ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ 6ನೇ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ (ಲ್ಯಾಂಪ್ ಲೈಟಿಂಗ್) ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್‍ಯಕ್ರಮವನ್ನು ಉಡುಪಿ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿತಾ ಸಿ. ರಾವ್ ಉದ್ಘಾಟಿಸಿ ದರು. ನಂತರ ಆಧುನಿಕ ನರ್ಸಿಂಗ್‌ಗೆ ಫ್ಲಾರೆನ್ಸ್ ನೈಟಿಂಗೇಲ್ ನೀಡಿದ ಗಮನಾರ್ಹ ಕೊಡುಗೆ ಸ್ಮರಿಸುವ ಸಲುವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನರ್ಸಿಂಗ್ ವೃತ್ತಿಯ ನೈತಿಕ ಮಾನದಂಡಗಳು, ಮೌಲ್ಯಗಳು ಮತ್ತು ಜವಾಬ್ದಾರಿ ಎತ್ತಿಹಿಡಿಯಲು ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಪ್ರಮಾಣವಚನ ಬೋಧಿಸಿದರು. ಅಧ್ಯಕ್ಷತೆ ವಹಿಸಿದ್ದ ಐಎಂಜೆ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್.ಎನ್. ಭಟ್ ನೂತನ ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳಿಗೆ ಬದ್ಧರಾಗಿರಲು ಮತ್ತು ನರ್ಸಿಂಗ್ ವೃತ್ತಿಯ ಘನತೆಯನ್ನುಎತ್ತಿ ಹಿಡಿಯಬೇಕು ಎಂದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಶ್ರೀ ಕೆ.ಎಸ್. ಉಪಸ್ಥಿತರಿದ್ದರು, ಪ್ರಾಧ್ಯಾಪಕಿ ಚೇತನಾ ಸ್ವಾಗತಿಸಿದರು. ಪೀಡಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ವಂದಿಸಿದರು. ಪವಿತ್ರಾ ನಿರೂಪಿಸಿದರು.