ಬೆಂಗಳೂರು : ತಿರುಪತಿ ತಿರುಮಲ ಸನ್ನಿಧಾನಕ್ಕೆ ಪ್ರತಿ ನಿತ್ಯ 12.5 ಟನ್ ನಂದಿನಿ ತುಪ್ಪ ಸರಬರಾಜು ಮಾಡುವ ಕಾರ್ಯಕ್ಕೆ ಮಾಜಿ ಸಂಸದರೂ ಆಗಿರುವ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಬುಧವಾರ ಹಸಿರು ನಿಶಾನೆ ತೋರಿದರು.
ತುಪ್ಪ ಪೂರೈಸುವ ವಾಹನಕ್ಕೆ ಹಸಿರು ಬಾವುಟ
ಆಡುಗೋಡಿಯ ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ಕಚೇರಿಯಲ್ಲಿ ತಿರುಪತಿಗೆ ತುಪ್ಪ ಪೂರೈಸುವ ವಾಹನಕ್ಕೆ ಹಸಿರು ಬಾವುಟ ತೋರಿಸಿ ಬೀಳ್ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿವರ್ಷ ಕೆಎಂಎಫ್‌ನಿಂದ ತುಪ್ಪ ಸರಬರಾಜು ಮಾಡಲಾಗುತ್ತಿತ್ತು. ನಾವು 136 ಕೋಟಿ ರು.ಗೆ ಟೆಂಡರ್ ಪಡೆದಿದ್ದು ಪ್ರತಿನಿತ್ಯ 12.5 ಟನ್‌ನಂತೆ 6 ತಿಂಗಳು ಸರಬರಾಜು ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ತುಪ್ಪ ಸರಬರಾಜು
ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ತುಪ್ಪ ಸರಬರಾಜು ಮಾಡುತ್ತಿದೆ. ಸಾಗಣೆಗೆ ಡಿಜಿಟಲ್ ಲಾಕ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ನಾವು ನೀಡಿದ ಪಾಸ್‌ವರ್ಡ್ ನಮೂದಿಸಿದರಷ್ಟೇ ಲಾಕರ್ ತೆರೆಯಬಹುದು. ಶ್ರೀ ವೆಂಕಟೇಶ್ವರ ಸ್ವಾಮಿ, ಪದ್ಮಾವತಿ ಅಮ್ಮನವರ ಆಶೀರ್ವಾದ ನಮ್ಮ ನಂದಿನಿ ಮೇಲೆ ಇರುವ ಕಾರಣಕ್ಕೆ ಇದು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
