ಕೊಠಡಿ ಕೊರತೆ : ದೇವಾಲಯದಲ್ಲಿ ಮಕ್ಕಳಿಗೆ ಪಾಠ

KannadaprabhaNewsNetwork |  
Published : Jun 25, 2025, 11:49 PM ISTUpdated : Jun 26, 2025, 12:48 PM IST
25ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ದೇವರಗುಟ್ಟಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಕೊಠಡಿ ಕೊರತೆಯಿಂದ ದೇವಾಲಯ ಆವರಣದಲ್ಲಿ ಕುಳಿತು ಪಾಠ ಕೇಳುತ್ತಿರುವುದು. | Kannada Prabha

ಸಾರಾಂಶ

ಆಧುನಿಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ. ಆದರೆ ಈಗಲೂ ಕೆಲವು ಸರ್ಕಾರಿ ಶಾಲೆಗಳು ಸ್ವಂತ ಕಟ್ಟಡವಿಲ್ಲದೆ ದೇವಾಲಯದ ಪ್ರಾಂಗಣದಲ್ಲಿ ಶಿಕ್ಷಣ ಪಡೆಯುತ್ತಿರುವುದನ್ನು ಕಾಣಬಹುದಾಗಿದೆ.

 ಬಂಗಾರಪೇಟೆ :  ಆಧುನಿಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ. ಆದರೆ ಈಗಲೂ ಕೆಲವು ಸರ್ಕಾರಿ ಶಾಲೆಗಳು ಸ್ವಂತ ಕಟ್ಟಡವಿಲ್ಲದೆ ದೇವಾಲಯದ ಪ್ರಾಂಗಣದಲ್ಲಿ ಶಿಕ್ಷಣ ಪಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ ಮೂಲಭೂತ ಸೌಕರ್ಯಗಳು ಸೇರಿ ಎಲ್ಲಾ ರೀತಿಯಲ್ಲೂ ಅಭಿವೃದ್ದಿ ಕಂಡಿದೆ ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳೂ ಭಾಷಣ ಮಾಡುತ್ತಾರೆ. ವಾಸ್ತವಿಕ ಪರಿಸ್ಥಿತಿಯೇ ಬೇರೆ ಇದೆ.

ಮಕ್ಕಳಿಗೆ ಸರ್ಕಾರಿ ಸೌಲಭ್ಯ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತ್ರ, ಶೂ ಸೇರಿ ಹಲವು ಯೋಜನೆಗಳನ್ನು ನೀಡುವುದರ ಜೊತೆಗೆ ಅವರ ಕಲಿಕೆಗೆ ಉತ್ತೇಜನ ಸಹ ನೀಡಲಾಗುತ್ತಿದೆ. ಆದರೆ ಬಹಳ ಮುಖ್ಯವಾಗಿ ಪಾಠ ಕೇಳಲಿಕ್ಕೆ ಸರಿಯಾದ ಶಾಲಾ ಕಟ್ಟಡವೇ ಇಲ್ಲದ ಕಾರಣ ಸರ್ಕಾರದ ಸಾಲು ಸಾಲು ಶೈಕ್ಷಣಿಕ ಯೋಜನೆಗಳು ವ್ಯರ್ಥವಾಗುತ್ತಿವೆ.

ಇದಕ್ಕೊಂದು ತಾಜಾ ಉದಾಹರಣೆ ತಾಲೂಕಿನ ಗಡಿಭಾಗದ ದೇವರಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೂ 35 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಗ್ರಾಮದ ಮಕ್ಕಳಿಗೆ ಭೋಧಿಸಲು ಕಾಯಂ ಶಿಕ್ಷಕರೇ ಇಲ್ಲ. ಬದಲಾಗಿ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಮಕ್ಕಳು ಕೂತು ಪಾಠ ಪ್ರವಚನ ಕೆಳಲಿಕ್ಕೆ ಇರುವುದು ಕೇವಲ ಒಂದೇ ಕೊಠಡಿ. ಅದೂ ಸಹ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಯಾವಾಗ ಬೀಳುತ್ತದೆಯೋ ಎಂಬ ಭಯದಲ್ಲಿ ಮಕ್ಕಳು ಕೂತು ಪಾಠ ಕೇಳಬೇಕಿದೆ.

ದೇವಾಲಯದಲ್ಲಿ ತರಗತಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಕಾರಣ ಒಂದೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಪ್ರವಚನ ನಡೆಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಒಬ್ಬ ಶಿಕ್ಷಕರು ಶಾಲೆಯ ಕೊಠಡಿಯಲ್ಲಿ ಪಾಠ ಮಾಡಿದರೆ ಮತ್ತೊಬ್ಬ ಶಿಕ್ಷಕರು ಗ್ರಾಮದ ಗಂಗಮ್ಮ ದೇವಾಲಯದ ಪ್ರಾಂಗಣದಲ್ಲಿ ತರಗತಿಗಳನ್ನು ನಡೆಸುವುದು ಕಳೆದ ಐದಾರು ವರ್ಷಗಳಿಂದ ಮಾಮೂಲಿಯಾಗಿದೆ. ಶಾಲೆಯಲ್ಲಿ ಕೇವಲ ಒಂದೇ ಶೌಚಾಲಯವಿದ್ದು, ಎಲ್ಲ ವಿದ್ಯಾರ್ಥಿಗಳು ಶೌಚಾಲಯ ಬಳಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಕ್ಕಳು ಬಯಲಿನಲ್ಲಿ‌ ಶೌಚಾಲಯಕ್ಕೆ ಹೋಗಬೇಕಿದೆ. ಜೊತೆಗೆ ಮಕ್ಕಳು ಆಟವಾಡಲು ಮೈದಾನ ಇಲ್ಲದ ಕಾರಣ, ಕ್ರೀಡಾ ಚಟುವಟಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಶಾಲೆಯ ಕಟ್ಟಡ ಶಿಥಿಲಶಾಲೆಯ ಕಟ್ಟಡ ಶಿಥಲಗೊಂಡಿದ್ದು ಮಕ್ಕಳ ಶಿಕ್ಷಣಕ್ಕೆ ಕಷ್ಟವಾಗುತ್ತಿದ್ದು, ನೂತನ ಕಟ್ಟಡವನ್ನು‌ ನಿರ್ಮಿಸಿಕೊಡಲು ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಸರ್ಕಾರಿ ಶಾಲೆಗಳ ಸ್ಥಿತಿ ಹೀಗಿದ್ದರೆ ಪೋಷಕರು ತಮ್ಮ ಮಕ್ಕಳನ್ನು ಹೇಗ ತಾನೆ ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಾರೆ, ಶಿಕ್ಷಕರಿದ್ದರೆ ಕಟ್ಟಡವಿರಲ್ಲ, ಎರಡೂ ಇದ್ದರೆ ಮಕ್ಕಳಿರುವುದಿಲ್ಲ ಎಂಬಂತಾಗಿದೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗ್ರಾಮದಲ್ಲಿ ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಿಸಿಕೊಡಬೇಕೆಂದು ದೇವರಗುಟ್ಟಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Read more Articles on

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ