತೀರಾ ಅವಶ್ಯ. ನಮ್ಮ ಭೂಮಿ ನೀರಿನ ಮೂಲಗಳನ್ನು ಆಧರಿಸಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂತಹದ್ದೇ ಸಂದರ್ಭದಲ್ಲಿ ಕೀಟನಾಶಕಗಳನ್ನು ಬಳಸುವಾಗಲೂ ತೀವ್ರ ಎಚ್ಚರಿಕೆ ಅತ್ಯಗತ್ಯ. ಬಳಸುವ ಪ್ರಮಾಣದ ಬಗೆಗೂ ಗಮನ ಹರಿಸಬೇಕು. ಕೃಷಿ ಇಲಾಖೆ ಎಲ್ಲ ಸಂದರ್ಭದಲ್ಲಿ ರೈತರ ಸಹಾಯಕ್ಕೆ ಸಿದ್ಧವಿದೆ. ಕೃಷಿಗೆ ಸಂಬಂಧಿಸಿ ಸಲಹೆಗಳಿಗಾಗಿ ಕೃಷಿ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಕೃಷಿ ಇಲಾಖೆಯ ರಾಮನಗೌಡ ಪಾಟೀಲ, ವಿಜಯ ಅಪ್ಪಾಜಿ, ರಿಯಾಜ್ ಮಾಸನಕಟ್ಟಿ, ಮೌನೇಶ ಚನ್ನಾಪೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.