ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲೆಕ್ಟ್ರಿಕ್ ಅಂಗಡಿ ಮಾಲಿಕನ ಮನೆಗೆ ಕನ್ನ ಹಾಕಿದ್ದ ಖದೀಮರನ್ನು 4 ರಾಜ್ಯಗಳಲ್ಲಿ ಸುಮಾರು 7000 ಕಿ.ಮೀ. ಬೆನ್ನತ್ತಿ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.ರಾಜಸ್ಥಾನ ಮೂಲದ ಕರಣ್ ರಾಮ್ ಅಲಿಯಾಸ್ ಕನ್ಯಾ ದೇವಸಿ, ಲಕ್ಮ ರಾಮ್ ಅಲಿಯಾಸ್ ಲಕ್ಕಿ ದೇವಸಿ ಹಾಗೂ ಗೋಪಾಲ್ ಬಂಧಿತರು. ಆರೋಪಿಗಳಿಂದ 187 ಗ್ರಾಂ ಚಿನ್ನಾಭರಣ, 1.371 ಕೆಜಿ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿದಂತೆ 33.5 ಲಕ್ಷ ರು.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚಿಗೆ ನಗರದ ಮುದ್ದಿನಪಾಳ್ಯ ಮುಖ್ಯರಸ್ತೆಯ ಬೈರೇಗೌಡ ಲೇಔಟ್‌ನಲ್ಲಿ ನೆಲೆಸಿರುವ ವ್ಯಾಪಾರಿ ರಾಕೇಶ್ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ಕಳ್ಳರ ಬೇಟೆಗೆ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಮಾರ್ಗದರ್ಶನದಲ್ಲಿ ಎಸಿಪಿ ಉದಯ್ ಭಾಸ್ಕರ್ ಸಾರಥ್ಯದಲ್ಲಿ ಇನ್ಸ್‌ಪೆಕ್ಟರ್ ಡಿ.ಕೆ.ಲತೇಶ್ ಕುಮಾರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಭಗವಂತ್ ರಾವ್ ಪಾಟೀಲ್ ತಂಡವು ಕಾರ್ಯಾಚರಣೆಗೆ ಇಳಿದಿತ್ತು. ಕೊನೆಗೆ ಸತತವಾಗಿ ಜಾಲತಾಣಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕಾರ್ಯಾಚರಣೆ ಹೇಗೆ?
ಬೈರೇಗೌಡ ಲೇಔಟ್‌ನಲ್ಲಿ ಕುಟುಂಬದ ಜತೆ ನೆಲೆಸಿರುವ ರಾಜಸ್ಥಾನ ಮೂಲದ ರಾಕೇಶ್ ಅವರು, ಮುದ್ದೀನಪಾಳ್ಯ ಸಮೀಪ ಎಲೆಕ್ಟ್ರಿಕಲ್ ವಸ್ತುಗಳ ಮಾರಾಟ ಮಳಿಗೆ ಇಟ್ಟಿದ್ದಾರೆ. ತಮ್ಮ ಅಂಗಡಿ ವಹಿವಾಟನ್ನು ದಂಪತಿಯೇ ನಡೆಸುತ್ತಾರೆ. ಅಂತೆಯೇ ಜೂ.24 ರಂದು ಅಂಗಡಿಗೆ ರಾಕೇಶ್ ದಂಪತಿ ತೆರಳಿದ್ದಾಗ ಅವರ ಮನೆ ಬೀಗ ಮುರಿದು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳ್ಳರ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕರಣ್ ಗ್ಯಾಂಗ್ ಬಗ್ಗೆ ಸುಳಿವು ಸಿಕ್ಕಿದೆ. ಈ ಕಳ್ಳರ ಬೆನ್ನತ್ತಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ರಾಜಸ್ಥಾನ ಸುತ್ತಾಡಿ ಅಂತಿಮವಾಗಿ ಕದ್ದ ಮಾಲೀನ ಸಮೇತ ಖದೀಮರು ಖಾಕಿ ಬಲೆಗೆ ಬಿದ್ದಿದ್ದಾರೆ.
ಕಳ್ಳತನ ನಡೆದಿದ್ದು ಹೀಗೆ:
ಕರಣ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಹಲವು ವರ್ಷಗಳಿಂದ ಹಣದಾಸೆಗೆ ಅಪರಾಧ ಕೃತ್ಯಗಳಲ್ಲಿ ಆತ ತೊಡಗಿದ್ದಾನೆ. ಈ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಆತನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಕರಣ್, ತನ್ನ ಚಾಳಿಯನ್ನು ಮುಂದುವರೆಸಿದ್ದ. ಹಣದ ಆಮಿಷವೊಡ್ಡಿ ರಾಜಸ್ಥಾನ ಮೂಲದ ತನ್ನ ಇಬ್ಬರು ಸ್ನೇಹಿತರನ್ನು ಮನೆಗಳ್ಳತನ ಕೃತ್ಯಗಳಿಗೆ ಕರಣ್ ಬಳಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.ಕಾಮಾಕ್ಷಿಪಾಳ್ಯ ಸಮೀಪ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಅಂಗಡಿಯಲ್ಲಿ ಕರಣ್ ಕೆಲಸ ಮಾಡುತ್ತಿದ್ದ. ಅಲ್ಲಿ ದುಡಿಯುತ್ತಲೇ ವಸತಿ ಪ್ರದೇಶಗಳಲ್ಲಿ ಸುತ್ತಾಡಿ ಶ್ರೀಮಂತರ ಮನೆಗಳನ್ನು ಕರಣ್ ಗುರುತಿಸುತ್ತಿದ್ದ. ಈ ಕಳ್ಳತನ ಕೃತ್ಯಕ್ಕೆ 20 ದಿನಗಳ ಮುನ್ನ ನಗರಕ್ಕೆ ರಾಜಸ್ಥಾನದಿಂದ ಬಂದಿಳಿದ ಲಕ್ಮ ಹಾಗೂ ಗೋಪಾಲ್, ಬಳಿಕ ಕಗ್ಗಲಿಪುರದಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿ ಕೋಣೆಯಲ್ಲಿ ವಾಸ್ತವ್ಯ ಹೂಡಿದಿದ್ದರು. ಖಾಸಗಿ ಕಾಲೇಜಿನಲ್ಲಿ ಆತ ಬಿಸಿಎ ಓದುತ್ತಿದ್ದಾನೆ. ಕೆಲಸದ ನೆಪ ಹೇಳಿ ಆತನ ಬೈಕ್ ಪಡೆದು ರಾಕೇಶ್ ಮನೆ ಬಳಿ ಸುತ್ತಾಡಿ ಅವರು ‘ರೆಕ್ಕಿ’ ಮಾಡಿದ್ದರು. ಜೂ.24 ರಂದು ತಮ್ಮ ಸಂಚನ್ನು ಕಾರ್ಯರೂಪಕ್ಕಿಳಿಸಿ ರಾಕೇಶ್ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಇನ್‌ಸ್ಟಾಗ್ರಾಂ ನೀಡಿದ ಸುಳಿವುಈ ಕೃತ್ಯದ ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳು ಬಳಸಿದ್ದ ಬೈಕ್ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಈ ಬೈಕ್ ನೋಂದಣಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳ ಸ್ನೇಹಿತ ಬಿಸಿಎ ವಿದ್ಯಾರ್ಥಿ ಪತ್ತೆಯಾಗಿದ್ದಾನೆ. ಆತನನ್ನು ವಶಕ್ಕೆ ಪಡೆದು ಪೊಲೀಸರು, ಈ ಸ್ನೇಹಿತನ ಮೂಲಕ ಕರಣ್ ಗ್ಯಾಂಗ್‌ಗೆ ಗಾಳ ಹಾಕಿದೆ.
ಅಷ್ಟರಲ್ಲಿ ಕಳ್ಳರು ನಗರ ತೊರೆದು ರಾಜಸ್ಥಾನ ಹಾದಿ ತುಳಿದಿದ್ದರು. ಆದರೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ ಆರೋಪಿಗಳು ವೈಫೈ ಬಳಸಿ ಇನ್‌ಸ್ಟಾಗ್ರಾಂ ಮೂಲಕ ಗೆಳೆಯರ ಜತೆ ಸಂಪರ್ಕದಲ್ಲಿದ್ದರು. ಆರೋಪಿಗಳ ಇನ್‌ಸ್ಟಾಗ್ರಾಂ ಖಾತೆಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಕೃತ್ಯಕ್ಕೂ ಮುನ್ನ ಕಗ್ಗಲಿಪುರದ ಬಾರ್‌ನಲ್ಲಿ ಮದ್ಯ ಸೇವಿಸಿ ಗೆಳೆಯನ ಮೂಲಕ ಹಣವನ್ನು ಅವರು ಪಾವತಿಸಿದ್ದರು. ಆಗ ಬಾರ್ ಸಿಬ್ಬಂದಿ ಮೊಬೈಲ್‌ನಿಂದ ಗೆಳೆಯನಿಗೆ ಫೋನ್ ಪೇ ಸ್ಕ್ಯಾನರ್ ಅನ್ನು ಕಳುಹಿಸಿದ್ದರು. ಬಾರ್ ಸಿಬ್ಬಂದಿಯಿಂದ ಆರೋಪಿಗಳ ಸ್ನೇಹಿತನ ಮೊಬೈಲ್ ಸಂಖ್ಯೆ ಸಿಕ್ಕಿತು.ಈ ತಾಂತ್ರಿಕ ಮಾಹಿತಿ ಪಡೆದು ಸ್ಥಳೀಯ ಪೊಲೀಸರ ಸಹಕಾರದಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಲಕ್ಮ ರಾಮ್‌ನನ್ನು ಸೆರೆ ಹಿಡಿದ ಪೊಲೀಸರು, ಇನ್ನುಳಿದವನ್ನು ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಬಂಧಿಸಿದರು. ಬಳಿಕ ತಮಿಳುನಾಡಿನಲ್ಲಿ ಬಚ್ಚಿಟ್ಟಿದ್ದ ಕದ್ದ ಮಾಲನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.